TOP NEWS

Vande Mataram: ಇನ್ಮುಂದೆ ‘ವಂದೇ ಮಾತರಂ’ಗೆ ಅಡ್ಡಿಪಡಿಸಿದರೆ 3 ವರ್ಷ ಜೈಲು; ರಾಷ್ಟ್ರಪತಿ ಅಂಕಿತ!

Jail Term for Insulting National Song President Murmu Approves New Law Protecting Vande Mataram

ನವದೆಹಲಿ: ಭಾರತದ ರಾಷ್ಟ್ರೀಯ ಗೀತೆ ‘ಜನ ಗಣ ಮನ’ಕ್ಕೆ ಇರುವ ಕಾನೂನು ರಕ್ಷಣೆ ಮತ್ತು ಗೌರವ ಇನ್ನು ಮುಂದೆ ರಾಷ್ಟ್ರಗೀತೆ ‘ವಂದೇ ಮಾತರಂ’(Vande Mataram)ಗೂ ಸಿಗಲಿದೆ. ವಂದೇ ಮಾತರಂ ಗೀತೆಯನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಅಪಮಾನ ಮಾಡುವುದನ್ನು ಅಪರಾಧ ಎಂದು ಪರಿಗಣಿಸುವ ಮಹತ್ವದ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಅಧಿಕೃತ ಅಂಕಿತ ಹಾಕಿದ್ದಾರೆ. ಇದರೊಂದಿಗೆ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ-2026’ ದೇಶಾದ್ಯಂತ ಜಾರಿಗೆ ಬಂದಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಮಹತ್ವದ ತಿದ್ದುಪಡಿ ವಿಧೇಯಕಕ್ಕೆ ಜುಲೈ 29 ರಂದು ರಾಜ್ಯಸಭೆ ಮತ್ತು ಜುಲೈ 30 ರಂದು ಲೋಕಸಭೆ ಈಗಾಗಲೇ ಒಪ್ಪಿಗೆ ನೀಡಿದ್ದವು.

ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ವಂದೇ ಮಾತರಂ ಗೀತೆಯನ್ನು ಹಾಡಲಾಗುವುದು. ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ಕೇವಲ ‘ಜನ ಗಣ ಮನ’ ಗೀತೆ ಹಾಡುವಾಗ ಅಡ್ಡಿಪಡಿಸಿದರೆ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿತ್ತು. ಅಂತಹ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ನಿಯಮವಿತ್ತು. ಆದರೆ ರಾಷ್ಟ್ರಗೀತೆಯಾದ ‘ವಂದೇ ಮಾತರಂ’ಗೆ ಇಂತಹ ಯಾವುದೇ ಕಾನೂನು ರಕ್ಷಣೆ ಇರಲಿಲ್ಲ. ಈಗ ಹೊಸ ಕಾಯ್ದೆಯ ಮೂಲಕ ವಂದೇ ಮಾತರಂ ಗೀತೆಗೂ ಸಮಾನ ಸ್ಥಾನಮಾನ ನೀಡಲಾಗಿದ್ದು, ಇನ್ಮುಂದೆ ಇದಕ್ಕೆ ಅಡ್ಡಿಪಡಿಸುವವರಿಗೂ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಕಾಯಂ ಆಗಲಿದೆ.

1950ರ ಜನವರಿ 24 ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ ಬಂಕಿಮ ಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ಗೀತೆಗೆ ‘ಜನ ಗಣ ಮನ’ಕ್ಕೆ ಸಮಾನವಾದ ಗೌರವ ಮತ್ತು ಸ್ಥಾನಮಾನ ನೀಡಬೇಕು ಎಂದು ಹೇಳಿದ್ದರು. ಅದನ್ನು ಈಗ ಕಾನೂನುಬದ್ಧಗೊಳಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ಗೀತೆಗಾಗಿ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಒಟ್ಟಿಗೆ ಪ್ರಸ್ತುತಪಡಿಸುವಾಗ, ಮೊದಲು ವಂದೇ ಮಾತರಂ ಗೀತೆಯನ್ನೇ ಹಾಡಬೇಕು.

ಎಲ್ಲೆಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ

ಅಷ್ಟೇ ಅಲ್ಲದೆ, 3 ನಿಮಿಷ 10 ಸೆಕೆಂಡುಗಳ ಕಾಲಾವಧಿಯ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಇನ್ಮುಂದೆ ರಾಷ್ಟ್ರಪತಿಗಳ ಆಗಮನ, ಧ್ವಜಾರೋಹಣ ಮತ್ತು ರಾಜ್ಯಪಾಲರ ಭಾಷಣದಂತಹ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಲಾಗಿದೆ. ಈ ಗೀತೆಯನ್ನು ಹಾಡುವಾಗ ಸಭೆಯಲ್ಲಿರುವ ಪ್ರತಿಯೊಬ್ಬರೂ ಎದ್ದುನಿಂತು ಗೌರವ ಸೂಚಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ದೇಶದ ಎಲ್ಲಾ ಶಾಲೆಗಳಲ್ಲಿ ದಿನದ ಆರಂಭದ ಪ್ರಾರ್ಥನೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವುದನ್ನು ಕಡ್ಡಾಯಗೊಳಿಸಿ ಗೃಹ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚೀನಾ ರಾಕೆಟ್ ಉಡಾವಣೆ ವೇಳೆ ಮಹಾ ದುರಂತ: ಆಕಾಶದಲ್ಲೇ ಬೆಂಕಿಯ ಉಂಡೆಯಾದ ‘ಲಾಂಗ್ ಮಾರ್ಚ್ 7ಎ’

Leave a Reply

Your email address will not be published. Required fields are marked *