ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸುವ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಪ್ರತ್ಯೇಕ ಆಯೋಗವನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ. ಭಾಷೆಗೆ ಸಂಬಂಧಿಸಿದ ಸುಧಾರಣೆಗಳನ್ನು ಈಗಾಗಲೇ ಆಡಳಿತಾತ್ಮಕ ಮಟ್ಟದಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದ್ದು, ಇಂತಹ ಪ್ರಕ್ರಿಯೆಗಳನ್ನು ನ್ಯಾಯಾಂಗ ಆದೇಶಗಳ ಮೂಲಕ ಬಲವಂತವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ವಾದವೇನಿತ್ತು?
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆಯನ್ನು ನಡೆಸಿತು. ಬ್ರಹ್ಮೇಶ್ವರ ನಾಥ್ ಮಿಶ್ರಾ ಎಂಬುವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಸುಪ್ರೀಂ ಕೋರ್ಟ್‌ನ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಜಾರಿಗೊಳಿಸುವ ಸಂಬಂಧ ಶಿಫಾರಸುಗಳನ್ನು ನೀಡಲು ವಿಶೇಷ ಆಯೋಗ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸಂವಿಧಾನದಲ್ಲಿರುವ ವಿವಿಧ ನಿಯಮಗಳು ಹಾಗೂ ವಿಧಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರಕ್ಕೆ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕೆಂದು ಪಟ್ಟುಹಿಡಿದರು.
ಈ ವೇಳೆ ಅರ್ಜಿದಾರರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳು, ದೇಶದ ಶ್ರೇಷ್ಠ ನ್ಯಾಯಾಲಯವು ಭಾಷೆಗೆ ಸಂಬಂಧಿಸಿದ ಸುಧಾರಣಾ ಕ್ರಮಗಳನ್ನು ಈಗಾಗಲೇ ಅತ್ಯಂತ ಜಾಗರೂಕತೆಯಿಂದ ಮತ್ತು ಹಂತ ಹಂತವಾಗಿ ಜಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದರು. “ನಾವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಎಲ್ಲಾ ಮುಖ್ಯ ತೀರ್ಪುಗಳು ಮತ್ತು ವರದಿಗಳ ಸಂಕ್ಷಿಪ್ತ ವಿವರಣೆಯನ್ನು ಹಿಂದಿ ಭಾಷೆಯಲ್ಲಿ ಒದಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಪ್ರಾದೇಶಿಕ ಭಾಷೆಗಳಲ್ಲೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು” ಎಂದು ನ್ಯಾಯಪೀಠ ಉಲ್ಲೇಖಿಸಿತು. ದೇಶದ ವೈವಿಧ್ಯಮಯ ಭಾಷಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವುದು ಹಾಗೂ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಗೌರವ ನೀಡುವುದು ನ್ಯಾಯಾಲಯದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.
ಸುಪ್ರೀಂಕೋರ್ಟ್ ಖಡಕ್ ಮಾತು
ನ್ಯಾಯಾಂಗ ಆದೇಶದ ಮೂಲಕ ಇಂತಹ ಭಾಷಾ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಪೀಠವು, ಭಾಷಾ ಸುಧಾರಣೆಗಳು ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿ ಸಾಗಬೇಕೇ ಹೊರತು ಕೋರ್ಟ್ ಆದೇಶಗಳಿಂದಲ್ಲ ಎಂದು ಖಡಕ್ ಆಗಿ ಹೇಳಿತು. ಜೊತೆಗೆ, ಅರ್ಜಿಯಲ್ಲಿ ಕೋರಲಾಗಿರುವ ಮನವಿಯನ್ನು ಪುರಸ್ಕರಿಸಬೇಕಾದರೆ ಸಂವಿಧಾನಿಕ ತಿದ್ದುಪಡಿಯ ಅಗತ್ಯವಿರುತ್ತದೆ ಎಂಬುದನ್ನು ಪೀಠವು ಅರ್ಜಿದಾರರ ಗಮನಕ್ಕೆ ತಂದಿತು. ಕನಿಷ್ಠಪಕ್ಷ ಆಯೋಗ ರಚನೆಗಾದರೂ ಆದೇಶ ನೀಡುವಂತೆ ಅರ್ಜಿದಾರರ ವಕೀಲರು ಮನವಿ ಮಾಡಿದರಾದರೂ, ಸುಪ್ರೀಂ ಕೋರ್ಟ್ ಪೀಠವು ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿತು.
ಇದನ್ನೂ ಓದಿ: ಪಾಕಿಸ್ತಾನ ಹಾಗೂ ಉಗ್ರರ ನಿದ್ದೆಗೆಡಿಸಿದ ಯುಪಿ ಶಸ್ತ್ರಾಸ್ತ್ರಗಳು: ಗೃಹ ಸಚಿವ ಅಮಿತ್ ಶಾ ಹೇಳಿಕೆ
