TOP NEWS

Crime: ರಸ್ತೆ ವಿವಾದಕ್ಕೆ ವೃದ್ಧನ ಮೇಲೆ ಭೀಕರ ದಾಳಿ: ರೌಡಿ ಶೀಟರ್ ವಿನಯ್ ಬಂಧನ, ಮೂವರಿಗೆ ಶೋಧ!

Crime Road Dispute Turns Violent in Devanahalli Rowdy Sheeter Arrested for Brutal Attack on Elderly Man

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸೂಲುಕುಂಟೆ ಗ್ರಾಮದಲ್ಲಿ ಮನೆ ಬಳಿ ಓಡಾಡುವ ರಸ್ತೆ ವಿಚಾರವಾಗಿ ನಡೆದ ಗಲಾಟೆ ಇದೀಗ (Crime) ಭೀಕರ ಕೊಲೆ ಯತ್ನಕ್ಕೆ ತಿರುಗಿದೆ. ರಸ್ತೆಯ ಸಣ್ಣ ಗೊಂದಲದ ಕುರಿತು ಎರಡು ಗುಂಪುಗಳ ನಡುವೆ ಶುರುವಾದ ಜಗಳ ವಿಕೋಪಕ್ಕೆ ಹೋಗಿದ್ದು, ಗ್ರಾಮದ ಚೆನ್ನಮ್ಮ ಎಂಬುವವರ ಕುಟುಂಬದ ಮೇಲೆ ರೌಡಿಶೀಟರ್ ಹಾಗೂ ಆತನ ಬೆಂಬಲಿಗರು ಸರಣಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಏನಿದು ಪ್ರಕರಣ?

ಸೂಲುಕುಂಟೆ ಗ್ರಾಮದಲ್ಲಿ ರಸ್ತೆ ವಿಚಾರವಾಗಿ ಮಾತಿಗೆ ಮಾತು ಬೆಳೆದಾಗ, ರೌಡಿಶೀಟರ್ ವಿನಯ್ ಅಲಿಯಾಸ್ ವಿನೋದ್ ತನ್ನ ಆಪ್ತ ಸ್ನೇಹಿತರಾದ ಸುನೀಲ್, ಸುಮಂತ್ ಮತ್ತು ಅಭಿಷೇಕ್ ಎಂಬುವವರ ಜೊತೆ ಸೇರಿಕೊಂಡು ಚೆನ್ನಮ್ಮ ಅವರ ಕುಟುಂಬದ ಮೇಲೆ ಏಕಾಏಕಿ ಎರಗಿಬಿದ್ದಿದ್ದಾನೆ. ಈ ವೇಳೆ ವಿನಯ್ ಹಾಗೂ ಆತನ ಗ್ಯಾಂಗ್ ಮಾಡಿದ ಭೀಕರ ದಾಳಿಯಿಂದಾಗಿ ಚೆನ್ನಮ್ಮ ಅವರ ಪತಿ ವೆಂಕಟೇಶ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಕುರಿತು ನೊಂದ ಸಂತ್ರಸ್ತೆ ಚೆನ್ನಮ್ಮ ದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಕುಟುಂಬದ ಮೇಲೆ ಕೊಲೆ ಯತ್ನ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿ ರೌಡಿಶೀಟರ್ ವಿನಯ್ ಅಲಿಯಾಸ್ ವಿನೋದ್‌ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಈ ಭೀಕರ ಕೃತ್ಯದಿಂದ ಭಯಭೀತಗೊಂಡಿರುವ ಸೂಲುಕುಂಟೆ ಗ್ರಾಮಸ್ಥರು ಹಾಗೂ ನೊಂದ ಕುಟುಂಬದ ಸದಸ್ಯರು, ಗ್ರಾಮದಲ್ಲಿ ಶಾಂತಿ ಕಾಪಾಡಲು ರೌಡಿಶೀಟರ್ ವಿನಯ್‌ನನ್ನು ತಕ್ಷಣವೇ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಾದ ಸುನೀಲ್, ಸುಮಂತ್ ಮತ್ತು ಅಭಿಷೇಕ್ ಅವರನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸದ್ಯ ದೇವನಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ನಟ ಟೈಗರ್ ಶ್ರಾಫ್ ಫೈರಿಂಗ್ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಸೈಬರ್ ಶೂಟರ್ ಬಂಧನ!

Leave a Reply

Your email address will not be published. Required fields are marked *