TOP NEWS

Air India: ಏರ್ ಇಂಡಿಯಾ ಸಹ-ಪೈಲಟ್ ಅಮಾನತು: ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಸಿಬ್ಬಂದಿ

Drunk Co Pilot Busted Before Takeoff Air India Suspends Aviator

ನವದೆಹಲಿ: ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಯ ಪೈಲಟ್‌ಗಳ ಬೇಜವಾಬ್ದಾರಿ ವರ್ತನೆಗಳು ಸರಣಿಯಂತೆ ಮುಂದುವರಿದಿದ್ದು, ಜ್ಯೂರಿಚ್‌ನಿಂದ ದೆಹಲಿಗೆ ಹೊರಡಬೇಕಿದ್ದ ವಿಮಾನದ ಸಹ-ಪೈಲಟ್‌ ಒಬ್ಬರು ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದಾರೆ. ಸೆಪ್ಟೆಂಬರ್ 6 ರಂದು ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ನಡೆಸಲಾದ ವೈದ್ಯಕೀಯ ತಪಾಸಣೆಯಲ್ಲಿ ಸಹ-ಪೈಲಟ್ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಕೆಲವು ವಾರಗಳ ಹಿಂದೆಯಷ್ಟೇ ಫುಕೆಟ್‌ನಿಂದ ದೆಹಲಿಗೆ ಬಂದಿದ್ದ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ಪತ್ತೆಯಾಗಿ ಭಾರಿ ಸಂಚಲನ ಮೂಡಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಪೈಲಟ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲರಾಗಿರುವುದು ಏರ್ ಇಂಡಿಯಾಗೆ ತೀವ್ರ ಮುಜುಗರ ತಂದಿಟ್ಟಿದೆ.

ಪೈಲೆಟ್‌ ಕಾರಣದಿಂದ ರದ್ದುಗೊಂಡ ವಿಮಾನ

ಜ್ಯೂರಿಚ್ ವಿಮಾನ ನಿಲ್ದಾಣದ ಅಧಿಕಾರಿಗಳು ಸೈಡ್ ಆಫೀಸರ್ (ಸಹ-ಪೈಲಟ್) ಮದ್ಯ ಸೇವಿಸಿರುವ ಶಂಕೆ ವ್ಯಕ್ತಪಡಿಸಿ, ತಕ್ಷಣವೇ ಅವರನ್ನು ವಿಮಾನದಿಂದ ಕೆಳಗಿಳಿಸಿದರು. ಬಳಿಕ ನಡೆಸಲಾದ ಪ್ರಾಥಮಿಕ ಪರೀಕ್ಷೆಯಲ್ಲಿ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಪ್ರಸ್ತುತ ದ್ವಿತೀಯ ಹಂತದ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದ್ದು, ಸಂಬಂಧಪಟ್ಟ ಪೈಲಟ್‌ ಅನ್ನು ಪ್ರಯಾಣಿಕನನ್ನಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. ಅಂತಿಮ ವೈದ್ಯಕೀಯ ವರದಿ ಬರುವವರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಹ-ಪೈಲಟ್ ಇಲ್ಲದ ಕಾರಣ ಎಐ-151 ವಿಮಾನವು ನಿಗದಿತ ಸಮಯಕ್ಕೆ ನಿರ್ಗಮಿಸಲು ಸಾಧ್ಯವಾಗದೆ ರದ್ದುಗೊಂಡಿತು. ಮಾರನೇ ದಿನ ಈ ವಿಮಾನವು ದೆಹಲಿಗೆ ಪ್ರಯಾಣ ಬೆಳೆಸಿತು.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, ಸುರಕ್ಷತೆ, ನಿಯಮಾವಳಿ ಹಾಗೂ ಸಂಸ್ಥೆಯ ನೀತಿಗಳ ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಯಲ್ಲಿ ಶಿಸ್ತು ಹಾಗೂ ಹೊಣೆಗಾರಿಕೆಯನ್ನು ಮೂಡಿಸಲು ವಿಮಾನ ಸಿಬ್ಬಂದಿಗೆ ಸುರಕ್ಷತಾ ಮಾನದಂಡಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯದ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮಗಳನ್ನು ಮೀರಿದರೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಂಸ್ಥೆ ಎಚ್ಚರಿಸಿದೆ.

