TOP NEWS

Share Market: ಷೇರು ಮಾರುಕಟ್ಟೆಯಲ್ಲಿ ತೀವ್ರ ರಕ್ತಪಾತ: ಸೆನ್ಸೆಕ್ಸ್ 1,247, ನಿಫ್ಟಿ 384 ಅಂಕ ಕುಸಿತ!

Crash Sensex Plummets 1 247 Points Nifty Down 384 in Sharp Sell Off

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಎದುರಾಗಿರುವ ತೀವ್ರ ಹಿನ್ನಡೆ ಹಾಗೂ ಅಮೆರಿಕದ ಸಾಲಪತ್ರಗಳ (ಬಾಂಡ್) ಮಾರಾಟದ ಭೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share Market) ಗುರುವಾರ ಭಾರಿ ಕುಸಿತ ಕಂಡುಬಂದಿದೆ. ದಿನದ ಆರಂಭದಲ್ಲೇ ಕಡಿದಾದ ಹಾದಿ ಹಿಡಿದ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ವಹಿವಾಟಿನ ಅಂತ್ಯದ ವೇಳೆಗೆ ತೀವ್ರ ಕುಸಿತದೊಂದಿಗೆ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ ಬರೋಬ್ಬರಿ ೧,೨೪೭ ಅಂಕಗಳಷ್ಟು ಸಾರ್ವತ್ರಿಕ ಕುಸಿತ ಕಂಡರೆ, ನಿಫ್ಟಿ ೩೮೪ ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರಿಗೆ ತೀವ್ರ ಆಘಾತ ನೀಡಿದೆ.

ಹೂಡಿಕೆದಾರರಿಗೆ ಭಾರೀ ನಷ್ಟ

ಬ್ಯಾಂಕಿಂಗ್, ಐಟಿ ಹಾಗೂ ಲೋಹದ ವಲಯದ ಶೇರುಗಳು ಭಾರಿ ಕುಸಿತ ಕಂಡಿದ್ದರಿಂದ ಒಂದೇ ದಿನದಲ್ಲಿ ಹೂಡಿಕೆದಾರರ ಬಂಡವಾಳದಲ್ಲಿ ಸುಮಾರು ೩.೫೪ ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ನಷ್ಟವಾಗಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಬುಧವಾರದ ೪೮೫.೦೧ ಟ್ರಿಲಿಯನ್ ರೂಪಾಯಿಗಳಿಂದ ೪೮೧.೪೭ ಟ್ರಿಲಿಯನ್ ರೂಪಾಯಿಗಳಿಗೆ ಕುಸಿದಿದೆ. ಇದರೊಂದಿಗೆ ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ನಿಫ್ಟಿ ಭಾರತೀಯ ಚಂಚಲತೆ ಸೂಚ್ಯಂಕವು ಶೇಕಡಾ ೨೭.೪೪ ರಷ್ಟು ಏರಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇನ್ನಷ್ಟು ಚಂಚಲತೆ ಇರಲಿದೆ ಎಂಬ ಸೂಚನೆ ನೀಡಿದೆ.

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಹಠಾತ್ ಕುಸಿತಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಮತ್ತೊಮ್ಮೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ಬಲವಾದ ನಿರೀಕ್ಷೆಗಳೇ ಮುಖ್ಯ ಕಾರಣವಾಗಿವೆ. ಅಮೆರಿಕದ ೧೦ ವರ್ಷಗಳ ಬಾಂಡ್ ಇಳುವರಿಯು ಇತ್ತೀಚೆಗೆ ಶೇಕಡಾ ೫ ಕ್ಕಿಂತ ಹೆಚ್ಚಾಗಿದ್ದು, ಜಾಗತಿಕವಾಗಿ ಬಡ್ಡಿದರಗಳು ದೀರ್ಘಕಾಲದವರೆಗೆ ಅಧಿಕವಾಗಿರುತ್ತವೆ ಎಂಬ ಆತಂಕವನ್ನು ಸೃಷ್ಟಿಸಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುವ ಅಮೆರಿಕದ ಬಾಂಡ್‌ಗಳ ಇಳುವರಿ ಹೆಚ್ಚಾದಾಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂಪಡೆದು ಅಮೆರಿಕದ ಮಾರುಕಟ್ಟೆಗಳತ್ತ ಕೊಂಡೊಯ್ಯುತ್ತಾರೆ. ಇದರಿಂದಾಗಿ ಭಾರತೀಯ ರೂಪಾಯಿ ಮೌಲ್ಯದ ಮೇಲೆಯೂ ತೀವ್ರ ಒತ್ತಡ ಉಂಟಾಗುತ್ತದೆ.

