ಹೈದರಾಬಾದ್: ಭಾರತದ ಉದಯೋನ್ಮುಖ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ (Skyroot) ಅಭಿವೃದ್ಧಿಪಡಿಸಿದ್ದ ‘ವಿಕ್ರಮ್-1’ ರಾಕೆಟ್ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಕಕ್ಷೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಜುಲೈ 18, 2026 ರಂದು ನಡೆದ ಈ ಐತಿಹಾಸಿಕ ಉಡಾವಣೆಯ ಬೆನ್ನಲ್ಲೇ ಕಂಪನಿಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಹೆಕ್ಸ್20’ (HEX20) ಜೊತೆಗೆ ಮೂರು ಪ್ರಮುಖ ಉಡಾವಣೆಗಳ ಹೊಸ ವಾಣಿಜ್ಯ ಒಪ್ಪಂದವನ್ನು ಸ್ಕೈರೂಟ್ ಮಾಡಿಕೊಂಡಿದೆ. 2027 ರ ಕೊನೆಯ ಭಾಗದಿಂದ ಈ ಉಡಾವಣೆಗಳು ಆರಂಭವಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ವಿಕ್ರಮ್-1 ರಾಕೆಟ್ ಮೇಲಿನ ನಂಬಿಕೆ ಹೆಚ್ಚುತ್ತಿರುವುದಕ್ಕೆ ಈ ಹೊಸ ಡೀಲ್ ಸಾಕ್ಷಿಯಾಗಿದೆ.
ಮೊದಲ ಯತ್ನದಲ್ಲೇ ಯಶಸ್ಸು
ಸಾಮಾನ್ಯವಾಗಿ ಹೊಸ ರಾಕೆಟ್‌ಗಳ ಮೊದಲ ಪ್ರಯೋಗಗಳು ಜಾಗತಿಕ ಮಟ್ಟದಲ್ಲಿ ಹಲವು ತಾಂತ್ರಿಕ ಸವಾಲು ಹಾಗೂ ವಿಫಲತೆಗಳನ್ನು ಎದುರಿಸುತ್ತವೆ. ಆದರೆ ಸ್ಕೈರೂಟ್ ಸಂಸ್ಥೆಯು ಮೊದಲ ಯತ್ನದಲ್ಲೇ ಯಶಸ್ಸು ಕಂಡು ತನ್ನ ತಂತ್ರಜ್ಞಾನದ ಪ್ರಬುದ್ಧತೆಯನ್ನು ಸಾಬೀತುಪಡಿಸಿದೆ. ಇದರಿಂದ ಉತ್ತೇಜನಗೊಂಡಿರುವ ಸಂಸ್ಥೆಯು, ಸಣ್ಣ ಉಪಗ್ರಹಗಳ ಉಡಾವಣೆಗೆ ಜಾಗತಿಕವಾಗಿ ಇರುವ ಭಾರಿ ಬೇಡಿಕೆಯನ್ನು ಪೂರೈಸಲು ವರ್ಷಕ್ಕೆ ಬರೋಬ್ಬರಿ 12 ಉಡಾವಣೆಗಳನ್ನು ನಡೆಸುವ ಗುರಿ ಹೊಂದಿದೆ. ಈ ಸಹಭಾಗಿತ್ವದ ಕುರಿತು ಹೆಕ್ಸ್20 ಸಂಸ್ಥೆಯ ಮುಖ್ಯಸ್ಥ ಅಮಲ್ ಚಂದ್ರನ್ ಅವರು ಸಂತಸ ವ್ಯಕ್ತಪಡಿಸಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂತಹ ಜಂಟಿ ಒಪ್ಪಂದಗಳು ಮುಂದಿನ ದಿನಗಳಲ್ಲಿ ಇಡೀ ವಿಶ್ವವೇ ಬೆರಗಾಗುವಂತಹ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡಲಿವೆ ಎಂದು ಆಶಿಸಿದ್ದಾರೆ.
