ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ‘ತಬಾಹಿ’ ಹಾಡು ಸೃಷ್ಟಿಸಿರುವ ವಿವಾದ ಹಾಗೂ ಪರ-ವಿರೋಧದ ಚರ್ಚೆಗಳ ನಡುವೆಯೇ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಶನಿವಾರ ಬೆಳಿಗ್ಗೆ ಸಿಲಿಕಾನ್ ಸಿಟಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಚಿತ್ರದ ಭವ್ಯ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ನಗರಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬಂದ ಕಿಯಾರಾ ಸಂಪೂರ್ಣ ಡೆನಿಮ್ ಉಡುಪಿನಲ್ಲಿ ಮಿಂಚುತ್ತಿದ್ದು, ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು, ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಈ ವೇಳೆ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಕೂಡ ಅವರ ಜೊತೆಯಲ್ಲಿದ್ದರು.
ತಬಾಹಿ ಸೃಷ್ಟಿಸಿದ್ದ ನಟಿ ಕಿಯಾರ
ಇತ್ತೀಚೆಗಷ್ಟೇ ಬಿಡುಗಡೆಯಾದ ‘ತಬಾಹಿ’ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ ಕೆಲವು ಅತ್ಯಂತ ಆಪ್ತ ಹಾಗೂ ಬೋಲ್ಡ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ದೃಶ್ಯಗಳ ಕಾರಣಕ್ಕೆ ನೆಟ್ಟಿಗರ ಒಂದು ವಲಯ ಕಿಯಾರಾ ಅವರನ್ನು ತೀವ್ರವಾಗಿ ಟೀಕಿಸುತ್ತಿದೆ. ಕೇವಲ ಹಾಡಿಗೆ ಸೀಮಿತವಾಗದ ಈ ವಿವಾದ, ಈಗ ನಟಿಯ ವೈಯಕ್ತಿಕ ಜೀವನಕ್ಕೂ ಹಬ್ಬಿದೆ. ಕೆಲವು ಟ್ರೋಲಿಗರು ಕಿಯಾರಾ ಅವರ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಕೆಳಗೆ ಕಮೆಂಟ್ ಮಾಡಿ ಈ ಚಿತ್ರವನ್ನು ಅವರ ದಾಂಪತ್ಯ ಜೀವನಕ್ಕೆ ಲಿಂಕ್ ಮಾಡಿ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ. ಆದರೆ, ಇದೇ ಹಾಡಿನಲ್ಲಿ ನಟಿಸಿರುವ ಯಶ್ ಕೂಡ ವಿವಾಹಿತರಾಗಿದ್ದರೂ ಅವರ ವಿರುದ್ಧ ಅಷ್ಟಾಗಿ ಟೀಕೆಗಳು ಕೇಳಿಬರುತ್ತಿಲ್ಲ. ಈ ತಾರತಮ್ಯದ ನಡೆ, ಸಿನಿಮಾ ರಂಗದಲ್ಲಿ ಪುರುಷ ನಟರಿಗಿಂತ ಮಹಿಳಾ ನಟಿಯರನ್ನೇ ಸಮಾಜ ಹೆಚ್ಚು ಕಠಿಣವಾಗಿ ಜಡ್ಜ್ ಮಾಡುತ್ತದೆ ಎಂಬ ಆನ್ಲೈನ್ ಚರ್ಚೆಗೆ ಕಾರಣವಾಗಿದೆ.
ನಟಿಗೆ ಸಾಥ್ ನೀಡಿದ ಹುಮಾ ಖುರೇಷಿ
ಈ ಇಡೀ ವಿವಾದದ ನಡುವೆ ‘ಟಾಕ್ಸಿಕ್’ ಚಿತ್ರದ ಮತ್ತೊಬ್ಬ ಪ್ರಮುಖ ನಟಿ ಹುಮಾ ಖುರೇಷಿ ಅವರು ಕಿಯಾರಾ ಬೆಂಬಲಕ್ಕೆ ನಿಂತಿದ್ದಾರೆ. ಈ ರೀತಿಯ ಟ್ರೋಲ್ಗಳು ತೀರಾ ಅಸಹ್ಯ ಹಾಗೂ ಜುಗುಪ್ಸೆ ತರಿಸುವಂತಿವೆ ಎಂದು ಕಿಡಿಕಾರಿರುವ ಹುಮಾ, “ಕೆಲವರ ಮನಸ್ಥಿತಿಯನ್ನು ಕೇವಲ ಮಾತುಗಳಿಂದ ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ರಕ್ಷಣಾತ್ಮಕವಾಗಿ ಮಾತನಾಡುವ ಅಗತ್ಯವಿಲ್ಲ. ಈ ಚಿತ್ರದಲ್ಲಿ ಕೆಲಸ ಮಾಡಿರುವ ನಟಿಯರು ಮತ್ತು ನಿರ್ದೇಶಕಿಯೇ ಅಂತಿಮವಾಗಿ ಗೆದ್ದು ನಗಲಿದ್ದಾರೆ. ನಮ್ಮ ಸಿನಿಮಾ ಪ್ರೇಕ್ಷಕರ ಎದುರು ಬಂದು ತಾನೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಯಶ್, ಕಿಯಾರಾ ಹಾಗೂ ಹುಮಾ ಖುರೇಷಿ ಜೊತೆಗೆ ನಯನತಾರಾ, ತಾರಾ ಸುತಾರಿಯಾ ಮತ್ತು ಕರಾವಳಿ ಬೆಡಗಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.
ಇದನ್ನೂ ಓದಿ: ಬರೊಬ್ಬರಿ 3 ಗಂಟೆ 6 ನಿಮಿಷ ಇದೆಯಾ ಯಶ್ ಸಿನಿಮಾ? ‘ಟಾಕ್ಸಿಕ್’ ಸೆನ್ಸಾರ್ ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು!

One thought on “Toxic: ‘ಟಾಕ್ಸಿಕ್’ ಟ್ರೈಲರ್ ಸಂಭ್ರಮ: ಬೆಂಗಳೂರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ಕಿಯಾರಾ ಅಡ್ವಾಣಿ”