TOP NEWS

Bollywood: ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಪೋಸ್ಟರ್ ಎಡವಟ್ಟು: ವಾನರನಿಗೆ ಕನ್ನಡಕ ಹಾಕಿ ನೆಟ್ಟಿಗರಿಂದ ಭಾರಿ ಟ್ರೋಲ್!

Specs in Treta Yuga New Ramayana Film Trolled Over Hilarious Poster Mistake

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಮತ್ತು ಮಹಾಭಾರತದ ಆಧಾರಿತ ಸಿನಿಮಾಗಳಿಗೆ ಯಾವತ್ತೂ ಕೊರತೆಯಿಲ್ಲ. ನಿತೀಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಬಿಗ್ ಬಜೆಟ್ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಸಣ್ಣ ಬಜೆಟ್‌ನ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಎಂಬ ಹೊಸ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಆದರೆ, ಈ ಸಿನಿಮಾ ತನ್ನ ಕಥೆ ಅಥವಾ ನಿರೂಪಣೆಯಿಂದ ಸುದ್ದಿಯಾಗುವ ಬದಲು, ಕಳಪೆ ಮಟ್ಟದ ವಿಎಫ್‌ಎಕ್ಸ್ (VFX) ಹಾಗೂ ಪೋಸ್ಟರ್‌ನಲ್ಲಿ ಎಸಗಿರುವ ಹಾಸ್ಯಾಸ್ಪದ ತಪ್ಪುಗಳಿಂದಾಗಿ ಸಾಮಾಜಿಕ (Bollywood) ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ.

