TOP NEWS

Eye Care: ಚಳಿಗಾಲದ ಮಂಜು ಹಾಗೂ ವಾಯುಮಾಲಿನ್ಯದಿಂದ ಕಣ್ಣಿಗೆ ಕುತ್ತು: ಕಣ್ಣು ಕೆಂಪಾಗುವುದು, ಉರಿ ಸಮಸ್ಯೆಗೆ ಎಚ್ಚರ ವಹಿಸಿ!

eye care Winter Smog and Air Pollution Threaten Eye Health Beware of Itchiness Redness and Irritation

ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತೀವ್ರ ಬದಲಾವಣೆಗಳು ಕಂಡುಬರುತ್ತವೆ. ತಂಪಾದ ಗಾಳಿ, ದಟ್ಟವಾದ ಮಂಜು ಹಾಗೂ ಹೆಚ್ಚುತ್ತಿರುವ ವಾಯುಮಾಲಿನ್ಯವು (Eye Care) ಜನರ ದೈನಂದಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಈ ಹವಾಮಾನದಲ್ಲಿ ಕಣ್ಣಿನ ಸಮಸ್ಯೆಗಳು ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಕಣ್ಣು ಕೆಂಪಾಗುವುದು, ಪದೇಪದೇ ನೀರು ಸೋರುವುದು, ವಿಪರೀತ ತುರಿಕೆ ಮತ್ತು ಉರಿ ಉಂಟಾಗುತ್ತದೆ. ಇಂತಹ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ಸಾಮಾನ್ಯವೆಂದು ನಿರ್ಲಕ್ಷಿಸಬಾರದು ಎಂದು ನೇತ್ರ ತಜ್ಞರು ಎಚ್ಚರಿಸಿದ್ದಾರೆ.

ವಾಯುಮಾಲಿನ್ಯ ಮತ್ತು PM2.5 ಕಣಗಳಿಂದ ಕಣ್ಣಿಗೆ ಕುತ್ತು

ನಾವು ಉಸಿರಾಡುವ ಗಾಳಿಯಲ್ಲಿ ಸೇರಿಕೊಂಡಿರುವ ಧೂಳು, ಹೊಗೆ ಹಾಗೂ ಸೂಕ್ಷ್ಮ ಮಾಲಿನ್ಯ ಕಣಗಳು ನಮ್ಮ ಕಣ್ಣಿನ ಆರೋಗ್ಯವನ್ನು ನೇರವಾಗಿ ಹದಗೆಡಿಸುತ್ತವೆ. ಅದರಲ್ಲೂ ‘PM2.5’ ಎಂದು ಕರೆಯಲ್ಪಡುವ ಅತಿಸಣ್ಣ ಧೂಳಿನ ಕಣಗಳು ಕಣ್ಣಿನ ಸೂಕ್ಷ್ಮ ಮೇಲ್ಮೈಗೆ ಸುಲಭವಾಗಿ ಅಂಟಿಕೊಳ್ಳುತ್ತವೆ. ಇದರಿಂದ ಕಣ್ಣನ್ನು ರಕ್ಷಿಸುವ ನೈಸರ್ಗಿಕ ತೇವಾಂಶದ ಪದರಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆಯಿರುತ್ತದೆ.

ವಾಹನಗಳಿಂದ ಹೊರಬರುವ ಹೊಗೆ, ಕೈಗಾರಿಕೆಗಳ ವಿಷಕಾರಿ ಅಂಶಗಳು ಹಾಗೂ ವಾತಾವರಣದ ಮಾಲಿನ್ಯಕಾರಕಗಳು ಕಣ್ಣಿನಲ್ಲಿ ಅಲರ್ಜಿಯನ್ನು ಉಂಟುಮಾಡುತ್ತವೆ. ಇದರಿಂದ ಕಣ್ಣುಗಳು ಒಣಗುವುದು (Dry Eyes), ಉರಿ ಹಾಗೂ ತುರಿಕೆ ಸಾಮಾನ್ಯವಾಗಿದೆ ಎಂದು ತಜ್ಞ ವೈದ್ಯೆ ಡಾ. ಸಿ.ಕೆ. ದೀಪಾ ಅವರು ತಿಳಿಸಿದ್ದಾರೆ.

ಕಣ್ಣಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಿ

ಮಾಲಿನ್ಯಭರಿತ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಬೆಳಗ್ಗೆ ಮತ್ತು ಸಂಜೆ ಮಂಜು ಕವಿದ ಸಮಯದಲ್ಲಿ ಕಣ್ಣಿನ ತೊಂದರೆಗಳು ಉಲ್ಬಣಗೊಳ್ಳುತ್ತವೆ. ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಮುನ್ನೆಚ್ಚರಿಕೆ ವಹಿಸಬೇಕು:

  • ಕಣ್ಣಿನಲ್ಲಿ ವಿಪರೀತ ಉರಿ ಮತ್ತು ಮಂಟು ಕಾಣಿಸಿಕೊಳ್ಳುವುದು.
  • ಕಣ್ಣುಗಳು ಕೆಂಪಾಗುವುದು ಹಾಗೂ ಪದೇಪದೇ ತುರಿಕೆ ಉಂಟಾಗುವುದು.
  • ಯಾವುದೇ ಕಾರಣವಿಲ್ಲದೆ ಕಣ್ಣಿನಿಂದ ಸತತವಾಗಿ ನೀರು ಸುರಿಯುವುದು.
  • ಕಣ್ಣಿನಲ್ಲಿ ಧೂಳು ಅಥವಾ ಮರಳು ಸಿಲುಕಿಕೊಂಡಂತಹ ಕಿರಿಕಿರಿ ಅನುಭವವಾಗುವುದು.
  • ಕಣ್ಣುರೆಪ್ಪೆಗಳು ಭಾರವಾದಂತೆ ಅಥವಾ ಸ್ವಲ್ಪ ಊದಿಕೊಂಡಂತೆ ಭಾಸವಾಗುವುದು.
  • ದೃಷ್ಟಿ ಮಸುಕಾಗುವುದು ಅಥವಾ ಸ್ಪಷ್ಟವಾಗಿ ಕಾಣದಿರುವುದು.

