TOP NEWS

Gyanesh Kumar: ಚುನಾವಣಾ ಆಯೋಗದಲ್ಲಿ ಆಂತರಿಕ ಭಿನ್ನಾಭಿಪ್ರಾಯ: ಸಿಇಸಿ ಜ್ಞಾನೇಶ್ ಕುಮಾರ್ ನಿರ್ಧಾರಗಳಿಗೆ ಸುಪ್ರೀಂ ಸವಾಲು

Friction Within Election Commission CEC Gyanesh Kumar Faces Legal Challenge in Top Court

ನವದೆಹಲಿ: ಚುನಾವಣಾ ಆಯೋಗವು ಇತ್ತೀಚೆಗೆ ಕೈಗೊಂಡ ಮತದಾರರ ಪಟ್ಟಿಯ ವಿಶೇಷ ಸಂಸೋಧನೆ ಮತ್ತು ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಇದೀಗ ದೊಡ್ಡ ಪ್ರಮಾಣದ ಕಾನೂನು ವಿವಾದಕ್ಕೆ ಸಿಲುಕಿದೆ. ಶಾಸನಬದ್ಧ ಕರ್ತವ್ಯಗಳನ್ನು ಉಲ್ಲಂಘಿಸಿ, ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ. ಸಂವಿಧಾನದ ವಿಧಿ 32ರ ಅಡಿಯಲ್ಲಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಅಥವಾ ಅಪರಾಧ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಅದರೊಂದಿಗೆ, ಇತರ ಇಬ್ಬರು ಚುನಾವಣೆ ಆಯುಕ್ತರ ಸಮ್ಮತಿಯಿಲ್ಲದೆ ಆಯೋಗದಲ್ಲಿ ಕೈಗೊಳ್ಳಲಾದ ಪ್ರಮುಖ ತಂತ್ರಜ್ಞಾನ ಹಾಗೂ ಮಾರ್ಗದರ್ಶಿ ಸೂತ್ರಗಳ ಬದಲಾವಣೆಗಳನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಲಾಗಿದೆ.

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಕಟವಾದ ಮಾಧ್ಯಮ ವರದಿಗಳ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ. ಆಯೋಗದ ಇತರ ಇಬ್ಬರು ಚುನಾವಣೆ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಕನಿಷ್ಠ 14 ಸಂದರ್ಭಗಳಲ್ಲಿ ತಮ್ಮ ತೀವ್ರ ವಿರೋಧ ಹಾಗೂ ಆಕ್ಷೇಪಣೆಗಳನ್ನು ದಾಖಲಿಸಿದ್ದರು. ಆದರೆ, ಈ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವಿಶೇಷವಾಗಿ 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 32ರ ಅಡಿಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್, ಹಿರಿಯ ಉಪ ಚುನಾವಣೆ ಆಯುಕ್ತ ಮನೀಷ್ ಗಾರ್ಗ್, ಐಟಿ ವಿಭಾಗದ ಡೈರೆಕ್ಟರ್ ಜನರಲ್ ಸೀಮಾ ಖನ್ನಾ ಸೇರಿದಂತೆ ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಕ್ತ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಶಾಸನಬದ್ಧವಾಗಿ ನಿಗದಿಯಾಗಿರುವ ‘ಫಾರ್ಮ್ 6’ ಅರ್ಜಿಯನ್ನು ಅನಧಿಕೃತವಾಗಿ ಮಾರ್ಪಾಡು ಮಾಡಿದ್ದು, ಮತದಾರರ ದತ್ತಾಂಶವನ್ನು ಕೇಂದ್ರೀಕರಿಸಿದ್ದು ಮತ್ತು ಪಶ್ಚಿಮ ಬಂಗಾಳ ಒಂದರಲ್ಲೇ 16.10 ಲಕ್ಷ ಮನವಿಗಳನ್ನು ಸಲ್ಲಿಸಿ ಮತದಾರರ ಸೇರ್ಪಡೆಯನ್ನು ಸವಾಲಿಗೆ ಒಡ್ಡಿದ್ದು ಈ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ಗಂಭೀರ ಆರೋಪಗಳಾಗಿವೆ.

ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಮೂಲ ‘ಫಾರ್ಮ್ 6’ ಅರ್ಜಿಯಲ್ಲಿ ಮಾಡಲಾದ ಬದಲಾವಣೆಗಳು ಈ ಇಡೀ ವಿವಾದದ ಮುಖ್ಯ ಕಾರಣವಾಗಿವೆ. 1960ರ ಮತದಾರರ ನೋಂದಣಿ ನಿಯಮಗಳಿಗೆ ಅಧಿಕೃತ ತಿದ್ದುಪಡಿ ತರದೆ ಈ ಫಾರ್ಮ್‌ನಲ್ಲಿ ಯಾವುದೇ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಚುನಾವಣೆ ಆಯುಕ್ತ ವಿವೇಕ್ ಜೋಶಿ ಮೇ 2026ರಲ್ಲಿಯೇ ಸ್ಪಷ್ಟವಾಗಿ ಆಕ್ಷೇಪಿಸಿದ್ದರು. ಇದಕ್ಕೆ ಮತ್ತೊಬ್ಬ ಆಯುಕ್ತ ಸುಖ್‌ಬೀರ್ ಸಿಂಗ್ ಸಂಧು ಕೂಡ ಬೆಂಬಲ ವ್ಯಕ್ತಪಡಿಸಿ, ಈ ಬದಲಾವಣೆಯನ್ನು ಕಾನೂನುಬಾಹಿರ ಎಂದು ಕರೆದಿದ್ದರು. ಆದಾಗ್ಯೂ, ತಂತ್ರಜ್ಞಾನ ವ್ಯವಸ್ಥೆಯಲ್ಲಿ ಅರ್ಜಿದಾರ ಅಥವಾ ಅವರ ಸಂಬಂಧಿಕರು ಹಿಂದೆಂದಾದರೂ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೇ ಎಂಬ ಅನಗತ್ಯ ಮಾಹಿತಿಯನ್ನು ಕೇಳುವ ರೀತಿಯಲ್ಲಿ ತಂತ್ರಾಂಶವನ್ನು ಬದಲಾಯಿಸಲಾಗಿತ್ತು.

ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅರ್ಜಿದಾರರು, 2023ರ ಮುಖ್ಯ ಚುನಾವಣೆ ಆಯುಕ್ತ ಮತ್ತು ಇತರ ಚುನಾವಣೆ ಆಯುಕ್ತರ ಕಾಯ್ದೆಯ ಸೆಕ್ಷನ್ 18ರ ಪ್ರಕಾರ, ಆಯೋಗದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಬಹುಮತದ ಆಧಾರದ ಮೇಲೆಯೇ ಕೈಗೊಳ್ಳಬೇಕು ಎಂದು ನೆನಪಿಸಿದ್ದಾರೆ. ಬಹುಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಥವಾ ಇಡೀ ಆಯೋಗದ ಸಮ್ಮತಿಯಿಲ್ಲದೆ ಜ್ಞಾನೇಶ್ ಕುಮಾರ್ ಅವರು ಜಾರಿಗೆ ತಂದ ಎಲ್ಲಾ ತೀರ್ಮಾನಗಳು, ನಿರ್ದೇಶನಗಳು ಮತ್ತು ತಂತ್ರಾಂಶ ಬದಲಾವಣೆಗಳು ಪ್ರಾರಂಭದಿಂದಲೇ ಅಸಂವಿಧಾನಿಕ ಹಾಗೂ ಸಿಂಧುವಲ್ಲದವು ಎಂದು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ.

ಇದಷ್ಟೇ ಅಲ್ಲದೆ, ಎಸ್‌ಐಆರ್ ಪರಿಷ್ಕರಣೆಯ ಸಮಯದಲ್ಲಿ ದೇಶಾದ್ಯಂತ ಸುಮಾರು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬೃಹತ್ ಪ್ರಮಾಣದ ಹೆಸರುಗಳ ತೆಗೆದುಹಾಕುವಿಕೆ ಹಾಗೂ ದತ್ತಾಂಶ ದುರ್ಬಳಕೆಯ ಸತ್ಯಾಸತ್ಯತೆಯನ್ನು ಹೊರತರಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ, ಸೈಬರ್ ಭದ್ರತೆ ಮತ್ತು ಮಾಹಿತಿ ತಂತ್ರಜ್ಞಾನ ತಜ್ಞರನ್ನೊಳಗೊಂಡ ವಿಶೇಷ ತನಿಖಾ ತಂಡ (ಸಿಟ್) ಅಥವಾ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಬೇಕು ಎಂದು ಕೋರಲಾಗಿದೆ. ಜೊತೆಗೆ, ಮಾರ್ಪಾಡು ಮಾಡಲಾದ ತಂತ್ರಾಂಶವನ್ನು ರದ್ದುಗೊಳಿಸಿ ಮೂಲ ‘ಫಾರ್ಮ್ 6’ ಅನ್ನು ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಅಕ್ಟೋಬರ್ 1, 2025 ರಿಂದ ಇಸಿಐನೆಟ್ ಹಾಗೂ ಇಆರ್‌ಒನೆಟ್ ಪೋರ್ಟಲ್‌ಗಳಲ್ಲಿ ನಡೆದಿರುವ ಎಲ್ಲಾ ಸರ್ವರ್ ಲಾಗ್‌ಗಳು, ದತ್ತಾಂಶಗಳು ಮತ್ತು ಸಂಪರ್ಕದ ವಿವರಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಐದು ರಾಜ್ಯಗಳ ಚುನಾವಣೆ: ಬಿಜೆಪಿಯಿಂದ ₹529 ಕೋಟಿಗೂ ಅಧಿಕ ಭಾರಿ ಚುನಾವಣಾ ವೆಚ್ಚ!

Leave a Reply

Your email address will not be published. Required fields are marked *