TOP NEWS

Congress: ಕಾಂಗ್ರೆಸ್‌ನಲ್ಲಿ ತೀವ್ರಗೊಂಡ ‘ಪ್ರಣಾಳಿಕೆ ಫೈಟ್’: ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದ ಬಿಕೆ ಹರಿಪ್ರಸಾದ್

Congress Govt Faces Internal Backlash Over Unfulfilled Manifesto Promises Hariprasad Letter Exposed

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಸ್ವಪಕ್ಷೀಯ ಶಾಸಕರು ಹಾಗೂ ಹಿರಿಯ ನಾಯಕರಿಂದಲೇ ಆಡಳಿತಾತ್ಮಕ ಅಸಮಾಧಾನ ಎದುರಾಗುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಸೂಕ್ತವಾಗಿ ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿ ಹಿರಿಯ ನಾಯಕರು ‘ಪ್ರಣಾಳಿಕೆ ಸಮರ’ ಆರಂಭಿಸಿದ್ದಾರೆ. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ವಿಷಯಗಳನ್ನು ಕಡ್ಡಾಯವಾಗಿ (Congress) ಈಡೇರಿಸಲೇಬೇಕು ಎಂದು ನಾಯಕರು ಪಟ್ಟು ಹಿಡಿದಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಬಿ.ಕೆ. ಹರಿಪ್ರಸಾದ್ ಬರೆದ ಮಹತ್ವದ ಪತ್ರ ಬಹಿರಂಗ: ಆಲಂದ ಶಾಸಕ ಬಿ.ಆರ್. ಪಾಟೀಲ್ ಅವರು ಸರ್ಕಾರದ ವಿರುದ್ಧ ಪ್ರಣಾಳಿಕೆ ವಿಚಾರವಾಗಿ ಬಹಿರಂಗವಾಗಿ ಕಿಡಿಕಾರಿದ ಬೆನ್ನಲ್ಲೇ, ಮತ್ತೋರ್ವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿದ್ದ ಪತ್ರವೊಂದು ತಡವಾಗಿ ಬಹಿರಂಗಗೊಂಡಿದೆ. ಪ್ರಣಾಳಿಕೆಯ ಪ್ರತಿಯನ್ನು ಪತ್ರದ ಜೊತೆಗೆ ಲಗತ್ತಿಸಿರುವ ಅವರು, ಚುನಾವಣಾ ವೇಳೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಉದಾಹರಣೆ ಸಹಿತ ವಿವರಿಸಿ ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಾಗದ್ದಕ್ಕೆ ಬಿ.ಆರ್. ಪಾಟೀಲ್ ಗರಂ: ಹಿರಿಯ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್. ಪಾಟೀಲ್ ಅವರು ಭೂ ಸುಧಾರಣಾ ಕಾಯ್ದೆಯ ವಿಚಾರದಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಗೆ ಬಿಜೆಪಿಯು ತಿದ್ದುಪಡಿ ತಂದು ಅದರ ಆಶಯವನ್ನೇ ಹಾಳು ಮಾಡಿತ್ತು. ನಾವು ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ಮತ್ತೆ ಮೂಲ ಸ್ವರೂಪದಲ್ಲೇ ಜಾರಿಗೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಮಾತು ನೀಡಿದ್ದೆವು. ಆದರೆ ಸರ್ಕಾರ ಬಂದು ಸುದೀರ್ಘ ಅವಧಿಯಾದರೂ ಯಾವುದೇ ತಿದ್ದುಪಡಿ ತಂದಿಲ್ಲ ಎಂದು ಅವರು ಗುಡುಗಿದ್ದಾರೆ.

‘ನಮಗೂ ಬಿಜೆಪಿಗೂ ವ್ಯತ್ಯಾಸವೇನು?’ – ನಾಯಕರ ಪ್ರಶ್ನೆ: ಶಾಸನಸಭೆಯಲ್ಲಿ ತಾವೇ ಕೇಳಿದ ಪ್ರಶ್ನೆಗೆ ಸರ್ಕಾರದಿಂದ ‘ತಿದ್ದುಪಡಿ ಪ್ರಸ್ತಾವನೆ ಇಲ್ಲ’ ಎಂಬ ಉತ್ತರ ಬಂದಿರುವುದಕ್ಕೆ ಬಿ.ಆರ್. ಪಾಟೀಲ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಹಾಗಾದರೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆಯನ್ನು ಏಕೆ ನೀಡಿದ್ದೀರಿ? ಬಿಜೆಪಿ ಸರ್ಕಾರದ ತಿದ್ದುಪಡಿಯನ್ನೇ ಮುಂದುವರಿಸುವುದಾದರೆ ನಮಗೂ ಅವರಿಗೂ ವ್ಯತ್ಯಾಸವೇನು?” ಎಂದು ಅವರು ತಾರಕಕ್ಕೇರಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದಾಗ ಬಜೆಟ್‌ನಲ್ಲಿ ಪ್ರಕಟಿಸುವ ಭರವಸೆ ಸಿಕ್ಕಿತ್ತಾದರೂ, ಕೊನೆ ಘಳಿಗೆಯಲ್ಲಿ ಬಜೆಟ್ ಪ್ರತಿಯಿಂದ ಆ ವಿಚಾರವನ್ನು ತೆಗೆದುಹಾಕಲಾಗಿತ್ತು. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜೀನಾಮೆ ವಾಪಸ್ ಪಡೆಯಲು ಮನವೊಲಿಸಿದಾಗಲೂ ತಾವು ಇದೇ ವಿಷಯವನ್ನು ಪ್ರಸ್ತಾಪಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ರಾಹುಲ್ ಗಾಂಧಿ ಅವರಿಗೂ ದೂರು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಜಿಬಿಎ ಐದು ಪಾಲಿಕೆಗಳ ಚುನಾವಣೆ: ಸುಪ್ರೀಂ ಆದೇಶದ ಬೆನ್ನಲ್ಲೇ ಆಡಳಿತ ಯಂತ್ರ ಚುರುಕು, ಅಭಿವೃದ್ಧಿ ಕಾಮಗಾರಿಗೆ ವೇಗ!

Leave a Reply

Your email address will not be published. Required fields are marked *