ಪೋಸ್ಟರ್‌ನಲ್ಲಿ ಕನ್ನಡಕ ಧರಿಸಿದ ವಾನರ ಸೇನಾನಿ! ಸೆಪ್ಟೆಂಬರ್ ೨೫ ರಂದು ವಿಶ್ವಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾದ ಪೋಸ್ಟರ್ ಒಂದನ್ನು ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಸುಗ್ರೀವ ಹಾಗೂ ವಾನರ ಸೇನೆಯನ್ನು ಬಿಂಬಿಸುವ ಪೋಸ್ಟರ್‌ನಲ್ಲಿ, ಮಾನವ ರೂಪದ ವಾನರ ಸೈನಿಕನೊಬ್ಬ ಆಧುನಿಕ ಶೈಲಿಯ ಕಣ್ಣಿನ ಕನ್ನಡಕ (Spectacles) ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತ್ರೇತಾಯುಗದ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸೈನಿಕನೊಬ್ಬ ಸ್ಪೆಕ್ಸ್ ಧರಿಸಿರುವುದನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಜನರು ಕಾಲೆಳೆಯುತ್ತಿದ್ದಾರೆ. “ತ್ರೇತಾಯುಗದಲ್ಲೂ ಸ್ಪೆಕ್ಸ್ ಇತ್ತಾ?”, “ವಾನರ ಸೇನೆಯಲ್ಲಿ ಟೈಮ್ ಟ್ರಾವೆಲರ್ ಸೇರಿಕೊಂಡಿದ್ದಾನೆ”, “ಕಣ್ಣಿನ ಪೊರೆ ಇತ್ತೇನೋ, ಅದಕ್ಕೆ ಕನ್ನಡಕ ಹಾಕಿದ್ದಾರೆ” ಎಂದೆಲ್ಲಾ ಮೀಮ್ಸ್‌ಗಳನ್ನು ಮಾಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಏನಿದು ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’? ಈ ಸಿನಿಮಾದ ನಿರೂಪಣೆಯ ಶೈಲಿ ಕೊಂಚ ಭಿನ್ನವಾಗಿದೆ. ಶಾಶ್ವತ್ ಎಂಬ ಸಣ್ಣ ಮಗುವಿಗೆ ಹನುಮಂತನು ಮುನಿಯ ವೇಷದಲ್ಲಿ ಆಗಮಿಸಿ ಶ್ರೀರಾಮನ ಸಂಪೂರ್ಣ ಜೀವನಚರಿತ್ರೆಯನ್ನು ಹಾಗೂ ಧರ್ಮದ ಹಾದಿಯನ್ನು ವಿವರಿಸುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಇಂದಿನ ಯುವ ಪೀಳಿಗೆಗೆ ರಾಮಾಯಣದ ಭಕ್ತಿ, ಮೌಲ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಚಿತ್ರತಂಡದ ಮುಖ್ಯ ಉದ್ದೇಶವಾಗಿತ್ತು. ಈ ಚಿತ್ರದಲ್ಲಿ ದೇವ್ ಶರ್ಮಾ (ಶ್ರೀರಾಮ), ಅಂಜಲಿ ಅರೋರಾ (ಸೀತೆ), ಶೀಲ್ ವರ್ಮಾ (ಲಕ್ಷ್ಮಣ), ನಿರ್ಭಯ್ ವಾಧ್ವಾ (ಹನುಮಂತ) ಹಾಗೂ ರಜನೀಶ್ ದುಗ್ಗಲ್ (ರಾವಣ) ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಎತ್ತರವೇ ಮುಳುವಾಯ್ತು ಎಂದ ನಟ ದೇವ್ ಶರ್ಮಾ: ಚಿತ್ರದ ಪ್ರಚಾರದ ವೇಳೆ ನಾಯಕ ನಟ ದೇವ್ ಶರ್ಮಾ ತಮ್ಮ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದರು. ಈ ಹಿಂದೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಹಾಗೂ ರಣಬೀರ್ ಕಪೂರ್ ಅವರ ‘ರಾಮಾಯಣ’ ಚಿತ್ರಗಳಲ್ಲಿ ಲಕ್ಷ್ಮಣನ ಪಾತ್ರಕ್ಕಾಗಿ ತಮ್ಮ ಲುಕ್ ಟೆಸ್ಟ್ ನಡೆದಿತ್ತು. ಆದರೆ, ರಣಬೀರ್ ಕಪೂರ್‌ಗಿಂತ ೨ ಇಂಚು ಹೆಚ್ಚು ಎತ್ತರವಿದ್ದ ಕಾರಣಕ್ಕೆ ಹಾಗೂ ಪ್ರಭಾಸ್‌ಗೆ ಸರಿಸಮಾನವಾದ ದೇಹದಾಢ್ಯ ಹೊಂದಿದ್ದರಿಂದ ನಾಯಕ ನಟನಿಗಿಂತ ಎತ್ತರ ಕಾಣಿಸುತ್ತೀರಿ ಎಂದು ತಮ್ಮನ್ನು ಎರಡೂ ಚಿತ್ರಗಳಿಂದ ಕೈಬಿಡಲಾಗಿತ್ತು. ಇದರಿಂದ ಭ್ರಮನಿರಸನಗೊಂಡಿದ್ದ ದೇವ್ ಶರ್ಮಾ ಅವರಿಗೆ ಕೊನೆಗೂ ಈ ಚಿತ್ರದ ಮೂಲಕ ಶ್ರೀರಾಮನ ಪಾತ್ರದಲ್ಲೇ ಅಭಿನಯಿಸುವ ಅವಕಾಶ ಸಿಕ್ಕಿದೆ. ಆದರೆ ಚಿತ್ರದ ಮೇಲಿರುವ ಕಳಪೆ ತಾಂತ್ರಿಕತೆಯ ಕಂಪ್ಲೇಂಟ್‌ಗಳು ಸಿನಿಮಾಗೆ ಹಿನ್ನಡೆ ತಂದೊಡ್ಡಿವೆ.

ಇದನ್ನೂ ಓದಿ: ‘ದೇವರಾಯ’ ಚಿತ್ರಕ್ಕಾಗಿ ಇತಿಹಾಸಕಾರನ ಭೇಟಿಯಾದ ಕಿಚ್ಚ: ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ ಕುತೂಹಲ!

Leave a Reply

Your email address will not be published. Required fields are marked *