TOP NEWS

High Court: ಮಾಟಮಂತ್ರ ಹಾಗೂ ಪೂಜೆ ಹೆಸರಿನಲ್ಲಿ ಕೋಟ್ಯಂತರ ವಂಚನೆ: ಆರೋಪಿಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

Karnataka High Court Expresses Concern Over Multi Crore Fraud in the Name of Black Magic and Rituals Dismisses Quashing Plea

ಬೆಂಗಳೂರು: ಇಂದಿನ ಆಧುನಿಕ ಯುಗದಲ್ಲೂ ದೇವಾನುದೇವಿಗಳು ಮೈಮೇಲೆ ಬರುತ್ತಾರೆ ಹಾಗೂ ವಿಶೇಷ ಪೂಜೆ ಪುನಸ್ಕಾರಗಳಿಂದ ಕುಟುಂಬದ ಎಲ್ಲಾ ಕಷ್ಟ-ಸಮಸ್ಯೆಗಳು ಮಾಯವಾಗುತ್ತವೆ (High Court) ಎಂದು ಕುರುಡಾಗಿ ನಂಬಿ ಲಕ್ಷಾಂತರ ರೂ. ಹಣ ಹಾಗೂ ಆಸ್ತಿಯನ್ನು ಕಳೆದುಕೊಂಡು ವಂಚನೆಗೆ ಒಳಗಾಗುತ್ತಿರುವ ಘಟನೆಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಕುಟುಂಬದ ಸಂಕಷ್ಟಗಳನ್ನು ನಿವಾರಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 5 ಸ್ಥಿರ ಆಸ್ತಿಗಳು, ನೂರಾರು ಗ್ರಾಂ ಚಿನ್ನ ಹಾಗೂ ಕೋಟ್ಯಂತರ ರೂ. ನಗದನ್ನು ಮಾಟಮಂತ್ರ ಹಾಗೂ ಪೂಜೆಯ ಹೆಸರಿನಲ್ಲಿ ದೋಚಿರುವ ಕುಖ್ಯಾತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣದ ಪ್ರಮುಖ ಆರೋಪಿಯ ಪತ್ನಿ ಸೇರಿದಂತೆ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ಖಡಕ್ ಆಗಿ ನಿರಾಕರಿಸಿದೆ.

ರಾಮಮೂರ್ತಿನಗರ ಪೊಲೀಸ್ ಠಾಣೆ ಪ್ರಕರಣ ಹಾಗೂ ಹೈಕೋರ್ಟ್ ಆದೇಶ

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಹೈ-ಪ್ರೊಫೈಲ್ ವಂಚನೆ ಪ್ರಕರಣದಲ್ಲಿ, ಎರಡನೇ ಆರೋಪಿಯಾಗಿರುವ ಲಕ್ಷ್ಮಮ್ಮ ಹಾಗೂ ರಿಯಲ್ ಎಸ್ಟೇಟ್ ಏಜೆಂಟರಾದ ಪೆರುಮಾಳ್ ಮತ್ತು ಹೊಸೂರು ಮಂಜು ಎಂಬುವರು ತಮ್ಮ ಮೇಲಿನ ಆರೋಪಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿ, ಇಡೀ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಬೆಂಗಳೂರಿನಲ್ಲಿದ್ದ ಆಸ್ತಿಗಳನ್ನು ಮಾರಾಟ ಮಾಡಲು ಕೋಲಾರ ಹಾಗೂ ತಮಿಳುನಾಡಿನ ಧರ್ಮಪುರಿಯ ರಿಯಲ್ ಎಸ್ಟೇಟ್ ಏಜೆಂಟರನ್ನು ಮಹಿಳೆ ವೆಬ್‌ಸೈಟ್ ಮೂಲಕ ಸಂಪರ್ಕಿಸಿದ್ದರು ಎಂಬ ಸಮರ್ಥನೆಯು ನಂಬಲರ್ಹವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಫ್‌ಐಆರ್‌ನಲ್ಲಿ ಹೆಸರಿಲ್ಲದ ಮಾತ್ರಕ್ಕೆ ಅಪರಾಧ ಮುಕ್ತರಾಗಲು ಸಾಧ್ಯವಿಲ್ಲ

ಪ್ರಕರಣದ ಆರಂಭಿಕ ಎಫ್‌ಐಆರ್‌ನಲ್ಲಿ ಅರ್ಜಿದಾರರ ನಿರ್ದಿಷ್ಟ ಹೆಸರುಗಳಿಲ್ಲ ಎಂಬ ಒಂದೇ ಒಂದು ತಾಂತ್ರಿಕ ಕಾರಣದಿಂದ ಅವರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಭಾವಿಸುವುದು ತಪ್ಪು ಎಂದು ಪೀಠ ಅಭಿಪ್ರಾಯಪಟ್ಟಿದೆ.

