TOP NEWS

Nikhil Kumaraswamy: ರಾಮನಗರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ: ಪ್ರತಿಭಟನಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ!

Delay in Pensions Sparks Protest JDS Youth President Nikhil Kumaraswamy Joins Differently-Abled Rally

ರಾಮನಗರ: ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು ಭಾರೀ ಬೆಂಬಲ ವ್ಯಕ್ತವಾಯಿತು. ರಾಜ್ಯ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ಬೆಂಬಲ ಸೂಚಿಸಿದರು.

ವಿಕಲಚೇತನರ ಬೇಡಿಕೆ ಏನು?

ಕಳೆದ 6-7 ತಿಂಗಳಿನಿಂದ ವೃದ್ಧರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಮಾಸಾಶನ (ಪಿಂಚಣಿ) ಬಂದಿಲ್ಲ. ಮಾಸಾಶನವನ್ನು 1000 ದಿಂದ 2000ಕ್ಕೆ ಏರಿಸಬೇಕು, ಗೌರವಧನ ಹೆಚ್ಚಿಸಬೇಕು, ಬಾಕಿ ಇರುವ ಪಿಂಚಣಿ ಕೂಡಲೇ ಬಿಡುಗಡೆ ಮಾಡಬೇಕು, ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಆದ್ಯತೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಮನಗರ ಜಿಲ್ಲೆಯ ನೂರಾರು ವಿಕಲಚೇತನರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ.

ನಿಮ್ಮ ಜೊತೆ ದೇವೇಗೌಡರ ಕುಟುಂಬ ಇರುತ್ತೆ” – ನಿಖಿಲ್ ಭರವಸೆ

ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು,
“ನಿಮ್ಮ ಹೋರಾಟದ ಕೊನೆಯವರೆಗೂ ನಾನು ನಿಮ್ಮ ಜೊತೆ ಇರುತ್ತೇನೆ. ನೀವು ಯಾರೂ ಧೃತಿಗೆಡಬೇಡಿ. ನಿಮ್ಮ ಜೊತೆ ದೇವೇಗೌಡರ ಕುಟುಂಬ ಸದಾ ಇರುತ್ತದೆ. ನಿಮ್ಮ ಈ ಹೋರಾಟದಲ್ಲಿ ಜೆಡಿಎಸ್ ಪಕ್ಷ ನಿಮ್ಮ ಬೆನ್ನಿಗೆ ನಿಲ್ಲುತ್ತದೆ” ಎಂದು ಭರವಸೆ ನೀಡಿದರು.

ಸರ್ಕಾರ ದಿವಾಳಿ ಹಂತಕ್ಕೆ: ಆರ್ಥಿಕ ಇಲಾಖೆ ಪತ್ರ ಬಹಿರಂಗ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈಗಿನ ಸರ್ಕಾರ ನಿಮ್ಮನ್ನು ಬೀದಿಗೆ ಬಿಟ್ಟಿದೆ. ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಆರ್ಥಿಕ ಇಲಾಖೆಯೇ ಸಾಕ್ಷಿ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಸಂಪದ್ಭರಿತ ರಾಜ್ಯವನ್ನು ಈ ಸರ್ಕಾರ ದಿವಾಳಿ ಮಾಡಿದೆ.

ಆರ್ಥಿಕ ಇಲಾಖೆಯ ಪತ್ರ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಬಾರದು ಎಂದು ಸ್ವತಃ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯದ ಸಾಲ ಗರಿಷ್ಠ ಮಿತಿಯನ್ನು ತಲುಪಿದೆ. ವಿವಿಧ ಇಲಾಖೆಗಳಿಗೆ ಗುತ್ತಿಗೆದಾರರಿಗೆ ಸುಮಾರು 36 ಸಾವಿರ ಕೋಟಿ ರೂ.ಗೂ ಹೆಚ್ಚು ಹಣದ ಬಿಲ್ ಪಾವತಿ ಬಾಕಿ ಇದೆ.

ವೃದ್ಧರು, ವಿಶೇಷ ಚೇತನರು, ವಿಧವೆಯರಿಗೆ ಪಿಂಚಣಿ ಕೊಡಲು ಹಣವಿಲ್ಲ ಎಂದು ಹೇಳುವ ಸರ್ಕಾರ, ಮಂಗಳೂರಿನಲ್ಲಿ 32,000 ಕೋಟಿ ರೂ. ಯೋಜನೆ ಘೋಷಣೆ ಮಾಡುತ್ತದೆ. ಹಿಂದೆ ಕಲಬುರಗಿಯಲ್ಲಿ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ಏನಾಯಿತು? ಕೇವಲ ಘೋಷಣೆ ಮಾತ್ರ ಆಗುತ್ತಿದೆ, ಯಾವುದೂ ಅನುಷ್ಠಾನಕ್ಕೆ ಬರುತ್ತಿಲ್ಲ. ಇದು ಸಂಪದ್ಭರಿತ ನಾಡು, ಆದರೆ ಈ ಸರ್ಕಾರದ ಮ್ಯಾನೇಜ್ಮೆಂಟ್ ಸರಿಯಿಲ್ಲ” ಎಂದು ಕಿಡಿಕಾರಿದರು.