ಗಾಂಜಾ ಸೇವಿಸಿ ವಿಮಾನ ಚಲಾಯಿಸಿದ್ದ ಪೈಲಟ್:

ಕಳೆದ ಆಗಸ್ಟ್ 4 ರಂದು ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಐ-2379 ವಿಮಾನವು ಒಡಿಶಾ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿತ್ತು. ಈ ವೇಳೆ ವಿಮಾನದಲ್ಲಿದ್ದ 137 ಪ್ರಯಾಣಿಕರಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿದಿತ್ತು. ಈ ಘಟನೆಯ ತನಿಖೆ ನಡೆಸಿದಾಗ, ವಿಮಾನದ ಮುಖ್ಯ ಪೈಲಟ್ ಸುದೀಪ್ ವಸಿಷ್ಠ ಗಾಂಜಾ (ಮರಿಜುವಾನಾ) ಸೇವಿಸಿರುವುದು ಡ್ರಗ್ ಪರೀಕ್ಷೆಯಲ್ಲಿ ಎರಡು ಬಾರಿ ದೃಢಪಟ್ಟಿತ್ತು. ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಸಿಷ್ಠ, ತಮಗೆ ವೈಯಕ್ತಿಕ ಕಾರಣಗಳಿಂದ ನಿದ್ರಾಹೀನತೆಯ ಸಮಸ್ಯೆಯಿತ್ತು ಮತ್ತು ಕುಟುಂಬದ ವೈದ್ಯರು ನೀಡಿದ ಔಷಧಿಯನ್ನು ಸೇವಿಸುತ್ತಿದ್ದುದಾಗಿ ಹೇಳಿಕೊಂಡಿದ್ದರು.

ಫುಕೆಟ್ ಘಟನೆಯ ಸರಣಿ ಪರಿಣಾಮವಾಗಿ ಏರ್ ಇಂಡಿಯಾ ಸಂಸ್ಥೆಯು ತನ್ನೆಲ್ಲಾ ಪೈಲಟ್‌ಗಳಿಗೆ ಕಡ್ಡಾಯವಾಗಿ ಡೋಪ್ ಹಾಗೂ ಡ್ರಗ್ ಪರೀಕ್ಷೆಯನ್ನು ಜಾರಿಗೆ ತಂದಿತ್ತು. ಇದರ ಜೊತೆಗೆ ಸಿಬ್ಬಂದಿಗಳ ಮೇಲ್ವಿಚಾರಣೆ ಹೆಚ್ಚಿಸುವುದು, ಮಾದಕ ದ್ರವ್ಯ ತಪಾಸಣೆಯನ್ನು ಕಟ್ಟುನಿಟ್ಟುಗೊಳಿಸುವುದು ಹಾಗೂ ಕಾರ್ಯಾಚರಣೆಯ ನಡವಳಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ. ಆದಾಗ್ಯೂ, ವಿದೇಶಿ ನೆಲದಲ್ಲಿ ಮತ್ತೆ ಪೈಲಟ್ ಒಬ್ಬರು ಮದ್ಯ ಸೇವಿಸಿ ಸಿಕ್ಕಿಬಿದ್ದಿರುವುದು ಪ್ರಯಾಣಿಕರ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.

ಇದನ್ನೂ ಓದಿ: ಚುನಾವಣಾ ಆಯೋಗದಲ್ಲಿ ಆಂತರಿಕ ಭಿನ್ನಾಭಿಪ್ರಾಯ: ಸಿಇಸಿ ಜ್ಞಾನೇಶ್ ಕುಮಾರ್ ನಿರ್ಧಾರಗಳಿಗೆ ಸುಪ್ರೀಂ ಸವಾಲು

Leave a Reply

Your email address will not be published. Required fields are marked *