Viral: ಕಾಂಬೋಡಿಯಾ ಪ್ರೇಯಸಿ ಜೊತೆ ಹಸೆಮಣೆ ಏರಲು ಕುಖ್ಯಾತ ಕೈದಿಗೆ 12 ಗಂಟೆ ಪರೋಲ್: ಜೈಲಿನ ಬಳಿಯೇ ಮದುವೆ!

12 Hour Parole for Criminal Facing 22 Charges Ties the Knot Under Strict Police Security

ನವದೆಹಲಿ: ಹರಿಯಾಣದ ಝಜ್ಜರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಅಪರಾಧಿ ಮೈನ್ಪಾಲ್ ಧಿಲ್ಲಾಗೆ ಆತನ ಕಾಂಬೋಡಿಯಾ ಮೂಲದ ಪ್ರೇಯಸಿಯನ್ನು(Viral) ವರಿಸಲು ಹರಿಯಾಣ ನ್ಯಾಯಾಲಯವು ಕೇವಲ 12 ಗಂಟೆಗಳ ಕಾಲಾವಧಿಯ ‘ಕಸ್ಟಡಿ ಪರೋಲ್’ ಮಂಜೂರು ಮಾಡಿದೆ. ಈ ಅಪರೂಪದ ಮದುವೆಗಾಗಿ ಆತನಿಗೆ ಬೆಳಿಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ ಜೈಲಿನಿಂದ ಹೊರಬರಲು ಅವಕಾಶ ನೀಡಲಾಗಿದ್ದು, ಜೈಲಿನ ಸಮೀಪದಲ್ಲೇ ಇರುವ ಫಾರ್ಮ್‌ಹೌಸ್‌ ಒಂದರಲ್ಲಿ ಮದುವೆ ಸಮಾರಂಭ ನಡೆಯಲಿದೆ. ವಿವಾಹದ ಶಾಸ್ತ್ರಗಳು ಪೂರ್ಣಗೊಂಡ ತಕ್ಷಣವೇ ಆತನನ್ನು ಮತ್ತೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಜೈಲಿಗೆ ಕರೆದೊಯ್ಯಲಾಗುತ್ತದೆ.

ಗಮನ ಸೆಳೆದ ವಧು

ಈ ಮದುವೆಯು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಗಮನ ಸೆಳೆಯಲು ಕಾರಣ ವಧು ಮೇಟಾ ಚಾನ್. ಈಕೆ ಆಗ್ನೇಯ ಏಷ್ಯಾದ ದೇಶವಾದ ಕಾಂಬೋಡಿಯಾದ ಪ್ರಜೆಯಾಗಿದ್ದಾಳೆ. ಈ ಹಿಂದೆ ಪರೋಲ್ ಮೇಲಿದ್ದಾಗ ಭಾರತದಿಂದ ತಲೆಮರೆಸಿಕೊಂಡು ಕಾಂಬೋಡಿಯಾಗೆ ಓಡಿಹೋಗಿದ್ದ ಧಿಲ್ಲಾ, ಅಲ್ಲಿ ಮೇಟಾ ಚಾನ್ ಎಂಬಾಕೆಯನ್ನು ಪರಿಚಯಿಸಿಕೊಂಡಿದ್ದನು. ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದು, ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದಾರೆ. ಇದೀಗ ಧಿಲ್ಲಾನನ್ನು ಮದುವೆಯಾಗಲು ಮೇಟಾ ಚಾನ್ ತನ್ನ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದು, ನಾಲ್ಕನೇ ಮಗು ಕಾಂಬೋಡಿಯಾದಲ್ಲೇ ಉಳಿದುಕೊಂಡಿದೆ.

ಯಾರಿದು ಧಿಲ್ಲಾ?

ಝಜ್ಜರ್‌ನ ಬಾದ್ಲಿ ಮೂಲದ ಮೈನ್ಪಾಲ್ ಧಿಲ್ಲಾ ಸಣ್ಣಪುಟ್ಟ ಅಪರಾಧಿಯಲ್ಲ. ಆತನ ವಿರುದ್ಧ ಕೊಲೆ ಸೇರಿದಂತೆ ಸುಮಾರು ೨೨ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ೨೦೦೭ ಮತ್ತು ೨೦೧೦ರಲ್ಲಿ ನಡೆದ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಆತನಿಗೆ ಹಿಸಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಷ್ಟೇ ಅಲ್ಲದೆ, ಜೈಲಿನ ಒಳಗಿರುವಾಗಲೇ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪವೂ ಆತನ ಮೇಲಿದೆ. ೨೦೧೮ರ ಜುಲೈನಲ್ಲಿ ಆತನಿಗೆ ಆರು ವಾರಗಳ ಪರೋಲ್ ಸಿಕ್ಕಾಗ, ಆ ಅವಕಾಶವನ್ನು ಬಳಸಿಕೊಂಡು ‘ಸೋನು ಕುಮಾರ್’ ಎಂಬ ನಕಲಿ ಗುರುತಿನ ಚೀಟಿ ಬಳಸಿ ದೇಶ ತೊರೆದು ಕಾಂಬೋಡಿಯಾಗೆ ಪರಾರಿಯಾಗಿದ್ದನು.

ಕಾಂಬೋಡಿಯಾದಲ್ಲಿ ತನ್ನ ಗುರುತು ಮರೆಮಾಚಿ ಉದ್ಯಮ ನಡೆಸುತ್ತಿದ್ದ ಧಿಲ್ಲಾ ಕುರಿತು ತನಿಖಾ ಸಂಸ್ಥೆಗಳಿಗೆ ಸುಳಿವು ಸಿಕ್ಕಿತ್ತು. ಹರಿಯಾಣ ಪೊಲೀಸರ ಮನವಿಯ ಮೇರೆಗೆ ಸಿಬಿಐ, ಇಂಟರ್‌ಪೋಲ್ ಮೂಲಕ ಆತನ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ ಹೊರಡಿಸುವಂತೆ ಮಾಡಿತ್ತು. ತರುವಾಯ ಕಾಂಬೋಡಿಯಾ ಅಧಿಕಾರಿಗಳ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಿ, ಕಳೆದ ವರ್ಷ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಇದೀಗ ಜೈಲು ಹಕ್ಕಿಯಾಗಿದ್ದರೂ, ಪ್ರೇಯಸಿಯೊಂದಿಗೆ ಮದುವೆಯಾಗಲು ೧೨ ಗಂಟೆಗಳ ಕಾಲ ಆತನಿಗೆ ಪರೋಲ್ ಭಾಗ್ಯ ಸಿಕ್ಕಿರುವುದು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಉತ್ತರ ಭಾರತದ 4 ರಾಜ್ಯಗಳ ಪುರುಷರಿಗೆ ನೋ ಎಂಟ್ರಿ: ‘ಎ1 ಸ್ಪೋರ್ಟ್ಸ್’ ಸಂಸ್ಥಾಪಕ ಕಾರ್ತಿಕ್ ಹೊಸ ವಿವಾದ!

Leave a Reply

Your email address will not be published. Required fields are marked *