TOP NEWS

V Ravichandran: ಎಐ ತಂತ್ರಜ್ಞಾನದಲ್ಲಿ ರವಿಚಂದ್ರನ್ ಹೊಸ ಕಮಾಲ್: ಸಹಾಯಕರಿಲ್ಲದೆ ಒಬ್ಬರೇ ಸಿನಿಮಾ ನಿರ್ಮಿಸಿದ ಕನಸುಗಾರ

Crazy Star V Ravichandran AI Experiment I Am God to Feature 35 Songs and Next Gen Tech

ಹಾಸನ: ಕನ್ನಡ ಚಿತ್ರರಂಗದ ‘ಕನಸುಗಾರ’ ಹಾಗೂ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ (V Ravichandran) ಅವರು ಖಾಸಗಿ ಕಾರ್ಯಕ್ರಮವೊಂದರ ಸನ್ನಿವೇಶದಲ್ಲಿ ಹಾಸನಕ್ಕೆ ಭೇಟಿ ನೀಡಿ, ನೆರೆದಿದ್ದ ಅಭಿಮಾನಿಗಳ ಸಮೂಹದಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಮತ್ತು ಫೋನ್ ಕರೆಗಳನ್ನು ಸ್ವೀಕರಿಸಲು ಹಿಂದೇಟು ಹಾಕುವ ರವಿಚಂದ್ರನ್, ತಮ್ಮ ನೆಚ್ಚಿನ ಅಭಿಮಾನಿ ಗೌತಮ್ ಅವರ ಅಪಾರ ಪ್ರೀತಿಗೆ ಗೌರವ ನೀಡಿ, ನಗರದಲ್ಲಿ ನೂತನವಾಗಿ ಆರಂಭಗೊಂಡ ಆಟೋ ಶೋರೂಮ್ ಉದ್ಘಾಟನೆ ನೆರವೇರಿಸಿದರು.

ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ಕ್ರೇಜಿಸ್ಟಾರ್

ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿಶಿಷ್ಟ ಮಾತಿನ ವೈಖರಿಯಿಂದ ಮನದಾಳದ ಭಾವನೆಗಳನ್ನು ಹಂಚಿಕೊಂಡರು. “ನಾವು ಇನ್ನೊಬ್ಬರನ್ನು ಭೇಟಿಯಾಗಬೇಕಾದರೆ ಅದಕ್ಕೊಂದು ಜನ್ಮಾಂತರದ ಋಣಾನುಬಂಧ ಇರಬೇಕು. ಇಂದು ನಿಮ್ಮ ಮುಂದೆ ನಾನು ನಿಂತು ಮಾತಡುತ್ತಿರುವುದಕ್ಕೆ ನಿಮ್ಮ ಅಪಾರವಾದ ಒಲವು ಮತ್ತು ಅಭಿಮಾನವೇ ಮುಖ್ಯ ಕಾರಣ” ಎಂದು ಕೃತಜ್ಞತೆ ಸಲ್ಲಿಸಿದರು. ಇದೇ ವೇದಿಕೆಯಲ್ಲಿ ಅವರು ತಮ್ಮ ಮುಂದಿನ ನೂತನ ಚಿತ್ರದ ಕುರಿತು ನೀಡಿರುವ ಮಾಹಿತಿ ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