ಇದರ ಜೊತೆಗೆ ಜಾಗತಿಕವಾಗಿ ಕಚ್ಚಾ ತೈಲ ದರದಲ್ಲಿ ಕಂಡುಬಂದಿರುವ ಏರಿಕೆಯು ಭಾರತಕ್ಕೆ ದ್ವಿಗುಣ ಹೊಡೆತ ನೀಡಿದೆ. ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಶೇಕಡಾ ೮೦ ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಏರಿಕೆಯು ಹಣದುಬ್ಬರವನ್ನು ಹೆಚ್ಚಿಸಿ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಪಾನ್‌ನ ೧೦ ವರ್ಷಗಳ ಸರ್ಕಾರಿ ಬಾಂಡ್ ಇಳುವರಿ ಶೇಕಡಾ ೩.೦೮ ಕ್ಕೆ ತಲುಪಿದ್ದು, ಇದು ೧೯೯೬ ರ ನಂತರದ ಗರಿಷ್ಠ ಮಟ್ಟವಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುರೋಪ್‌ನ ಬಾಂಡ್ ಮಾರುಕಟ್ಟೆಗಳಲ್ಲೂ ಬಡ್ಡಿದರಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಜಾಗತಿಕ ಆರ್ಥಿಕ ವಾತಾವರಣವು ಕಠಿಣ ಸವಾಲನ್ನು ಒಡ್ಡುತ್ತಿದೆ.

ಈ ಎಲ್ಲಾ ಆತಂಕಗಳ ನಡುವೆಯೂ ಭಾರತದ ತಯಾರಿಕಾ ವಲಯವು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಮಂಗಳಂ ವರ್ಲ್ಡ್‌ವೈಡ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಗುಪ್ತ್ ಪ್ರಕಾಶ್ ಮಂಗಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ತಯಾರಿಕಾ ಪಿಎಂಐ (PMI) ೫೫.೭ ರಷ್ಟಿರುವುದು ದೇಶೀಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಇರುವುದನ್ನು ತೋರಿಸುತ್ತದೆ. ಉತ್ಪಾದನಾ ವೆಚ್ಚದ ಒತ್ತಡ ಕಡಿಮೆಯಾಗಿರುವುದು ಉದ್ಯಮಗಳಿಗೆ ಸಮಾಧಾನ ತಂದಿದೆಯಾದರೂ, ಜಾಗತಿಕ ಮಾರುಕಟ್ಟೆಯಲ್ಲಿ ಎದುರಾಗಿರುವ ಚಂಚಲತೆಯಿಂದಾಗಿ ರಫ್ತು ಆರ್ಡರ್‌ಗಳು ಮಂದಗತಿಯಲ್ಲಿವೆ. ಹೀಗಾಗಿ ಉತ್ಪಾದಕರು ಮುಂಬರುವ ದಿನಗಳಲ್ಲಿ ದಕ್ಷತೆಯನ್ನು ಹೆಚ್ಚಿಸಿಕೊಂಡು ರಫ್ತು ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್ 28ರಿಂದ ಸತತ 3 ದಿನ ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಭಾನುವಾರ ಕೆಲಸ ಮಾಡಲು ಆರ್‌ಬಿಐ ಗ್ರೀನ್ ಸಿಗ್ನಲ್!

Leave a Reply

Your email address will not be published. Required fields are marked *