ತನಿಖೆಯ ವೇಳೆ ಸಾಕ್ಷಿಗಳು ನೀಡಿರುವ ಹೇಳಿಕೆಗಳ ಪ್ರಕಾರ, ಪ್ರಮುಖ ಆರೋಪಿ ಹಾಗೂ ಈ ಏಜೆಂಟರ ನಡುವೆ ಮೊದಲೇ ಅಂತರಸಂಪರ್ಕ ಮತ್ತು ಹಿತಾಸಕ್ತಿ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಎಲ್ಲರೂ ಒಟ್ಟಾಗಿ ಸಂಚು ರೂಪಿಸಿ ನೊಂದ ಮಹಿಳೆಯ ಆಸ್ತಿ ಮಾರಾಟದ ಹಣವನ್ನು ಅಕ್ರಮವಾಗಿ ಲಪಟಾಯಿಸಿರುವುದು ದೋಷಾರೋಪಣಾ ಪಟ್ಟಿಯಿಂದ (Chargesheet) ದೃಢಪಟ್ಟಿದೆ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. ಪ್ರಕರಣವು ಪ್ರಸ್ತುತ ವಿಚಾರಣಾ ಹಂತದಲ್ಲಿದ್ದು, ಆರೋಪಿಗಳು ವಿಚಾರಣೆಯನ್ನು ಎದುರಿಸಲೇಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ದೇವಸ್ಥಾನದ ಪೂಜೆ ಹಾಗೂ ಮಾಟಮಂತ್ರದ ಹೆಸರಿನಲ್ಲಿ ನಡೆದ ಅಸಲಿ ವಂಚನೆ ಏನು?

ಬೆಂಗಳೂರು ನಿವಾಸಿ ಗೀತಾ ಹೆಚ್. ಎಂಬ ಮಹಿಳೆಯ ಪತಿ 2009ರಲ್ಲಿ ನಿಧನರಾಗಿದ್ದರು. ಆ ಬಳಿಕ ಅವರ ಕುಟುಂಬದಲ್ಲುಂಟಾದ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಸರಿಪಡಿಸಿಕೊಡುವುದಾಗಿ ನಂಬಿಸಿ ಪ್ರಮುಖ ಆರೋಪಿ ನಾಗರಾಜ್ ಎಂಬಾತ ಆ ಮಹಿಳಿಗೆ ಪರಿಚಯವಾಗಿದ್ದ.

ಪೂಜೆ ಮಾಡುವ ವೇಳೆ ತನ್ನ ಮೈಮೇಲೆ ಸ್ವತಃ ದೇವರು ಬರುತ್ತಾನೆ ಎಂದು ನಂಬಿಸಿ, ಸಂಕಷ್ಟ ನಿವಾರಣೆಯ ನೆಪದಲ್ಲಿ ನೊಂದ ಮಹಿಳೆಯ ಒಟ್ಟು 5 ಬೃಹತ್ ಸ್ಥಿರ ಆಸ್ತಿಗಳನ್ನು ಬಲವಂತವಾಗಿ ಮಾರಾಟ ಮಾಡಿಸಿ ಅದರ ಇಡೀ ಮಾರಾಟದ ಮೊತ್ತವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದನು. ಇದರೊಂದಿಗೆ ಸುಮಾರು 450 ಗ್ರಾಂ ಚಿನ್ನಾಭರಣ ಹಾಗೂ ಭಾರಿ ಪ್ರಮಾಣದ ನಗದನ್ನು ಸಹ ದೋಚಿ ಮೋಸ ಮಾಡಿರುವ ಬಗ್ಗೆ ಸಂತ್ರದತೆ ಮಹಿಳೆ ದೂರಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದರು.

ಈ ಗಂಭೀರ ದೂರಿನ ಆಧಾರದ ಮೇಲೆ ಪೊಲೀಸರು ಸಮಗ್ರ ತನಿಖೆ ನಡೆಸಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420, 406, 120ಬಿ ಹಾಗೂ ಕಠಿಣವಾದ ‘ಕರ್ನಾಟಕ ಮಾಟಮಂತ್ರ ಮತ್ತು ಅನಿಷ್ಟ ಪದ್ಧತಿಗಳ ತಡೆ ಕಾಯ್ದೆ-2017’ ರಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿಯೇ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ನಿವೇಶನದಾರರಿಗೆ ಭರ್ಜರಿ ಕೊಡುಗೆ: ನಿಮ್ಮ ನಿವೇಶನದ ಪಕ್ಕದ ಮಾರ್ಜಿನಲ್ ಜಾಗವೂ ಇನ್ಮುಂದೆ ನಿಮಗೇ ಸ್ವಂತ

Leave a Reply

Your email address will not be published. Required fields are marked *