TOP NEWS

Ram Mandir: ಶ್ರೀರಾಮನ ಭಕ್ತರ ದೇಣಿಗೆ ಹಣದಲ್ಲಿ ಮನೆ-ಆಸ್ತಿ ಖರೀದಿ: ಅಯೋಧ್ಯೆ ಕಾಣಿಕೆ ಕಳ್ಳರ ಬಣ್ಣ ಬಯಲು!

CCTV Catches Key Accused Avinash Shukla Stealing 85 Times From Ram Mandir Counting Room

ಅಯೋಧ್ಯೆ: ಅಯೋಧ್ಯೆಯ ಭವ್ಯ (Ram Mandir) ರಾಮಮಂದಿರಕ್ಕೆ ಭಕ್ತರು ನೀಡುತ್ತಿದ್ದ ಕಾಣಿಕೆ ಮತ್ತು ದೇಣಿಗೆ ಹಣವನ್ನು ಅಕ್ರಮವಾಗಿ ಕಳವು ಮಾಡಿ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ರವಾನಿಸಿದೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆಯಾಗಿರುವ ಈ ಚಾರ್ಜ್‌ಶೀಟ್ ಬರೋಬ್ಬರಿ ೭೦,೦೦೦ ಪುಟಗಳನ್ನು ಒಳಗೊಂಡಿದ್ದು, ಪ್ರಕರಣದ ತೀವ್ರತೆಯನ್ನು ಎತ್ತಿಹಿಡಿದಿದೆ.

ಈ ಕಳವು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು, ರಾಮಶಂಕರ್ ಮಿಶ್ರಾ, ಮನೀಶ್ ಯಾದವ್, ಅನುಕಲ್ಪ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವ್‌ಕುಶ್ ಮಿಶ್ರಾ ಹಾಗೂ ಸುಭಾಷ್ ಶ್ರೀವಾಸ್ತವ ಎಂಬ ಎಂಟು ಜನರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಎಲ್ಲಾ ಆರೋಪಿಗಳ ವಿರುದ್ಧ ನಂಬಿಕೆದ್ರೋಹ, ಅಕ್ರಮ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಠಿಣ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳು: ಎಸ್‌ಐಟಿ ತನ್ನ ಸುದೀರ್ಘ ತನಿಖೆಯ ಭಾಗವಾಗಿ ತಾಂತ್ರಿಕ ಮತ್ತು ಡಿಜಿಟಲ್ ಸಾಕ್ಷ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಸಿಸಿಟಿವಿ ದೃಶ್ಯಾವಳಿಗಳು, ಫೋನ್ ಕರೆಗಳ ವಿವರಗಳು (CDR), ಮೊಬೈಲ್ ಚಾಟ್‌ಗಳು, ಬ್ಯಾಂಕ್ ವಹಿವಾಟು ದಾಖಲೆಗಳು ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡ ಹಣ-ಆಭರಣಗಳನ್ನು ಪ್ರಮುಖ ಪುರಾವೆಗಳಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಎಂಟು ಜನರು ಹಲವು ತಿಂಗಳುಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜಿತ ರೀತಿಯಲ್ಲಿ ಕಳವು ಮಾಡುತ್ತಿದ್ದರು ಎಂಬುದು ಕರೆಗಳ ವಿವರಣೆಯಿಂದ ಸಾಬೀತಾಗಿದೆ.

