ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1,08,75,304 (ಶೇ. 19) ಮತದಾರರನ್ನು ಎಎಸ್‌ಡಿಡಿಒ (ASDDO) ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಅವರು ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಗಟ್ಟೆ ಅಧಿಕಾರಿಗಳು (BLO) ಮನೆ ಮನೆಗೆ ಸಮೀಕ್ಷೆಗಾಗಿ ತೆರಳಿದಾಗ ಮತದಾರರು ಸಿಗದೇ ಇದ್ದರೆ ಅವರನ್ನು ‘ಪತ್ತೆಯಾಗದವರು’ (Absent) ಎಂದೂ, ಮನೆ ಬದಲಾಯಿಸಿದ್ದರೆ ‘ಸ್ಥಳಾಂತರ’ (Shifted) ಎಂದೂ ಹಾಗೂ ಮೃತಪಟ್ಟಿದ್ದರೆ ‘ಮೃತ’ (Dead) ಎಂದು ಪಟ್ಟಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಶೇ. 19ರಷ್ಟು ಮತದಾರರ ವರ್ಗೀಕರಣ ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಒಟ್ಟು 1,08,75,304 ಜನರನ್ನು ಎಎಸ್‌ಡಿಡಿಒ (Absent, Shifted, Dead, Duplicate & Others) ಅಡಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ 65,73,976 ಮತದಾರರು ಶಾಶ್ವತವಾಗಿ ಬೇರೆಡೆಗೆ ವಲಸೆ ಹೋಗಿದ್ದಾರೆ. 16,36,673 ಮತದಾರರು ಮರಣ ಹೊಂದಿದ್ದಾರೆ. ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿರುವ 7,01,412 ನಕಲಿ ಮತದಾರರನ್ನು ಪತ್ತೆಹಚ್ಚಲಾಗಿದ್ದು, ಇನ್ನುಳಿದ 4,14,486 ಜನರನ್ನು ಇತರ ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು.
ಗಣತಿ ಫಾರಂ ವಿತರಣೆ ಮತ್ತು ಡಿಜಿಟಲೀಕರಣ ರಾಜ್ಯಾದ್ಯಂತ ಬಿಎಲ್‌ಒಗಳ ಮೂಲಕ ಒಟ್ಟು 5,54,32,314 ಎನ್ಯೂಮರೇಷನ್ ಫಾರಂಗಳನ್ನು ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದೆ. ಇವುಗಳ ಪೈಕಿ ಈಗಾಗಲೇ 4,45,57,010 ಅರ್ಜಿಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಒಟ್ಟಾರೆ ಶೇ. 80.38ರಷ್ಟು ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. ಕಳೆದ ಜೂನ್ 16, 2026ರ ಯಾದಿಯಲ್ಲಿ ಇಲ್ಲದವರನ್ನು ಗೈರುಹಾಜರಿ ಮತ್ತು ಸ್ಥಳಾಂತರದ ಪಟ್ಟಿಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹೆಸರು ಸೇರ್ಪಡೆಗೆ ಆಯುಕ್ತರ ಮನವಿ ಯಾರಾದರೂ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ ಅಥವಾ ಗೊಂದಲಗಳಿದ್ದರೆ ತಕ್ಷಣವೇ ತಮ್ಮ ಭಾಗದ ಬಿಎಲ್‌ಒಗಳನ್ನು ಸಂಪರ್ಕಿಸುವಂತೆ ಆಯುಕ್ತರು ಕೋರಿದ್ದಾರೆ. ಅಂತಹ ಸಾರ್ವಜನಿಕರು ಫಾರಂ-6 (Form-6) ಮೂಲಕ ಹೊಸದಾಗಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.
ಆಗಸ್ಟ್ 24ರಂದು ಮೊದಲ ಮತದಾರರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಮತದಾರರು ಅಂತರ್ಜಾಲದ ಮೂಲಕವೂ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿದೆ. ಈ ಅರ್ಜಿಗಳನ್ನು ಆಗಸ್ಟ್ 24ರ ನಂತರ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ಮುಖ್ಯವಾಗಿ ಬರುವ ಅಕ್ಟೋಬರ್ 1, 2026ರ ಒಳಗೆ 18 ವರ್ಷ ಪೂರೈಸುವ ಪ್ರತಿಯೊಬ್ಬ ಯುವಕ-ಯುವತಿಯರು ಕೂಡಲೇ ಫಾರಂ-6 ಬಳಸಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಆಯುಕ್ತರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ಜಲವಿವಾದ: ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಎಂದ ಸಚಿವ ರಾಮಲಿಂಗಾ ರೆಡ್ಡಿ