35 ಹಾಡುಗಳಿರುವ ಸಿನಿಮಾ ಮಾಡ್ತಿದ್ದಾರೆ ನಟ

ರವಿಚಂದ್ರನ್ ಅವರ ಬಹುನಿರೀಕ್ಷಿತ ‘ಐ ಆ್ಯಮ್ ಗಾಡ್, ದಿ ಕ್ರೇಜಿ’ ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಚಿತ್ರದಲ್ಲಿ ಒಟ್ಟು 35 ಹಾಡುಗಳಿರಲಿದ್ದು, ಬೆಳ್ಳಿತೆರೆಯಲ್ಲಿ ಹೊಸ ದೃಶ್ಯ ಕಾವ್ಯವನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ. “ನನ್ನ ಕನಸಿನ ಲೋಕದಂತೆ ಮತ್ತೊಂದು ‘ಪ್ರೇಮಲೋಕ’ವನ್ನು ಕಟ್ಟಿಬೆಳೆಸಿದ ನೆಮ್ಮದಿ ನನ್ನಲ್ಲಿದೆ” ಎಂದು ಅವರು ವಿಶ್ವಾಸದಿಂದ ನುಡಿದರು. ವಿಶೇಷವೆಂದರೆ, ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸಿ ತಯಾರಾಗುತ್ತಿರುವ ಕನ್ನಡದ ಪ್ರಮುಖ ಪ್ರಯೋಗಾತ್ಮಕ ಚಿತ್ರ ಇದಾಗಿದೆ.

ಸಿನಿಮಾ ರಂಗದಲ್ಲಿ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ರವಿಚಂದ್ರನ್, ಈ ಬಾರಿ ತಂತ್ರಜ್ಞಾನದ ಸಹಾಯದಿಂದ ಅಪರೂಪದ ಸಾಹಸಕ್ಕೆ ಕೈಹಾಕಿದ್ದಾರೆ. ಈ ಚಿತ್ರದ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಯಾವುದೇ ಸಹಾಯಕ ನಿರ್ದೇಶಕರು, ಸಾಹಸ ನಿರ್ದೇಶಕರು ಅಥವಾ ನೃತ್ಯ ಸಂಯೋಜಕರಿಲ್ಲದೆ, ಕೇವಲ ತಮ್ಮ ಮೊಬೈಲ್ ಮತ್ತು ಎಐ ತಂತ್ರಾಂಶಗಳ ಸಮ್ಮಿಲನದಿಂದ ಇಡೀ ಚಿತ್ರವನ್ನು ಅವರೊಬ್ಬರೇ ರೂಪಿಸಿದ್ದಾರೆ. ಸ್ವತಃ ವಿಎಫ್‌ಎಕ್ಸ್ ಮತ್ತು ಸಿಜಿಐ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿರುವ ಅವರು, ಪ್ರೇಕ್ಷಕರಿಗೆ ಸಂಪೂರ್ಣ ವಿಭಿನ್ನವಾದ ದೃಶ್ಯಾವಳಿ ನೀಡುವ ಸಿದ್ಧತೆಯಲ್ಲಿದ್ದಾರೆ.

ಚಿತ್ರದ ಚಿತ್ರೀಕರಣ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಶೀಘ್ರದಲ್ಲೇ ಸಂಕಲನ (ಎಡಿಟಿಂಗ್) ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಪ್ರತಿ ಭಾಷೆಗೆ ತಕ್ಕಂತೆ ಪ್ರತ್ಯೇಕ ಎಡಿಟಿಂಗ್ ನಡೆಸಲಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಮೂರು ಗಂಟೆಗಳ ಕಾಲಾವಧಿಯ ಸಿನಿಮಾ ಹಾಗೂ ಒಟಿಟಿ ವೇದಿಕೆಗೆ ಕೊಂಚ ವಿಭಿನ್ನ ಶೈಲಿಯ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ‘ಮ್ಯಾಜಿಕಲ್, ಮ್ಯೂಸಿಕಲ್, ಮಿರಾಕಲ್’ ಎಂಬ ರೋಚಕ ಶೀರ್ಷಿಕೆಯೊಂದಿಗೆ ಬರಲಿರುವ ಈ ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ತಾಂತ್ರಿಕ ಪ್ರಯೋಗಗಳಿಗೆ ಸಾಕ್ಷಿಯಾಗಲಿದೆ.

ಇದನ್ನೂ ಓದಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವೈಭವ: ಹಿರಿಯ ನಟ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ!

Leave a Reply

Your email address will not be published. Required fields are marked *