ಹಣ ಎಣಿಕೆ ಕೊಠಡಿಯಿಂದ ಯಾರು ಎಷ್ಟು ಬಾರಿ ಹಣ ಕದ್ದಿದ್ದಾರೆ ಹಾಗೂ ಕಳವಿಗೆ ಹೇಗೆ ಸಹಕರಿಸಿದ್ದಾರೆ ಎಂಬುದನ್ನು ಸಿಸಿಟಿವಿ ಕ್ಯಾಮೆರಾಗಳು ಸ್ಪಷ್ಟವಾಗಿ ಸೆರೆಹಿಡಿದಿವೆ. ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಹಣ ಎಣಿಕೆ ಕೊಠಡಿಯಿಂದ ಬರೋಬ್ಬರಿ ೮೫ ಬಾರಿ ಹಣ ಎಗರಿಸಿರುವುದು ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಇನ್ನುಳಿದಂತೆ ಕರುಣೇಶ್ ಪಾಂಡೆ ೨ ಬಾರಿ ಹಣ ತೆಗೆದು ೬೮ ಬಾರಿ ಕಳವಿಗೆ ನೆರವಾಗಿದ್ದರೆ, ಮನೀಶ್ ಯಾದವ್ ೧೬ ಬಾರಿ ಹಣ ತೆಗೆದು ೧೯ ಬಾರಿ ಸಹಕರಿಸಿದ್ದಾನೆ. ಲವ್‌ಕುಶ್ ಮಿಶ್ರಾ ಒಮ್ಮೆ ಹಣ ತೆಗೆದು ೫೨ ಬಾರಿ ಹಾಗೂ ಅನುಕಲ್ಪ ಮಿಶ್ರಾ ೫೬ ಬಾರಿ ಕಳವಿಗೆ ಸಹಾಯ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ಕಳವು ಹಣದಿಂದ ಆಸ್ತಿ-ಪಾಸ್ತಿ ಖರೀದಿ: ಶ್ರೀರಾಮನ ದೇಣಿಗೆಯನ್ನು ಕದ್ದ ಆರೋಪಿಗಳು ಆ ಹಣದಿಂದ ಕಾರು, ಜಮೀನು ಹಾಗೂ ಐಷಾರಾಮಿ ಮನೆಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪಿ ಲವ್‌ಕುಶ್ ಮಿಶ್ರಾ ಕದ್ದ ಹಣದಲ್ಲೇ ೪೩.೪೩ ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಹಾಗೂ ಜಮೀನು ಖರೀದಿಸಿದ್ದಾನೆ. ಮತ್ತೊಬ್ಬ ಆರೋಪಿ ಅನುಕಲ್ಪ ಮಿಶ್ರಾ ಅವರ ತಂದೆ ಸಹ ಈ ಹಣ ಬಳಸಿ ಮನೆ ಖರೀದಿಸಿರುವುದು ಪತ್ತೆಯಾಗಿದೆ. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಆಡಿಟ್ ವರದಿಗಳು ಹಾಗೂ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದ ವಿಧಿವಿಜ್ಞಾನ ಆಡಿಟರ್‌ಗಳು, ದೇಣಿಗೆ ಹಣ ದುರುಪಯೋಗವಾಗಿರುವುದನ್ನು ದೃಢಪಡಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಲಖನೌ ವಲಯದ ಐಜಿ ಕಿರಣ್ ಎಸ್. ನೇತೃತ್ವದಲ್ಲಿ, ಡಿಐಜಿ ಸೋಮೇನ್ ಬರ್ಮಾ ಮತ್ತು ಅಯೋಧ್ಯೆ ಎಸ್‌ಎಸ್‌ಪಿ ಗೌರವ್ ಗ್ರೋವರ್ ಅವರಿದ್ದ ಎಸ್‌ಐಟಿ ತಂಡ ಯಶಸ್ವಿಯಾಗಿ ನಡೆಸಿದೆ. ಜೂನ್ ತಿಂಗಳಲ್ಲಿ ಬಂದ ದೂರಿನ ಆಧಾರದ ಮೇಲೆ ಆರಂಭವಾದ ಈ ತನಿಖೆಯಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಮಾಜಿ ಆಡಳಿತಾಧಿಕಾರಿ ಗೋಪಾಲ್ ರಾವ್ ಸೇರಿದಂತೆ ಪ್ರಮುಖರನ್ನು ಸಾಕ್ಷಿಗಳನ್ನಾಗಿ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಹಿಂದಿ ಭಾಷೆ ಜಾರಿಗೆ ಆಯೋಗ ರಚನೆ ಕೋರಿದ್ದ ಅರ್ಜಿ ವಜಾ

Leave a Reply

Your email address will not be published. Required fields are marked *