ಬಿಡದಿ ರೈತರ ಉಪವಾಸ ಸತ್ಯಾಗ್ರಹ: ಶುಕ್ರವಾರ ಭೇಟಿ

ಬಿಡದಿ ಬಳಿ ಟೌನ್ ಶಿಪ್ ವಿರುದ್ಧ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ,

ಬಿಡದಿ ಯೋಜನೆ ಬಗ್ಗೆ ಸಮಿತಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿ ಎರಡು ತಿಂಗಳಾಗಿದೆ. ಆದರೆ ಸಮಿತಿಯ ಯಾವ ಸದಸ್ಯರೂ ಇಲ್ಲಿಯವರೆಗೆ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿಲ್ಲ. ನಾವು ರೈತರ ಪರವಾಗಿ ಕಾನೂನು ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ಆಬ್ಜೆಕ್ಷನ್ ಫೈಲ್ ಮಾಡಲು ವಿಳಂಬ ಮಾಡುತ್ತಿದೆ. ಒಂದು ವೇಳೆ ವಾದ-ಪ್ರತಿವಾದ ಶುರುವಾದರೆ ಸರ್ಕಾರಕ್ಕೆ ಹಿನ್ನಡೆಯಾಗಿ ಪ್ರಾಜೆಕ್ಟ್ ಗೆ ಸ್ಟೇ ಸಿಗುತ್ತದೆ ಎಂಬ ಭಯ ಸರ್ಕಾರಕ್ಕೆ ಕಾಡುತ್ತಿದೆ.

ಸದ್ಯ ಭೈರಮಂಗಲದಲ್ಲಿ ರೈತರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಮೂರು-ನಾಲ್ಕು ಜನ ರೈತರು ಅಸ್ವಸ್ಥರಾಗಿದ್ದಾರೆ. ಆದರೂ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಬಂದು ರೈತರ ಆರೋಗ್ಯ ವಿಚಾರಿಸಿಲ್ಲ, ಸಮಸ್ಯೆ ಆಲಿಸಿಲ್ಲ. ನಾನು ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಜೊತೆ ಮಾತನಾಡುತ್ತೇನೆ. ಮಾಜಿ ಪ್ರಧಾನಿಗಳಾದ ಶ್ರೀ ದೇವೇಗೌಡರು ಕೂಡ ಈ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅಗತ್ಯ ಬಿದ್ದರೆ ದೇವೇಗೌಡರೇ ಖುದ್ದು ಭೈರಮಂಗಲ ಗ್ರಾಮಕ್ಕೆ ಬರಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.

ಸೆ.28 ರಿಂದ ಸಿಎಂ ಕ್ಷೇತ್ರದಿಂದಲೇ ಸ್ವಾಭಿಮಾನಿ ರೈತ ಯಾತ್ರೆ

ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, “ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಆಲಿಸಲು ನಾನು ಸ್ವಾಭಿಮಾನಿ ರೈತ ಯಾತ್ರೆ ಮಾಡುತ್ತಿದ್ದೇನೆ. ಈ ಯಾತ್ರೆಯನ್ನು ಸೆಪ್ಟೆಂಬರ್ 28 ರಿಂದ ಮುಖ್ಯಮಂತ್ರಿಗಳ ಸ್ವಕ್ಷೇತ್ರದಿಂದಲೇ ಆರಂಭಿಸುತ್ತೇವೆ.

ಮುಖ್ಯಮಂತ್ರಿಗಳು ರಾಜ್ಯದೆಲ್ಲೆಡೆ ಓಡಾಡುತ್ತಿದ್ದಾರೆ, ಆದರೆ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲು ಅವರಿಗೆ ಸಮಯವಿಲ್ಲ. ಹಾಗಾಗಿ ನಾವೇ ಖುದ್ದು ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ, ರೈತರ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಮುಖಂಡರು ಉಪಸ್ಥಿತಿ

ಈ ಸಂದರ್ಭದಲ್ಲಿ ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಶ್ರೀ ಕಾಂತರಾಜು, ಉಮೇಶ್, ಬಾಲಗೆರೆ ರವಿ, ಅಂಜನಾಪುರ ವಾಸು, ಪಾಂಡು, ಚಂದ್ರು, ದೇವರಾಜು, ಸೇರಿದಂತೆ ತಾಲ್ಲೂಕಿನ ಪ್ರಮುಖ ಮುಖಂಡರು, ಕಾರ್ಯಕರ್ತರು ಮತ್ತು ನೂರಾರು ವಿಕಲಚೇತನರು ಉಪಸ್ಥಿತರಿದ್ದರು.

ಇದನ್ನೂ ಓದಿ:  ‘ವಂದೇ ಮಾತರಂ’ ಆದೇಶಕ್ಕೆ ರಾಜ್ಯಪಾಲರ ಕಠಿಣ ಆಕ್ಷೇಪ: ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರಕ್ಕೆ 4 ಪುಟಗಳ ಪತ್ರ!

Leave a Reply

Your email address will not be published. Required fields are marked *