TOP NEWS

Kichcha Sudeep: ‘ದೇವರಾಯ’ ಚಿತ್ರಕ್ಕಾಗಿ ಇತಿಹಾಸಕಾರನ ಭೇಟಿಯಾದ ಕಿಚ್ಚ: ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ ಕುತೂಹಲ!

Preps On for Devaraya kichcha Sudeep Meeting with Historian Dharmendra Kumar Raises Expectations

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಇತ್ತೀಚೆಗೆ ಪ್ರಸಿದ್ಧ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅವರನ್ನು ಭೇಟಿಯಾಗಿರುವುದು ಗಾಂಧಿನಗರದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದೊಂದು ಸಾಧಾರಣ ಹಾಗೂ ಸೌಹಾರ್ದಯುತ ಭೇಟಿ (Casual Meet) ಎಂದು ಹೇಳಲಾಗುತ್ತಿದ್ದರೂ, ಈ ಭೇಟಿಯ ಹಿಂದೆ ಸುದೀಪ್ ಅವರ ಮುಂಬರುವ ಬಿಗ್ ಬಜೆಟ್ ಐತಿಹಾಸಿಕ ಸಿನಿಮಾ ‘ದೇವರಾಯ’ ಚಿತ್ರದ ಪೂರ್ವಭಾವಿ ಸಂಶೋಧನೆ ಹಾಗೂ ಸಿದ್ಧತೆಗಳಿರಬಹುದು ಎಂಬ ದಟ್ಟ ವದಂತಿಗಳು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ಶ್ರೀಕೃಷ್ಣದೇವರಾಯನ ಅವತಾರದಲ್ಲಿ ಕಿಚ್ಚ
ಸೆಪ್ಟೆಂಬರ್ ೨ ರಂದು ಸುದೀಪ್ ಅವರ ಜನ್ಮದಿನದ ಅಂಗವಾಗಿ ‘ದೇವರಾಯ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿತ್ತು. ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಹಾಗೂ ಪ್ರಜಾಪಾಲಕ ಚಕ್ರವರ್ತಿಯಾಗಿದ್ದ ಶ್ರೀಕೃಷ್ಣದೇವರಾಯನ ಸುವರ್ಣ ಯುಗದ ಕಥಾಹಂದರವನ್ನು ಈ ಚಿತ್ರ ಹೊಂದಿರಲಿದೆ. ೧೯೭೦ರಲ್ಲಿ ಬಿ.ಆರ್. ಪಂತುಲು ಅವರ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಡಾ. ರಾಜ್‌ಕುಮಾರ್ ಅವರು ‘ಶ್ರೀಕೃಷ್ಣದೇವರಾಯ’ ಪಾತ್ರದಲ್ಲಿ ನಟಿಸಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಅರ್ಧ ಶತಮಾನದ ನಂತರ ಮತ್ತೆ ಅದೇ ಐತಿಹಾಸಿಕ ನಾಯಕನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದು, ಪೋಸ್ಟರ್‌ನಲ್ಲಿ ಅವರ ರಾಜ ಗಾಂಭೀರ್ಯದ ಲುಕ್ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.

ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಲು ಸುದೀಪ್ ಜಿಮ್‌ನಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದು, ದೈಹಿಕವಾಗಿ ತಮ್ಮನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ಈ ಐತಿಹಾಸಿಕ ಹಿನ್ನೆಲೆಯ ನೈಜತೆಯನ್ನು ಕಾಯ್ದುಕೊಳ್ಳಲು ಹಾಗೂ ಆ ಕಾಲಘಟ್ಟದ ನಿಖರ ಮಾಹಿತಿ ಪಡೆಯಲು ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅವರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಾಲು ಸಾಲು ಬಿಡುವಿಲ್ಲದ ಪ್ರಾಜೆಕ್ಟ್‌ಗಳು
ದೇವರಾಯ’ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಧಮಾಕ ಸೃಷ್ಟಿಸಿದ್ದರೂ, ಈ ಸಿನಿಮಾದ ಶೂಟಿಂಗ್ ಆರಂಭವಾಗಲು ಇನ್ನು ಸ್ವಲ್ಪ ಸಮಯ ಹಿಡಿಯಲಿದೆ. ಪ್ರಸ್ತುತ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲರಂಗ ಬಾಷಾ’ ಸಿನಿಮಾದ ಕೆಲಸಗಳಲ್ಲಿ ತೀವ್ರ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ನಿರೂಪಣೆಯ ಹೊಣೆಯನ್ನೂ ಹೊರಲಿದ್ದಾರೆ.

ಅಲ್ಲದೆ, ತಮಿಳು ನಿರ್ದೇಶಕ ಸಮುದ್ರಕಣಿ ನಿರ್ದೇಶನ ಮಾಡಲಿರುವ ‘ಸ್ಕೂಲ್ ಬಸ್’ ಹಾಗೂ ಕನ್ನಡಿಗರ ನೆಚ್ಚಿನ ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆಗಿನ ಬಹುನಿರೀಕ್ಷಿತ ಸಿನಿಮಾಗಳ ಸಾಲು ಸುದೀಪ್ ಅವರ ಮುಂದಿದೆ. ಈ ಸಾಲು ಸಾಲು ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದ ನಂತರ ‘ದೇವರಾಯ’ ಚಿತ್ರ ಪೂರ್ಣಪ್ರಮಾಣದಲ್ಲಿ ಸೆಟ್ಟೇರಲಿದೆಯೇ ಅಥವಾ ಇತರ ಸಿನಿಮಾಗಳ ಜೊತೆಜೊತೆಯಲ್ಲೇ ಈ ಐತಿಹಾಸಿಕ ಚಿತ್ರದ ಕೆಲಸಗಳು ನಡೆಯಲಿವೆಯೇ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ಸ್ಪಷ್ಟಪಡಿಸಬೇಕಿದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಿ ನಂಬರ್ 1, ಆಸ್ತಿಯಲ್ಲಿ ಶಾರುಖ್ ಖಾನ್ ಬಾದ್‌ಶಾ

Leave a Reply

Your email address will not be published. Required fields are marked *