ಬೆಂಗಳೂರು: ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ (Crime) ಸಿನಿಮೀಯ ಮಾದರಿಯಲ್ಲಿ ನಡೆದಿದ್ದ ಸರಗಳ್ಳತನ ಯತ್ನ ಹಾಗೂ ಯುವತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳತನಕ್ಕೆ ಯತ್ನಿಸಿದ ಖದೀಮನನ್ನು ಸ್ಥಳೀಯರು ಸಾಹಸಿಕವಾಗಿ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ಅಕ್ಟೋಬರ್ 31 ರಂದು ಮಧ್ಯಾಹ್ನದ ವೇಳೆ ನಡೆದ ಈ ಸಂಪೂರ್ಣ ರೋಮಾಂಚಕಾರಿ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
100 ಫೀಟ್ ರಸ್ತೆಯಲ್ಲಿ ಸಿನಿಮೀಯ ಮಾದರಿಯ ಡ್ರಾಮಾ
ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಅಂಗಡಿಯೊಂದರ ಬಳಿ ನಿಂತಿದ್ದ ಯುವತಿಯನ್ನು ಗುರಿಯಾಗಿಸಿಕೊಂಡು ಬಂದ ಖದೀಮ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದಿಯಲು ಯತ್ನಿಸಿದ್ದಾನೆ. ಯುವತಿಯ ಬಳಿ ಬಂದು ದಿಢೀರನೆ ಚಾಕು ತೋರಿಸಿ ಬೆದರಿಸಿ ಸರ ನೀಡುವಂತೆ ಪೀಡಿಸಿದ್ದಾನೆ. ಭಯಗೊಂಡ ಯುವತಿ ತಕ್ಷಣವೇ ಸಮೀಪದ ಅಂಗಡಿಯೊಳಗೆ ಓಡಿ ಹೋಗಿದ್ದಾಳೆ.
ಆದರೆ, ಕಳ್ಳತನದ ಹುಚ್ಚಿನಲ್ಲಿದ್ದ ಖದೀಮ ಆಕೆಯನ್ನೇ ಹಿಂಬಾಲಿಸಿ ಅಂಗಡಿಯೊಳಗೆ ನುಗ್ಗಿ ಯುವತಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಯುವತಿ ಜೋರಾಗಿ ಚೀರಾಡಿದಾಗ ಅಂಗಡಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಆಕೆಯ ನೆರವಿಗೆ ಧಾವಿಸಿದ್ದಾರೆ.
ಯುವತಿ ಕುತ್ತಿಗೆಗೆ ಚಾಕು ಇಟ್ಟು ನಡುರಸ್ತೆಯಲ್ಲಿ ರಂಪಾಟ
ಜನರು ತನ್ನನ್ನು ಸುತ್ತವರಿಯುತ್ತಿದ್ದಂತೆ ಗಾಬರಿಗೊಂಡ ಖದೀಮ, ತನ್ನ ರಕ್ಷಣೆಗೆ ಯುವತಿಯನ್ನೇ ಮಾನವ ಗುರಾಣಿಯನ್ನಾಗಿ (Human Shield) ಬಳಸಿಕೊಂಡಿದ್ದಾನೆ. ಆಕೆಯ ಕುತ್ತಿಗೆಗೆ ಚಾಕು ಇಟ್ಟು “ಯಾರಾದರೂ ಹತ್ತಿರ ಬಂದರೆ ಈಕೆಯ ಕೊಲೆ ಮಾಡುತ್ತೇನೆ” ಎಂದು ಹೆದರಿಸುತ್ತಾ ನಡುರಸ್ತೆಯಲ್ಲೇ ಎಳೆದಾಡಿ ಸಿನಿಮೀಯ ಮಾದರಿಯಲ್ಲಿ ಹಂಗಾಮಾ ಸೃಷ್ಟಿಸಿದ್ದಾನೆ.
ಬಳಿಕ ಹೆಲ್ಮೆಟ್ ಧರಿಸಿಕೊಂಡೇ ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಒಂದರ ಬಳಿ ಬಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆತನ ಬೆದರಿಕೆಗೆ ಜಗ್ಗದ ಸಾರ್ವಜನಿಕರು ಆತನನ್ನು ಧೈರ್ಯವಾಗಿ ಹಿಡಿದು ಚೆನ್ನಾಗಿ ಧರ್ಮದೇಟು ನೀಡಿದ್ದಾರೆ. ಬಳಿಕ ತಕ್ಷಣವೇ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ಡೆಲಿವರಿ ಬಾಯ್ ಬಂಧನ: ಇಂದಿರಾನಗರ ಠಾಣೆಯಲ್ಲಿ ಕೇಸ್
ಬಂಧಿತ ಆರೋಪಿಯನ್ನು ಬೆಂಗಳೂರು ಮೂಲದ ಪ್ರಭುರಾಜ್ ಅಲಿಯಾಸ್ ರಾಜ್ ಎಂದು ಗುರುತಿಸಲಾಗಿದೆ. ಈತ ನಗರದಲ್ಲಿ ಡೆಲಿವರಿ ಬಾಯ್ (Delivery Boy) ಆಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ವಿಚಾರಣೆಯ ವೇಳೆ ಮನೆಯಲ್ಲಿ ತೀವ್ರ ಬಡತನವಿದ್ದು, ಹಣದ ತುರ್ತು ಅಗತ್ಯಕ್ಕಾಗಿ ಈ ರೀತಿ ಸರಗಳ್ಳತನಕ್ಕೆ ಇಳಿದಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: 68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಆರೋಪ: ಕೆಎಎಸ್ ಅಧಿಕಾರಿ ದುರ್ಗಾಶ್ರೀ ವಿರುದ್ಧ ಕ್ರಿಮಿನಲ್ ಕೇಸ್!
