TOP NEWS

Bollywood: ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಿ ನಂಬರ್ 1, ಆಸ್ತಿಯಲ್ಲಿ ಶಾರುಖ್ ಖಾನ್ ಬಾದ್‌ಶಾ

Bollywood Amitabh Bachchan Tops Social Media Following Shah Rukh Khan Crowned Richest Actor

ಮುಂಬೈ: ಸೋಷಿಯಲ್ ಮೀಡಿಯಾ ಫಾಲೋಯಿಂಗ್ ಹಾಗೂ ಸಂಪತ್ತಿನ ವಿಚಾರದಲ್ಲಿ ಬಾಲಿವುಡ್‌ನ (Bollywood) ದಿಗ್ಗಜ ತಾರೆಯರ ನಡುವೆ ಭಾರಿ ಕುತೂಹಲಕಾರಿ ಪೈಪೋಟಿ ಏರ್ಪಟ್ಟಿದೆ. ಎಂ3ಎಮ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟಿಸಿರುವ ಸೋಷಿಯಲ್ ಮೀಡಿಯಾ ಅಂಕಿಅಂಶಗಳ ಪ್ರಕಾರ, ಬಾಲಿವುಡ್‌ನ ‘ಬಾದ್‌ಶಾ’ ಶಾರುಖ್ ಖಾನ್ ಅವರನ್ನು ಅತ್ಯಲ್ಪ ಅಂತರದಲ್ಲಿ ಹಿಂದಿಕ್ಕಿರುವ ‘ಮಹಾನಾಯಕ್’ ಅಮಿತಾಭ್ ಬಚ್ಚನ್ ಅವರು ಜಾಲತಾಣಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಲಿಂಕ್ಡ್‌ಇನ್ ವೇದಿಕೆಗಳಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಪ್ರಮುಖ ಗಣ್ಯರ ವಿವರಗಳನ್ನು ಈ ವರದಿಯಲ್ಲಿ ಹಂಚಿಕೊಳ್ಳಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಅಮಿತಾಬ್‌ ಬಾದ್‌ಷಾ

ಹುರುನ್ ವರದಿಯ ಪ್ರಕಾರ, ಅಮಿತಾಭ್ ಬಚ್ಚನ್ ಅವರು ಈ ಮೂರು ಜನಪ್ರಿಯ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಒಟ್ಟು 4.87 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಅವರು ಒಟ್ಟು 4.86 ಕೋಟಿ ಫಾಲೋವರ್ಸ್ ಹೊಂದಿದ್ದು, ಕೇವಲ 1 ಲಕ್ಷ ಫಾಲೋವರ್ಸ್‌ಗಳ ಅಲ್ಪ ಅಂತರದಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮತ್ತೊಬ್ಬ ಜನಪ್ರಿಯ ನಟ ಹೃತಿಕ್ ರೋಷನ್ 4.81 ಕೋಟಿ ಫಾಲೋವರ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರು ನಟರ ಒಟ್ಟು ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಳ ಸಂಖ್ಯೆ ಬರೋಬ್ಬರಿ 14.54 ಕೋಟ ತಲುಪಿದ್ದು, ಈ ವಿಷಯದಲ್ಲಿ ಇವರು ದೇಶದ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರನ್ನೂ ಸಹ ಹಿಂದಿಕ್ಕಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ 1.82 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.

ಮತ್ತೊಂದೆಡೆ, ಉದ್ಯಮ ಹಾಗೂ ತಂತ್ರಜ್ಞಾನ ರಂಗದ ಪ್ರಮುಖರನ್ನು ಗಮನಿಸುವುದಾದರೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನುಡೆಲ್ಲಾ 1.16 ಕೋಟಿ ಫಾಲೋವರ್ಸ್ ಹೊಂದಿದ್ದರೆ, ಉದ್ಯಮಿ ಆನಂದ್ ಮಹೀಂದ್ರಾ 1.15 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ 56 ಲಕ್ಷ, ನಟಿ ಹಾಗೂ ಉದ್ಯಮಿ ಜೂಹಿ ಚಾವ್ಲಾ ಕುಟುಂಬ 53 ಲಕ್ಷ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನೀಲೇಕಣಿ 24 ಲಕ್ಷ ಹಾಗೂ ಉದ್ಯಮಿ ರೋನಿ ಸ್ಕ್ರೂವಾಲಾ 19 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ಕಿಂಗ್‌ ಖಾನ್‌ ನಂಬರ್‌ ಒನ್

ಇನ್ನು ಸೋಷಿಯಲ್ ಮೀಡಿಯಾ ಫಾಲೋಯಿಂಗ್‌ನಲ್ಲಿ ಅಮಿತಾಭ್ ಬಚ್ಚನ್ ಅವರು ಮೇಲುಗೈ ಸಾಧಿಸಿದ್ದರೂ ಸಹ, ಎಂ3ಎಮ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರ ಶ್ರೀಮಂತರ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ಭಾರಿ ಮುನ್ನಡೆ ಸಾಧಿಸಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಕುಟುಂಬವು ಒಟ್ಟು 10,000 ಕೋಟಿ ರೂಪಾಯಿ ಮೌಲ್ಯದ ನಿವ್ವಳ ಆಸ್ತಿಯೊಂದಿಗೆ ಚಿತ್ರರಂಗ ಮತ್ತು ಕ್ರೀಡಾ ಕ್ಷೇತ್ರದ ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ 4,000 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅಮಿತಾಭ್ ಬಚ್ಚನ್ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ನಟ ಸಲ್ಮಾನ್ ಖಾನ್ (3,000 ಕೋಟಿ ರೂಪಾಯಿ) ಮತ್ತು ಹೃತಿಕ್ ರೋಷನ್ (2,500 ಕೋಟಿ ರೂಪಾಯಿ) ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎಐ ತಂತ್ರಜ್ಞಾನದಲ್ಲಿ ರವಿಚಂದ್ರನ್ ಹೊಸ ಕಮಾಲ್: ಸಹಾಯಕರಿಲ್ಲದೆ ಒಬ್ಬರೇ ಸಿನಿಮಾ ನಿರ್ಮಿಸಿದ ಕನಸುಗಾರ

Leave a Reply

Your email address will not be published. Required fields are marked *