TOP NEWS

West Bengal: ಬಂಗಾಳ ಗಡಿಯಲ್ಲಿ ನುಸುಳುವಿಕೆಗೆ ಬ್ರೇಕ್: ಬಿಎಸ್‌ಎಫ್‌ಗೆ ಭೂಮಿ ನೀಡಲು ಸಿಎಂ ಸುವೇಂದು ಅಧಿಕಾರಿ ಗ್ರೀನ್ ಸಿಗ್ನಲ್!

west bengal suvendu adhikari ready to give land to bsf

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಚುಕ್ಕಾಣಿ ಹಿಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ರಾಜ್ಯದ ಭದ್ರತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ತಂತಿ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು, ಅಗತ್ಯವಿರುವ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ನೀಡಲು ಅವರು ಅಧಿಕೃತವಾಗಿ ಆದೇಶಿಸಿದ್ದಾರೆ.

45 ದಿನಗಳ (West Bengal) ಡೆಡ್‌ಲೈನ್

ಗಡಿ ಭಾಗದ ಮೂಲಕ ನಡೆಯುವ ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಗೆ ಅಂತ್ಯ ಹಾಡುವುದು ನೂತನ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸುವೇಂದು ಅಧಿಕಾರಿ, ಬೇಲಿ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮುಂದಿನ 45 ದಿನಗಳ ಒಳಗಾಗಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸುಮಾರು 105 ಎಕರೆ ಭೂಮಿಯನ್ನು ನೀಡುವ ಮೂಲಕ ಗಡಿಯ 127 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಲು ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದೆ.

ಬಾಕಿ ಉಳಿದಿದ್ದ ಯೋಜನೆಗೆ (West Bengal) ಮರುಜೀವ

ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ ಸುಮಾರು 4,097 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಬಹುತೇಕ ಭಾಗಗಳಲ್ಲಿ ಬೇಲಿ ಹಾಕಲಾಗಿದ್ದರೂ, ಈ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರವು ಭೂಮಿ ನೀಡಲು ನಿರಾಕರಿಸಿದ್ದರಿಂದ 127 ಕಿ.ಮೀ ಭಾಗ ಮುಕ್ತವಾಗಿಯೇ ಉಳಿದಿತ್ತು. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬವು ರಾಷ್ಟ್ರೀಯ ಭದ್ರತೆಗೆ ಸವಾಲಾಗಿತ್ತು. ಇದೀಗ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ 8 ಕಿ.ಮೀ ವ್ಯಾಪ್ತಿಯಲ್ಲಿ ತಕ್ಷಣವೇ ಕಾಮಗಾರಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಹಿಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವ ಕೇಂದ್ರದ ನಿರ್ಧಾರವನ್ನು ಬಲವಾಗಿ ವಿರೋಧಿಸಿದ್ದರು. ಬಿಎಸ್‌ಎಫ್ ವ್ಯಾಪ್ತಿ ಹೆಚ್ಚಳವು ರಾಜ್ಯ ಪೊಲೀಸರ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಮತ್ತು ಗಡಿ ಭಾಗದ ನಿವಾಸಿಗಳಿಗೆ ಕಿರುಕುಳ ನೀಡಲು ದಾರಿಯಾಗುತ್ತದೆ ಎಂಬುದು ಅವರ ವಾದವಾಗಿತ್ತು. ಈ ರಾಜಕೀಯ ಸಂಘರ್ಷದ ಕಾರಣದಿಂದಾಗಿ ಬಿಎಸ್‌ಎಫ್‌ಗೆ ಭೂಮಿ ನೀಡುವ ಪ್ರಕ್ರಿಯೆಯು ನೆನೆಗುದಿಗೆ ಬಿದ್ದಿತ್ತು.

ಸದ್ಯ ಸುವೇಂದು ಅಧಿಕಾರಿ ಅವರ ಈ ನಿರ್ಧಾರವು ಗಡಿ ಭದ್ರತೆಯನ್ನು ಬಲಪಡಿಸುವಲ್ಲಿ ಮೈಲಿಗಲ್ಲಾಗಲಿದ್ದು, ನುಸುಳುವಿಕೆ ತಡೆಗೆ ದೊಡ್ಡ ಮಟ್ಟದ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ವಿಜಯ್ ಅಧಿಕಾರ ಸ್ವೀಕಾರ: ಮರುದಿನವೇ ಸ್ಟಾಲಿನ್ ಭೇಟಿಯಾದ ‘ದಳಪತಿ’!

Leave a Reply

Your email address will not be published. Required fields are marked *