TOP NEWS

LPG Crisis: ಮದುವೆ ಮನೆಗೆ ತಟ್ಟಿದ ಯುದ್ಧದ ಬಿಸಿ: ಸಿಲಿಂಡರ್ ಬೆಲೆ ಎಂಟು ಸಾವಿರಕ್ಕೆ ಏರಿಕೆ, ಊಟದ ಮೆನುವಿನಲ್ಲಿ ಕಡಿತ!

marriage functions in bengaluru facing problem due to LPG crisis

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಈಗ ಸಿಲಿಕಾನ್ ಸಿಟಿಯ ಮದುವೆ ಸಂಭ್ರಮದ ಮೇಲೆ (LPG Crisis) ಕರಿನೆರಳು ಬೀರಿದೆ. ಅಡುಗೆ ಅನಿಲದ ತೀವ್ರ ಅಭಾವ ಮತ್ತು ಬೆಲೆ ಏರಿಕೆಯಿಂದಾಗಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕುಟುಂಬಗಳು ಕಂಗಾಲಾಗಿವೆ.

₹8,000ಕ್ಕೆ ಒಂದು ಸಿಲಿಂಡರ್!

ಅಡುಗೆ ಅನಿಲದ ಕೊರತೆ ಎಷ್ಟಿದೆ ಎಂದರೆ, ಕೇಟರಿಂಗ್ ಮಾಲೀಕರು ಈಗ ಮದುವೆ ಮನೆ ಮಂದಿಗೆ ಅಚ್ಚರಿಯ ಷರತ್ತು ವಿಧಿಸುತ್ತಿದ್ದಾರೆ. ಸಿಲಿಂಡರ್‌ಗಳನ್ನು ನೀವೇ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಒಂದು ಸಿಲಿಂಡರ್‌ಗೆ ಬರೋಬ್ಬರಿ ಎಂಟು ಸಾವಿರ ರೂಪಾಯಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಅಧಿಕೃತವಾಗಿ ವಾಣಿಜ್ಯ ಸಿಲಿಂಡರ್ ಬೆಲೆ ₹3,152 ಇದ್ದರೂ, ಮಾರುಕಟ್ಟೆಯಲ್ಲಿನ ಡಿಮ್ಯಾಂಡ್ ನೋಡಿ ಕಾಳಸಂತೆಯಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.

ಊಟದ ತಟ್ಟೆ ದುಬಾರಿ, ಖಾದ್ಯಗಳು ಕಡಿಮೆ

ಸಿಲಿಂಡರ್ ಬೆಲೆ ಏರಿಕೆಯ ಹೊರೆ ನೇರವಾಗಿ ಊಟದ ಪ್ಲೇಟ್ ಮೇಲೆ ಬಿದ್ದಿದೆ. ಕೇಟರಿಂಗ್ ದರಗಳು ಪ್ರತಿ ಪ್ಲೇಟ್‌ಗೆ ಸುಮಾರು ₹120 ರಷ್ಟು ಏರಿಕೆಯಾಗಿವೆ. ಇಷ್ಟೇ ಅಲ್ಲದೆ, ಗ್ಯಾಸ್ ಉಳಿತಾಯ ಮಾಡಲು ಅಡುಗೆಯವರು ಮೆನುವಿನಿಂದ ಹಲವು ಖಾದ್ಯಗಳನ್ನು ಕಡಿತಗೊಳಿಸುತ್ತಿದ್ದಾರೆ. ಹೆಚ್ಚು ಸಮಯ ಬೇಯಿಸಬೇಕಾದ ಅಥವಾ ಅನಿಲ ವ್ಯಯವಾಗುವ 5 ರಿಂದ 7 ಬಗೆಯ ಪದಾರ್ಥಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ.

ಬಜೆಟ್ ಏರಿಕೆ ಮತ್ತು ಅತಿಥಿಗಳ ಕಡಿತ

ಯುದ್ಧದ ಪರಿಣಾಮ ಕೇವಲ ಗ್ಯಾಸ್‌ಗೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಿಂದ ಬರುತ್ತಿದ್ದ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳ ಆಮದು ಸ್ಥಗಿತಗೊಂಡಿರುವುದರಿಂದ ಮದುವೆ ವೆಚ್ಚ ಶೇ. 40ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಅನೇಕ ಕುಟುಂಬಗಳು ಅನಿವಾರ್ಯವಾಗಿ ಅಲಂಕಾರಕ್ಕೆ ಕತ್ತರಿ ಹಾಕುತ್ತಿವೆ. ಅತಿಥಿಗಳ ಪಟ್ಟಿಯನ್ನು ಕೂಡ ಮಿತಿಗೊಳಿಸಿ ಬಜೆಟ್ ಸರಿದೂಗಿಸಲು ಪ್ರಯತ್ನಿಸಲಾಗುತ್ತಿದೆ.

ಊಟಕ್ಕೆ ಆದ್ಯತೆ

ಮದುವೆಯಲ್ಲಿ ಊಟಕ್ಕೆ ಯಾವುದೇ ಕೊರತೆಯಾಗಬಾರದು ಎಂಬ ಹಠಕ್ಕೆ ಬಿದ್ದಿರುವ ಗ್ರಾಹಕರು, ಡೆಕೋರೇಷನ್ ಮತ್ತು ಇತರೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಅಡುಗೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ತಿಳಿಯಾಗದಿದ್ದರೆ ಮುಂಬರುವ ದಿನಗಳಲ್ಲಿ ಮದುವೆ ಮಾಡುವುದು ಮತ್ತಷ್ಟು ದುಬಾರಿಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಸತ್ಕಾರ: ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳ, ಇಂದಿನಿಂದಲೇ ಜಾರಿ!

Leave a Reply

Your email address will not be published. Required fields are marked *