Irregular Periods: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಅನಿಯಮಿತ ಮುಟ್ಟಿನ ಸಮಸ್ಯೆ: ಏಮ್ಸ್ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ!

1 in 5 Teen Girls Faces Irregular Periods AIIMS Survey Shows Doctors Say Not Always PCOS

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಪೋಷಕರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ. ದೆಹಲಿಯ ಏಮ್ಸ್ (AIIMS) ಸಂಸ್ಥೆಯು ನಡೆಸಿದ ಹೊಸ ಸಮೀಕ್ಷೆಯೊಂದರಲ್ಲಿ ಪ್ರತಿ ಐವರು ಹದಿಹರೆಯದ ಬಾಲಕಿಯರಲ್ಲಿ ಒಬ್ಬರು ಅನಿಯಮಿತ ಮುಟ್ಟಿನ (Irregular Periods) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆದರೆ, ಮುಟ್ಟು ಅನಿಯಮಿತವಾದ ತಕ್ಷಣವೇ ಅದು ಪಿಸಿಓಎಸ್ (PCOS) ಅಂದರೆ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ ಇರಲೇಬೇಕೆಂದೇನೂ ಇಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದಾರೆ

ವೈದ್ಯರು ಹೇಳೋದೇನು?

ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಸುಮಾರು ೪,೦೦೦ ವಿದ್ಯಾರ್ಥಿನಿಯರನ್ನು ಒಳಗೊಂಡು ೨೦೨೩ ರಿಂದ ನಡೆಸಲಾಗುತ್ತಿರುವ ಈ ಅಧ್ಯಯನದ ಕುರಿತು ಏಮ್ಸ್ ಶಿಶು ಎಂಡೋಕ್ರಿನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ರಜನಿ ಶರ್ಮಾ ವಿವರಣೆ ನೀಡಿದ್ದಾರೆ. ಋತುಮತಿಯಾದ ಮೊದಲ ಕೆಲವು ವರ್ಷಗಳಲ್ಲಿ ಹದಿಹರೆಯದವರಲ್ಲಿ ಮುಟ್ಟಿನ ಅವಧಿಯಲ್ಲಿ ಸಣ್ಣಪುಟ್ಟ ಏರಿಳಿತಗಳು ಕಂಡುಬರುವುದು ತೀರಾ ಸಾಮಾನ್ಯ. ಬಾಲಕಿಯ ವಯಸ್ಸು ಹಾಗೂ ಆಕೆ ಮುಟ್ಟಾಗಲು ಆರಂಭವಾಗಿ ಎಷ್ಟು ಸಮಯವಾಗಿದೆ ಎಂಬುದನ್ನು ಆಧರಿಸಿ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸಬೇಕಾಗುತ್ತದೆ. ಆದರೆ ಎರಡು ಮುಟ್ಟಿನ ನಡುವಿನ ಅಂತರ ೨೧ ದಿನಗಳಿಗಿಂತ ಕಡಿಮೆಯಿದ್ದರೆ, ೩೫ ದಿನಗಳಿಗಿಂತ ಹೆಚ್ಚಿದ್ದರೆ ಅಥವಾ ಸತತ ಮೂರು ತಿಂಗಳು ಮುಟ್ಟು ಸಂಪೂರ್ಣವಾಗಿ ನಿಂತುಹೋದರೆ ತಕ್ಷಣವೇ ವೈದ್ಯಕೀಯ ತಪಾಸಣೆ ಮಾಡಿಸುವುದು ಅತ್ಯಗತ್ಯ.