ಆದರೆ, ಈ ಐತಿಹಾಸಿಕ ಉಡಾವಣೆಯ ನಡುವೆ ಒಂದು ಸಣ್ಣ ಹಿನ್ನಡೆಯೂ ಎದುರಾಗಿದೆ. ವಿಕ್ರಮ್-1 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾಗಿದ್ದ ಸ್ಕೈರೂಟ್ ಸಂಸ್ಥೆಯದ್ದೇ ಸ್ವಂತ ತಂತ್ರಜ್ಞಾನದ ‘ಸ್ಕೋಪ್’ (SCOPE) ಎಂಬ ಸಣ್ಣ ಉಪಗ್ರಹವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಸುಮಾರು 3.415 ಕೆಜಿ ತೂಕದ ಈ ಕ್ಯೂಬ್‌ಸ್ಯಾಟ್ ಉಪಗ್ರಹವನ್ನು ಸಂಸ್ಥೆಯು ತನ್ನದೇ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಕಳುಹಿಸಿತ್ತು. ರಾಕೆಟ್‌ನಿಂದ ಉಪಗ್ರಹವು ಯಶಸ್ವಿಯಾಗಿ ಬೇರ್ಪಟ್ಟು, ಭೂಕೇಂದ್ರದೊಂದಿಗೆ ಸಂವಹನ ಲಿಂಕ್ ಸ್ಥಾಪಿಸುವಲ್ಲಿ ಯಶಸ್ವಿಯಾಯಿತಾದರೂ, ಅದರ ಒಳಾಂಗಣ ವ್ಯವಸ್ಥೆಯ ಆರೋಗ್ಯವನ್ನು ತಿಳಿಸುವ ಪ್ರಮುಖ ತಾಂತ್ರಿಕ ದತ್ತಾಂಶಗಳನ್ನು (Telemetry) ಕಳುಹಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಉಪಗ್ರಹದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಮತ್ತು ಇತರ ಸೆನ್ಸಾರ್‌ಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ವಿಜ್ಞಾನಿಗಳಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಜಾಗತಿಕ ಮಟ್ಟದಲ್ಲಿ ದಟ್ಟ ಹೆಜ್ಜೆ
ಹೀಗಿದ್ದರೂ, ಬಾಹ್ಯಾಕಾಶ ವಿಜ್ಞಾನದಲ್ಲಿ ಮೊದಲ ಉಡಾವಣೆಗಳ ವೇಳೆ ಇಂತಹ ಫಲಿತಾಂಶಗಳು ತೀರಾ ಸಾಮಾನ್ಯ. ರಾಕೆಟ್‌ಗಳ ಮೊದಲ ಪ್ರಯೋಗದ ಸಮಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಉಪಗ್ರಹಗಳನ್ನು ಕಳುಹಿಸುವ ಬದಲಾಗಿ, ಇಂತಹ ತಂತ್ರಜ್ಞಾನ ಪ್ರದರ್ಶಕ ಉಪಗ್ರಹಗಳನ್ನೇ ಬಳಸಲಾಗುತ್ತದೆ. ಇಲ್ಲಿ ಉಪಗ್ರಹದ ಯಶಸ್ಸಿಗಿಂತ ರಾಕೆಟ್ ನಿಖರವಾಗಿ ಕಕ್ಷೆ ತಲುಪಿದೆಯೇ ಇಲ್ಲವೇ ಎಂಬುದಷ್ಟೇ ಪ್ರಮುಖ ಮಾನದಂಡವಾಗಿರುತ್ತದೆ. ಆ ಲೆಕ್ಕಾಚಾರದಲ್ಲಿ ವಿಕ್ರಮ್-1 ರಾಕೆಟ್ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಉಪಗ್ರಹದ ಲೋಪದೋಷಗಳಿಂದ ಕಲಿತ ಪಾಠಗಳು ಮುಂದಿನ ಪೀಳಿಗೆಯ ಉಡಾವಣೆಗಳನ್ನು ಇನ್ನಷ್ಟು ಉತ್ತಮಪಡಿಸಲು ವಿಜ್ಞಾನಿಗಳಿಗೆ ಸಹಕಾರಿಯಾಗಲಿವೆ. ಒಟ್ಟಾರೆಯಾಗಿ, ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯೊಂದು ಜಾಗತಿಕ ಮಟ್ಟದಲ್ಲಿ ದಟ್ಟ ಹೆಜ್ಜೆ ಇಟ್ಟಿರುವುದು ದೇಶವೇ ಹೆಮ್ಮೆಪಡುವ ವಿಚಾರವಾಗಿದೆ.
ಇದನ್ನೂ ಓದಿ: ರಾಂಚಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಉಗ್ರ: ಪೊಲೀಸ್ ಲಾಠಿಚಾರ್ಜ್
