TOP NEWS

JPSC: ರಾಂಚಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಉಗ್ರ: ಪೊಲೀಸ್ ಲಾಠಿಚಾರ್ಜ್

JPSC Students Try to Siege Assembly Over Exam Scam Cops Use Water Cannons Tear Gas in Ranchi

ಜಾರ್ಖಂಡ್‌: ರಾಷ್ಟ್ರ ರಾಜಧಾನಿ ಮಾದರಿಯಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಗಳ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಬೃಹತ್ ಪಾದಯಾತ್ರೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಕಣ್ಣೀರು ಅನಿಲ, ವಾಟರ್ ಕ್ಯಾನನ್ ಹಾಗೂ ಲಾಠಿಚಾರ್ಜ್ ನಡೆಸಿದರು. ಚರ್ಚೆಯ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿಕೆ ನೀಡಿದ್ದರೂ, ಸ್ಥಳದಲ್ಲಿ ಪರಿಸ್ಥಿತಿ ಕೈಮೀರಿ ಹೋಯಿತು.

ಜೇಪಿಎಸ್‌ಸಿ ಮಾಜಿ ಅಧ್ಯಕ್ಷನ ಬಂಧನ

ಪರೀಕ್ಷಾ ಅಕ್ರಮದ ಗಂಭೀರ ಆರೋಪಗಳ ಬೆನ್ನಲ್ಲೇ ಜಾರ್ಖಂಡ್ ಸಿಐಡಿ ಪೊಲೀಸರು ಜೇಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಅವರನ್ನು ಬಂಧಿಸಿದ್ದಾರೆ. ಜುಲೈ 22 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಖಿಯಾಂಗ್ತೆ ಅವರ ಬಂಧನವು ಈ ಹಗರಣದ ತೀವ್ರತೆಯನ್ನು ಹೆಚ್ಚಿಸಿದೆ. ಮತ್ತೊಂದೆಡೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು, ಬಸ್ಸು ಹಾಗೂ ಖಾಸಗಿ ವಾಹನಗಳ ಮೂಲಕ ರಾಂಚಿಗೆ ಆಗಮಿಸಿದ್ದ ಲಕ್ಷಾಂತರ ವಿದ್ಯಾರ್ಥಿಗಳು ‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ’ದ ನಾಯಕ ದೇವೇಂದ್ರ ಮಹತೋ ಹಾಗೂ ರವೀಂದ್ರ ಪಾಸ್ವಾನ್ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಕಳೆದ 16 ದಿನಗಳಿಂದ ಸತತವಾಗಿ ನಡೆಯುತ್ತಿರುವ ಈ ಹೋರಾಟವನ್ನು ಶಮನಗೊಳಿಸಲು ಸರ್ಕಾರ ನಡೆಸಿದ ಆರನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ವಿದ್ಯಾರ್ಥಿಗಳ ಶೇಕಡಾ 98 ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಸರ್ಕಾರ ಪ್ರತಿಪಾದಿಸುತ್ತಿದ್ದರೂ, ಅಕ್ರಮ ನಡೆದಿರುವ 13 ಪರೀಕ್ಷೆಗಳ ಪೈಕಿ ಕೇವಲ 3 ಪರೀಕ್ಷೆಗಳನ್ನು ಮಾತ್ರ ರದ್ದುಗೊಳಿಸಲು ಸರ್ಕಾರ ಒಪ್ಪಿದೆ. ಆದರೆ ಇಡೀ ಅಕ್ರಮದ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿರುವ ವಿದ್ಯಾರ್ಥಿಗಳು ಹೋರಾಟದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಸದ್ಯ ಆರು ಮಂದಿ ವಿದ್ಯಾರ್ಥಿ ನಾಯಕರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ನಿಯೋಜನೆ

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಡಳಿತ ಮಂಡಳಿಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಂಚಿಯ ಬಹುತೇಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಈ ಮಧ್ಯೆ, ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ನಿವಾಸದ ಹೊರಭಾಗದಲ್ಲಿ ಧರಣಿ ನಡೆಸಿದರು. ಹಗರಣದ ಆರೋಪಿಗಳಿಗೆ ಶಿಕ್ಷೆ ಖಚಿತ ಎಂದು ಸಿಎಂ ಭರವಸೆ ನೀಡಿದ್ದರೂ, ವಿದ್ಯಾರ್ಥಿಗಳ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.

ಇದನ್ನೂ ಓದಿ: ಗಂಗೆಯಿಂದ ಗವಿ ಗಂಗಾಧರೇಶ್ವರನವರೆಗೆ: ಹರಿದ್ವಾರದ ಗಂಗಾಜಲ ತಂದು ಬಸವನಗುಡಿಯಲ್ಲಿ ಪೂಜೆ ಸಲ್ಲಿಸಿದ ತೇಜಸ್ವಿ ಸೂರ್ಯ!

Leave a Reply

Your email address will not be published. Required fields are marked *