Road Mishap: ಸ್ಕೂಟರ್‌ ಡಿಕ್ಕಿಯಾಗಿ ಕರ್ತವ್ಯನಿರತ ಎಸ್‌ಐ ಸಾವು!

Tragedy on Duty SI Killed as Speeding Scooter Hits Him During Ganesh Immersion

ಹೈದರಾಬಾದ್: ಗಣೇಶ ವಿಸರ್ಜನೆಗೆ ಬಂದೋಬಸ್ತ್ ನಿಯೋಜನೆಗೊಂಡಿದ್ದ ಕರ್ತವ್ಯನಿರತ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ವೇಗವಾಗಿ ಬಂದ ಸ್ಕೂಟರ್ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಟ್ಯಾಂಕ್ ಬಂಡ್ (Road Mishap) ಪ್ರದೇಶದಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಗೆ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು.

ಇಷ್ಟಕ್ಕೂ ಆಗಿದ್ದೇನು?

ಮೃತರನ್ನು ಖಮ್ಮಂ ಜಿಲ್ಲೆಯ ಕೊತ್ತಗೂಡೆಂ ಟೌನ್-೨ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ೫೫ ವರ್ಷದ ಕೆ. ವೆಂಕಣ್ಣ ಎಂದು ಗುರುತಿಸಲಾಗಿದೆ. ಹೈದರಾಬಾದ್ ನಗರದಾದ್ಯಂತ ಸಾಗುತ್ತಿದ್ದ ಬೃಹತ್ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಭದ್ರತೆಗಾಗಿ ವೆಂಕಣ್ಣ ಅವರನ್ನು ಕೊತ್ತಗೂಡೆಂನಿಂದ ಹೈದರಾಬಾದ್‌ಗೆ ಕರೆಸಿಕೊಳ್ಳಲಾಗಿತ್ತು. ಟ್ಯಾಂಕ್ ಬಂಡ್ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸುತ್ತಿದ್ದ ಅವರು, ರಸ್ತೆ ದಾಟಲು ಯತ್ನಿಸುತ್ತಿದ್ದ ವೇಳೆಯಲ್ಲೇ ನಿಯಂತ್ರಣ ತಪ್ಪಿ ಬಂದ ದ್ವಿಚಕ್ರ ವಾಹನವೊಂದು ಅವರಿಗೆ ರಭಸದಿಂದ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ವೆಂಕಣ್ಣ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕೊತ್ತಗೂಡೆಂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇನ್ನು ದುರಂತವೆಂದರೆ, ಭೀಕರ ಅಪಘಾತ ಎಸಗಿದ ಸವಾರರು ಗಾಯಾಳು ಅಧಿಕಾರಿಗೆ ನೆರವಾಗುವ ಕನಿಷ್ಠ ಮಾನವೀಯತೆಯನ್ನೂ ಮೆರೆಯದೆ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ಸಿಸಿಟಿವಿಯಲ್ಲಿ ಸೆರೆ

ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಹೈದರಾಬಾದ್ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಹಾಗೂ ಸವಾರರ ಗುರುತು ಪತ್ತೆಹಚ್ಚಲು ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗಿದ್ದು, ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಸಾರ್ವಜನಿಕರ ರಕ್ಷಣೆಗಾಗಿ ಸದಾ ಸದ್ಧರಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆ ದುರಂತದಲ್ಲಿ ಕರ್ತವ್ಯದಲ್ಲಿದ್ದಾಗಲೇ ಪ್ರಾಣ ಕಳೆದುಕೊಂಡಿರುವುದು ತೆಲಂಗಾಣ ಪೊಲೀಸ್ ಬಳಗದಲ್ಲಿ ತೀವ್ರ ಕಂಬನಿ ಮೂಡಿಸಿದೆ.

ಇದನ್ನೂ ಓದಿ: ಪ್ರದೋಷ್ ‘ಅಪ್ರೂವರ್’ ಆದೇಶಕ್ಕೆ ಸವಾಲು: ವಿಚಾರಣಾ ನ್ಯಾಯಾಲಯದ ತೀರ್ಪು ರದ್ದತಿಗೆ ವಿಜಯಲಕ್ಷ್ಮಿ ರಿಟ್ ಅರ್ಜಿ!

Leave a Reply

Your email address will not be published. Required fields are marked *