TOP NEWS

HD Kumaraswamy: ಇ-ಮೇಲ್ ಪತ್ತೆಹಚ್ಚಲು ಯೋಗ್ಯತೆ ಇಲ್ಲದಿದ್ದರೆ ಯಾಕಿದ್ದೀರಿ?’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್‌ಡಿಕೆ ಆಕ್ರೋಶ!

If You Cant Trace the Email You Are Unfit HD Kumaraswamy Slams Home Minister Priyank Kharge

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’ ಪ್ರಕರಣವು (HD Kumaraswamy) ಕರ್ನಾಟಕ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಸ್ಟಿಂಗ್ ಆಪರೇಷನ್ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಬಳಿ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಪ್ರಸ್ತುತ ನಡೆಯುತ್ತಿರುವ ತನಿಖೆಯ ದಿಕ್ಕಿನ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಎದುರಿಸಿದವನು ನಾನು, ಈಗ ಅವರ ಮೇಲೆ ಅನುಕಂಪ ತೋರಿಸಲು ನಾನು ಮಾತನಾಡುತ್ತಿಲ್ಲ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ.

‘ಇ-ಮೇಲ್ ಹುಡುಕಲು ಯೋಗ್ಯತೆ ಇಲ್ಲವೇ?’: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್‌ಡಿಕೆ ಗರಂ

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಇ-ಮೇಲ್ ಮೂಲದ ಕುರಿತು ‘ಅದು ನನ್ನ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಪ್ರಮುಖ ಇ-ಮೇಲ್ ಮೂಲವನ್ನು ಪತ್ತೆಹಚ್ಚುವುದು ಗೃಹ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದರೆ ಇನ್ನಾವುದು ಬರುತ್ತದೆ? ನಿಮಗೆ ಅದನ್ನು ಕಂಡುಹಿಡಿಯುವ ಯೋಗ್ಯತೆ ಇಲ್ಲದಿದ್ದರೆ ಆ ಹುದ್ದೆಯಲ್ಲಿ ಏತಕ್ಕೆ ಇರಬೇಕು? ನೀವು ಆ ಸ್ಥಾನದಲ್ಲಿ ಇರಲು ಅನ್‌ಫಿಟ್” ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.

ಲೈಂಗಿಕ ಶೋಷಣೆಗೆ ಒಳಗಾದ ಯುವತಿಯನ್ನು ಈ ಸ್ಟಿಂಗ್ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಕರಣದ ನಿಜವಾದ ರೂವಾರಿಗಳನ್ನು ಪತ್ತೆ ಹಚ್ಚುವ ಬದಲು ತನಿಖೆಯ ಹಾದಿಯನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತಿದೆ ಎಂದು ಆಪಾದಿಸಿದರು.

‘ಕೊಲೆ ಮಾಡಿದವರನ್ನು ಬಿಟ್ಟು, ಕೊಲೆ ಎಂದು ಕೂಗಿದವರ ಮೇಲೆ ತನಿಖೆ’

ಸರ್ಕಾರದ ತನಿಖಾ ಶೈಲಿಯನ್ನು ಲೇವಡಿ ಮಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದು ಸರಿ ಇದೆ. ಆದರೆ ಪ್ರಸ್ತುತ ಸ್ಥಿತಿ ಹೇಗಿದೆಯೆಂದರೆ, ಕೊಲೆ ಮಾಡಿದವರನ್ನು ಹಿಡಿಯುವ ಬದಲು ‘ಕೊಲೆ ಆಯ್ತು’ ಎಂದು ಕೂಗಿದವರ ಮೇಲೆಯೇ ತನಿಖೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಈ ಸ್ಟಿಂಗ್ ಆಪರೇಷನ್ ಸಂಚು ನಡೆದಿದೆ ಎಂಬುದನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅವರನ್ನು ನಾನು ರಾಜಕೀಯವಾಗಿ ವಿರೋಧಿಸಿರಬಹುದು, ಆದರೆ ನಮಗೆ ಅವರ ಮೇಲೆ ಹೊಟ್ಟೆಕಿಚ್ಚೂ ಇಲ್ಲ, ಅನುಕಂಪವೂ ಇಲ್ಲ. ಸತ್ಯ ಹೊರಬರಬೇಕು ಅಷ್ಟೇ” ಎಂದರು.

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ವಾರ್ನಿಂಗ್: ಕಾದು ನೋಡೋಣ ಎಂದ ಕುಮಾರಸ್ವಾಮಿ

ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಹೆಚ್‌ಡಿಕೆ, “ನನ್ನ ವಿರುದ್ಧ ನಡೆಯುತ್ತಿರುವ ಈ ಸರಣಿ ತೇಜೋವಧೆ ಕೃತ್ಯಗಳು ಹೀಗೆಯೇ ಮುಂದುವರಿದರೆ, ಮುಂದಿನ ಯಾವುದೇ ಚುನಾವಣೆಗಳಲ್ಲಿ ನಾನು ಪಕ್ಷದ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. ತಮ್ಮದೇ ಸರ್ಕಾರದ ಸಚಿವರು ಮತ್ತು ನಾಯಕರ ನಡವಳಿಕೆ ಬಗ್ಗೆ ರಾಹುಲ್ ಗಾಂಧಿಗೆ ದೂರು ಕೊಟ್ಟಿದ್ದಾರೆ. ಈ ದೂರಿನ ಬಳಿಕ ರಾಹುಲ್ ಗಾಂಧಿ ಅವರು ರಾಜ್ಯ ಸರ್ಕಾರಕ್ಕೆ ಏನು ಸೂಚನೆ ನೀಡಲಿದ್ದಾರೆ ಮತ್ತು ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣ” ಎಂದು ಹೇಳಿದರು.

ಇದನ್ನೂ ಓದಿ: ರಾಜಣ್ಣ ನಂಬಿಕೆದ್ರೋಹ ಮಾಡುತ್ತಿದ್ದಾರೆ: ಹೈಕಮಾಂಡ್‌ಗೆ ದೂರು ನೀಡಲು ಬಾಲಕೃಷ್ಣ ಸಿದ್ಧತೆ

Leave a Reply

Your email address will not be published. Required fields are marked *