ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಸಿನಿಮಾ ಜರ್ನಿ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಜಿಗಿಯುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಚಿತ್ರಗಳ ಮೂಲಕ ಸೌತ್ ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ನಟಿ, ಈಗ ಮಲಯಾಳಂ ಚಿತ್ರರಂಗಕ್ಕೂ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ಜೊತೆಗಿನ ತಮ್ಮ ಹೊಸ ಸಿನಿಮಾದ ಶೂಟಿಂಗ್ ಅನ್ನು ಅವರು ಅಧಿಕೃತವಾಗಿ ಆರಂಭಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಶೇರ್ ಮಾಡಿಕೊಂಡ ನಟಿ
ಈ ಕುರಿತು ರುಕ್ಮಿಣಿ ವಸಂತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರೀಕರಣದ ಮುಹೂರ್ತದ ಕ್ಲಾಪ್‌ಬೋರ್ಡ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಫೋಟೋದೊಂದಿಗೆ ಬರೆದುಕೊಂಡಿರುವ ಅವರು, “ಹೊಸ ಪಯಣ ಆರಂಭವಾಗಿದೆ. ನಾವು ದೂರಾಚೆಗಿನಿಂದ ನೋಡಿ ಮೆಚ್ಚಿಕೊಂಡಿದ್ದ ಜಾಗದಲ್ಲಿ ನಾವೇ ನಿಂತು ಕೆಲಸ ಮಾಡುವಾಗ ಸಿಗುವ ಆನಂದವೇ ಬೇರೆ. ಈಗ ಈ ವಿಶೇಷ ಸಿನಿಮಾದ ಸಣ್ಣ ಭಾಗವಾಗಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
‘NP51’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ
ಇನ್ನು ಹೆಸರಿಡದ ಈ ಹೊಸ ಮಲಯಾಳಂ ಚಿತ್ರಕ್ಕೆ ಸದ್ಯ ‘NP51’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದ್ದು, ಇದು ನಿವಿನ್ ಪೌಲಿ ಅವರ 51ನೇ ಸಿನಿಮಾವಾಗಿದೆ. ಸೂಪರ್ ಹಿಟ್ ‘ಜಯ ಜಯ ಜಯ ಜಯ ಹೇ’ ಚಿತ್ರದ ಕಥೆಗಾರರಲ್ಲಿ ಒಬ್ಬರಾದ ನ್ಯಾಶಿದ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ‘ಚಾರ್ಲಿ’ ಮತ್ತು ‘ನಾಯಟ್ಟು’ ಖ್ಯಾತಿಯ ಪ್ರಸಿದ್ಧ ನಿರ್ದೇಶಕ-ನಿರ್ಮಾಪಕ ಮಾರ್ಟಿನ್ ಪ್ರಕ್ಕಾಟ್ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮಲಯಾಳಂ ರಂಗದ ದಿಗ್ಗಜರ ಜೊತೆಗೆ ಕನ್ನಡದ ರುಕ್ಮಿಣಿ ವಸಂತ್ ಕೈಜೋಡಿಸಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ.
ಕೇವಲ ಮಲಯಾಳಂ ಮಾತ್ರವಲ್ಲದೆ, ದಕ್ಷಿಣ ಭಾರತದಾದ್ಯಂತ ರುಕ್ಮಿಣಿ ವಸಂತ್ ಅವರ ಬೇಡಿಕೆ ಹೆಚ್ಚಾಗಿದೆ. ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರಂತಹ ದೊಡ್ಡ ತಾರಾಗಣವೇ ಇದೆ. ಇದರ ಜೊತೆಗೆ ತೆಲುಗಿನ ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಭಾರಿ ಬಜೆಟ್‌ನ ‘ಡ್ರ್ಯಾಗನ್’ (Dragon) ಚಿತ್ರಕ್ಕೂ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದು, ಇಡೀ ಭಾರತೀಯ ಚಿತ್ರರಂಗವೇ ಅವರತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದೇಶಭಕ್ತಿ ತೋರಿಸುವುದು ಅಪರಾಧವೇ?’: ‘ಧುರಂಧರ್’ ಪ್ರೋಪಗಂಡ ಸಿನಿಮಾ ಎಂಬ ವಿಮರ್ಶಕರಿಗೆ ನಟ ಮಾಧವನ್ ಖಡಕ್ ತಿರುಗೇಟು!