ಕೇವಲ ಅನಿಯಮಿತ ಮುಟ್ಟಿನ ಲಕ್ಷಣವೊಂದನ್ನೇ ಇಟ್ಟುಕೊಂಡು ಪಿಸಿಓಎಸ್ ಎಂದು ನಿರ್ಧರಿಸಲು ಸಾಧ್ಯವಿಲ್ಲ. ವೈದ್ಯರು ರಕ್ತದಲ್ಲಿ ಆಂಡ್ರೋಜೆನ್ ಹಾರ್ಮೋನ್‌ಗಳ ಪ್ರಮಾಣ ಹೆಚ್ಚಿರುವುದನ್ನು ಸೂಚಿಸುವ ಮುಖದ ಮೇಲೆ ಅತಿಯಾದ ಮೊಡವೆಗಳು, ದೇಹ ಮತ್ತು ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುವಂತಹ ಲಕ್ಷಣಗಳನ್ನು ಪರಿಶೀಲಿಸುತ್ತಾರೆ. ಅಲ್ಲದೆ, ಕೇವಲ ಸ್ಕ್ಯಾನಿಂಗ್ ಅಥವಾ ಅಲ್ಟ್ರಾಸೌಂಡ್ ವರದಿಯಲ್ಲಿ ಅಂಡಾಶಯದಲ್ಲಿ ಚೀಲಗಳು (Polycystic Ovaries) ಕಂಡುಬಂದ ಮಾತ್ರಕ್ಕೆ ಹದಿಹರೆಯದವರಲ್ಲಿ ಪಿಸಿಓಎಸ್ ಇದೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಡಾ. ರಜನಿ ತಿಳಿಸಿದ್ದಾರೆ.

ಜೀವನಶೈಲಿ ಬದಲಾವಣೆಯೇ ಪರಿಹಾರ

ಪಿಸಿಓಎಸ್ ಕೇವಲ ಮುಟ್ಟಿನ ಸಮಸ್ಯೆಗೆ ಮಾತ್ರ ಸೀಮಿತವಾಗಿರದೆ, ಸುದೀರ್ಘ ಅವಧಿಯಲ್ಲಿ ದೇಹದ ಇತರ ಅಂಗಾಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ನಿರೋಧಕತೆ ಹೆಚ್ಚಿ, ಅತಿಯಾದ ತೂಕ, ಟೈಪ್-೨ ಮಧುಮೇಹ, ಫ್ಯಾಟಿ ಲಿವರ್ ಮತ್ತು ರಕ್ತದಲ್ಲಿ ಕೊಬ್ಬಿನಂಶ ಏರುಪೇರಾಗುವಂತಹ ಸಮಸ್ಯೆಗಳು ತಲೆದೋರಬಹುದು. ಜೊತೆಗೆ ಮಾನಸಿಕವಾಗಿಯೂ ಆತಂಕ, ಖಿನ್ನತೆ, ಆಹಾರ ಸೇವನೆಯಲ್ಲಿ ಏರುಪೇರು ಮತ್ತು ದೇಹದ ಆಕಾರದ ಕುರಿತಾದ ಮಾನಸಿಕ ಒತ್ತಡಗಳು ಎದುರಾಗುತ್ತವೆ.

ಈ ಸಮಸ್ಯೆಗೆ ಅನಗತ್ಯವಾಗಿ ಔಷಧಿಗಳನ್ನು ಸೇವಿಸುವ ಬದಲು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳುವುದು ಅತ್ಯಂತ ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನಿತ್ಯ ದೈಹಿಕ ವ್ಯಾಯಾಮ, ಪ್ರೋಟೀನ್, ಹಣ್ಣುಗಳು ಹಾಗೂ ತರಕಾರಿಗಳನ್ನು ಒಳಗೊಂಡ ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಹದಿಹರೆಯದವರ ತೂಕದಲ್ಲಿ ತೀವ್ರವಾಗಿ ಏರಿಕೆಯಾಗದಂತೆ ನಿಗಾ ವಹಿಸುವುದು ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಚಯಾಪಚಯ (Metabolic) ಸಮಸ್ಯೆಗಳನ್ನು ತಡೆಯಲು ಅತ್ಯಂತ ಅಗತ್ಯವಾಗಿದೆ.

ಇದನ್ನೂ ಓದಿ: ದೇಹದಲ್ಲಿ ಉರಿಯೂತವೇ? ನಿಮ್ಮ ದೈನಂದಿನ ಆಹಾರದಲ್ಲಿದ್ದರೆ ಈ 5 ಪದಾರ್ಥಗಳು ಶಮನ ಖಂಡಿತ!

Leave a Reply

Your email address will not be published. Required fields are marked *