ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ಗಳನ್ನು ಸೇರಿಸಿಕೊಳ್ಳಲು ಪ್ರತಿಯೊಬ್ಬರೂ ಗಮನ ಹರಿಸುತ್ತಾರೆ. ಆದರೆ, ನಿತ್ಯ ಅಡುಗೆಗೆ ಬಳಸುವ ಎಣ್ಣೆಯು (Cooking Oil) ಜೀರ್ಣಾಂಗ ವ್ಯವಸ್ಥೆಯ (ಗಟ್ ಹೆಲ್ತ್) ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ಎಂಬುದನ್ನು ಹಲವರು ಮರೆತುಬಿಡುತ್ತಾರೆ. ನಾವು ಬಳಸುವ ಅಡುಗೆ ಎಣ್ಣೆಯು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ತುಪ್ಪ
ಪ್ರಸಿದ್ಧ ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಅವರ ಪ್ರಕಾರ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಬಲಪಡಿಸಲು ಎರಡು ವಿಶೇಷ ಎಣ್ಣೆಗಳನ್ನು ಅಡುಗೆಯಲ್ಲಿ ಬಳಸುವುದು ಸೂಕ್ತವಾಗಿದೆ. ಅವರು ಸೂಚಿಸಿರುವ ಮೊದಲನೆಯದು ತುಪ್ಪ. ತುಪ್ಪದಲ್ಲಿ ‘ಬ್ಯುಟಿರಿಕ್ ಆಸಿಡ್’ ಇದ್ದು, ಇದು ದೇಹದಲ್ಲಿ ಉಪಯುಕ್ತ ಕೊಬ್ಬಿನಂಶದ ಆಮ್ಲಗಳನ್ನು ಉತ್ಪಾದಿಸಲು ನೆರವಾಗುತ್ತದೆ. ಇವು ಹೊಟ್ಟೆಯ ಒಳಗಿನ ಪದರವನ್ನು ಬಲಪಡಿಸಿ, ಉರಿಯೂತ (ಇನ್ಫ್ಲಮೇಷನ್) ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡುತ್ತವೆ.
ಆಲಿವ್ ಆಯಿಲ್
ಅವರು ಶಿಫಾರಸು ಮಾಡಿರುವ ಎರಡನೆಯದು ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್. ಮುಖ್ಯವಾಗಿ ದೀರ್ಘಕಾಲದ ಉರಿಯೂತ ಅಥವಾ ರೋಗನಿರೋಧಕ ಶಕ್ತಿಯ ಏರುಪೇರಿನಿಂದ ಬಳಲುತ್ತಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ಆಲಿವ್ ಆಯಿಲ್ನಲ್ಲಿ ‘ಫೀನಾಲಿಕ್’ ಎಂಬ ಉರಿಯೂತ ನಿರೋಧಕ ಮತ್ತು ಆಂಟಿಆಕ್ಸಿಡೆಂಟ್ ಸಂಯುಕ್ತಗಳಿದ್ದು, ಇವು ಹೊಟ್ಟೆಯ ಉರಿಯೂತವನ್ನು ಶಮನಗೊಳಿಸಲು ನೆರವಾಗುತ್ತವೆ. ಈ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ ಮತ್ತು ಇದು ಉತ್ತಮ ಕೊಬ್ಬಿನಂಶವನ್ನು ಹೊಂದಿದೆ.
ಈ ಎರಡೂ ಎಣ್ಣೆಗಳು ಸಂಪೂರ್ಣವಾಗಿ ಭಿನ್ನವಾದ ರುಚಿ ಮತ್ತು ಬಳಕೆಯನ್ನು ಹೊಂದಿವೆ. ತುಪ್ಪವು ಕರಾವಳಿ ಮತ್ತು ಭಾರತೀಯ ಅಡುಗೆಗಳಾದ ಬೇಳೆ ಸಾರು, ಪಲ್ಯ ಹಾಗೂ ರೊಟ್ಟಿಗಳಿಗೆ ಅತ್ಯುತ್ತಮ ರುಚಿ ನೀಡಿದರೆ, ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಅನ್ನು ಸಲಾಡ್ಗಳು, ಸೂಪ್ಗಳು ಮತ್ತು ಪಾಸ್ಟಾಗಳಲ್ಲಿ ಬಳಸಬಹುದು. ದಿನನಿತ್ಯದ ಆಹಾರದಲ್ಲಿ ಈ ಎರಡೂ ಎಣ್ಣೆಗಳನ್ನು ಹಿತಮಿತವಾಗಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು
ಇದನ್ನೂ ಓದಿ: ಹೆಪಟೈಟಿಸ್ ಎಂದರೆ ಏನು? ಇಲ್ಲಿದೆ ಈ ರೋಗದ ಲಕ್ಷಣಗಳು
