ನವದೆಹಲಿ: ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಸತತ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೂ (Bank Strike) ಮುನ್ನ, ತಮ್ಮ ತುರ್ತು ಹಣಕಾಸು ವಹಿವಾಟುಗಳನ್ನು ಪೂರ್ಣಗೊಳಿಸಲು ಬ್ಯಾಂಕ್ ಗ್ರಾಹಕರಿಗೆ ಒಂದು ಹೆಚ್ಚುವರಿ ದಿನದ ಸಿಹಿ ಸುದ್ದಿ ಲಭಿಸಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ೨೬ರಂದು ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ ೨೭ರಂದು ಭಾನುವಾರ ಇರುವುದರಿಂದ ಬ್ಯಾಂಕುಗಳಿಗೆ ಸಾಪ್ತಾಹಿಕ ರಜೆ ಇರುತ್ತದೆ. ಇದರ ಬೆನ್ನಲ್ಲೇ ಮೂರು ದಿನಗಳ ಮುಷ್ಕರವೂ ಸೇರಿಕೊಂಡರೆ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವ ಭೀತಿ ಎದುರಾಗಿತ್ತು. ಈ ಸಂಕಷ್ಟವನ್ನು ತಪ್ಪಿಸಲು ಕೇಂದ್ರ ಹಣಕಾಸು ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಸೆಪ್ಟೆಂಬರ್ ೨೭ರ ಭಾನುವಾರದಂದು ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಯಥಾರೀತಿ ಬಾಗಿಲು ತೆರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ಓಪನ್ ಇರಲಿದೆ ಬ್ಯಾಂಕ್
ಭಾನುವಾರದಂದು ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ ಆಧಾರಿತ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಕಾರ್ಯನಿರ್ವಹಿಸಲು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ಒಪ್ಪಿಗೆ ನೀಡಿದೆ. ಇದರಿಂದಾಗಿ ಮುಷ್ಕರ ಆರಂಭವಾಗುವ ಮುನ್ನವೇ ಗ್ರಾಹಕರು ಭಾನುವಾರ ಬ್ಯಾಂಕುಗಳಿಗೆ ತೆರಳಿ ತಮ್ಮ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಗ್ರಾಹಕರ ಕ್ಷೇಮಾಭಿವೃದ್ಧಿ ಮತ್ತು ಅನುಕೂಲಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಮುಷ್ಕರವನ್ನು ಹಿಂಪಡೆಯುವಂತೆ ಬ್ಯಾಂಕ್ ಯೂನಿಯನ್‌ಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಭಂಗ ಬಾರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುಮಾರು ಶೇಕಡಾ ೯೦ರಷ್ಟು ಬ್ಯಾಂಕ್ ನೌಕರರನ್ನು ಪ್ರತಿನಿಧಿಸುವ ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್’ (ಯುಎಫ್‌ಬಿಯು) ಈ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಕೆಲಸದ ಅವಧಿ ಜಾರಿಗೊಳಿಸುವುದು ಇವರ ಮುಖ್ಯ ಬೇಡಿಕೆಯಾಗಿದೆ. ಈ ಕುರಿತು ಡೆಪ್ಯುಟಿ ಚೀಫ್ ಲೇಬರ್ ಕಮಿಷನರ್ ಹಾಗೂ ಯುಎಫ್‌ಬಿಯು ಪ್ರತಿನಿಧಿಗಳ ನಡುವೆ ನಡೆದ ಸಂಧಾನ ಸಭೆಯು ಯಾವುದೇ ಅಂತಿಮ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ. ಐದು ದಿನಗಳ ಬ್ಯಾಂಕಿಂಗ್ ಬೇಡಿಕೆ ಈಡೇರಿಕೆಗೆ ಸರ್ಕಾರದಿಂದ ಸಕಾರಾತ್ಮಕ ಭರವಸೆ ಸಿಕ್ಕರೆ ಮಾತ್ರ ಮುಷ್ಕರ ಹಿಂಪಡೆಯುವ ಬಗ್ಗೆ ಆಲೋಚಿಸುವುದಾಗಿ ಯೂನಿಯನ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಮುಷ್ಕರಕ್ಕೆ ಕಾರಣವೇನು?
ಪಿಂಚಣಿ ನವೀಕರಣ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ಬದಲಾಯಿಸಲು ನೌಕರರಿಗೆ ಅವಕಾಶ ನೀಡುವುದು ಇವರ ಇತರ ಪ್ರಮುಖ ಬೇಡಿಕೆಗಳಾಗಿವೆ. ಇನ್ನು ಮುಷ್ಕರದ ಅವಧಿಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಯುಪಿಐ ನಂತಹ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳಲು ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಮನವಿ ಮಾಡಿವೆ. ಸೆಪ್ಟೆಂಬರ್ ೩೦ ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿರುವುದರಿಂದ ಈ ಮುಷ್ಕರವು ಹಣಕಾಸು ವಹಿವಾಟು ಹಾಗೂ ಮಾರುಕಟ್ಟೆ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಕ್ಟೋಬರ್ 15 ರಿಂದ ಯುಪಿಐ ನಿಯಮ ಬದಲಾವಣೆ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶೇ. 0.4 ಎಂಡಿಆರ್ ದರ ಜಾರಿ!