ಕಣ್ಣಿನ ಸಮಸ್ಯೆ ನಿವಾರಣೆಗೆ ಪ್ರಮುಖ ಮುನ್ನೆಚ್ಚರಿಕೆ ಟಿಪ್ಸ್

ಕಣ್ಣಿನಲ್ಲಿ ತುರಿಕೆ ಅಥವಾ ಕಿರಿಕಿರಿ ಉಂಟಾದಾಗ ಕೈಗಳಿಂದ ಉಜ್ಜಿಕೊಳ್ಳುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಹೀಗೆ ಮಾಡುವುದರಿಂದ ಕಣ್ಣಿನ ಸೂಕ್ಷ್ಮ ಮೇಲ್ಮೈಗೆ ಮತ್ತಷ್ಟು ಹಾನಿಯಾಗಿ, ಧೂಳಿನ ಕಣಗಳಿಂದ ಉಂಟಾಗುವ ಕಿರಿಕಿರಿ ದುಪ್ಪಟ್ಟಾಗುತ್ತದೆ.

ಹೊರಗಡೆ ಓಡಾಡಿ ಮನೆಗೆ ವಾಪಸ್ ಬಂದ ತಕ್ಷಣ ಸ್ವಚ್ಛವಾದ ನೀರಿನಿಂದ ಮುಖವನ್ನು ತೊಳೆಯಿರಿ. ಕಣ್ಣುಗಳನ್ನು ಮುಚ್ಚಿಕೊಂಡು ಕಣ್ಣುರೆಪ್ಪೆಗಳ ಮೇಲೆ ನಿಧಾನವಾಗಿ ತಣ್ಣೀರು ಚಿಮುಕಿಸಬೇಕು. ಆದರೆ ಕಣ್ಣುಗಳಿಗೆ ಬಲವಾಗಿ ನೀರು ಪ್ರೆಸ್ ಮಾಡಿ ಚಿಮುಕಿಸುವುದನ್ನು ಕಡ್ಡಾಯವಾಗಿ ತಪ್ಪಿಸಿ. ಕಣ್ಣಿನಲ್ಲಿ ಉರಿ ಹೆಚ್ಚಾದರೆ ಸ್ವಚ್ಛವಾದ ತಣ್ಣನೆಯ ಬಟ್ಟೆಯನ್ನು ಕಣ್ಣುಗಳ ಮೇಲೆ ಇಟ್ಟುಕೊಂಡು ಕೆಲವು ನಿಮಿಷ ವಿಶ್ರಾಂತಿ ಪಡೆಯಬಹುದು; ಇದರಿಂದ ತಾತ್ಕಾಲಿಕ ಆರಾಮ ಸಿಗುತ್ತದೆ.

ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದನ್ನು ಕಡಿಮೆ ಮಾಡಿ ಸಾಮಾನ್ಯ ಕನ್ನಡಕ ಬಳಸುವುದು ಉತ್ತಮ. ಲೆನ್ಸ್‌ಗಳ ಮೇಲೆ ಧೂಳಿನ ಕಣಗಳು ಶೇಖರಗೊಂಡು ಕಿರಿಕಿರಿಯನ್ನು ಹೆಚ್ಚಿಸುತ್ತವೆ. ಮನೆಯ ಹೊರಗೆ ಹೊಗೆ ಮತ್ತು ಮಾಲಿನ್ಯ ಅಧಿಕವಾಗಿದ್ದಾಗ ಕಿಟಕಿಗಳನ್ನು ಮುಚ್ಚಿಡಿ ಮತ್ತು ಸಾಧ್ಯವಾದರೆ ಒಳಾಂಗಣದಲ್ಲಿ ‘ಏರ್ ಪ್ಯೂರಿಫೈಯರ್’ ಬಳಸಿ.

ಹಾಗೆಯೇ, ನಿರಂತರವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ನೋಡುವುದರಿಂದ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗಿ ಕಣ್ಣುಗಳು ಒಣಗುತ್ತವೆ. ಹೀಗಾಗಿ ಆಗಾಗ್ಗೆ ಪರದೆಯಿಂದ ದೃಷ್ಟಿ ಬೇರೆಡೆಗೆ ತಿರುಗಿಸಿ ಕಣ್ಣಿಗೆ ವಿರಾಮ ನೀಡಿ. ಚಳಿಗಾಲದಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ತೀವ್ರ ಲಕ್ಷಣಗಳಿದ್ದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ನೇತ್ರ ತಜ್ಞರ ಸಲಹೆ ಪಡೆಯುವುದು ಉತ್ತಮ

ಇದನ್ನೂ ಓದಿ:  ಫ್ರಿಡ್ಜ್‌ನಲ್ಲಿದ್ದರೂ ಬೆಂಡೆಕಾಯಿ ಕಪ್ಪಾಗುತ್ತಿದೆಯೇ?: ಇಲ್ಲಿದೆ ದೀರ್ಘಕಾಲ ತಾಜಾವಾಗಿಡುವ ಸಿಂಪಲ್ ಟಿಪ್ಸ್!

Leave a Reply

Your email address will not be published. Required fields are marked *