TOP NEWS

Ranya Rao: ಚಿನ್ನದ ಕಳ್ಳಸಾಗಣೆ ಕೇಸ್: ನಟಿ ರನ್ಯಾ ರಾವ್‌ಗೆ ಏರ್‌ಪೋರ್ಟ್ ಸಿಸಿಟಿವಿ ದೃಶ್ಯಾವಳಿ ನೀಡಲು ಹೈಕೋರ್ಟ್ ಆದೇಶ

Major Relief for Actress Ranya Rao in Gold Smuggling Case High Court Orders Release of Airport CCTV Footage

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ (Ranya Rao) ಅವರಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ರನ್ಯಾ ರಾವ್‌ ಪರ ವಕೀಲರ ವಾದವೇನು?

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಕುರಿತ ಅರ್ಜಿಯ ವಿಚಾರಣೆಯನ್ನು ನಡೆಸಿತು. ಈ ವೇಳೆ ನಟಿ ರನ್ಯಾ ರಾವ್ ಪರ ವಕೀಲರಾದ ವೈ.ಎಲ್. ಮಹೇಶ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, 2025ರ ಜುಲೈ 15 ರಂದು ಹೈಕೋರ್ಟ್ ನೀಡಿದ್ದ ಸ್ಪಷ್ಟ ಆದೇಶವನ್ನು ಜಾರಿಗೊಳಿಸುವಲ್ಲಿ ಸಿಐಎಸ್‌ಎಫ್ (CISF) ಕಮಾಂಡೆಂಟ್ ವಿಫಲರಾಗಿದ್ದಾರೆ. ಆದ್ದರಿಂದ 2025ರ ಮಾರ್ಚ್ 3 ರಂದು ನಡೆದಿರುವ ಘಟನೆಯ ಸ್ಪಷ್ಟ ಸಿಸಿಟಿವಿ ದೃಶ್ಯಾವಳಿಗಳನ್ನು ತಮಗೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಅಧಿಕಾರಿಗಳಿಂದ ಸಣ್ಣ ಗೊಂದಲ

ಇದಕ್ಕೆ ಪ್ರತಿಕ್ರಿಯಿಸಿದ ಸಿಐಎಸ್‌ಎಫ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅರವಿಂದ್ ಕಾಮತ್ ಅವರು, ಹೈಕೋರ್ಟ್‌ನ ಹಿಂದಿನ ಆದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಅಧಿಕಾರಿಗಳಿಂದ ಸಣ್ಣ ಗೊಂದಲ ಉಂಟಾಗಿತ್ತು. ಅರ್ಜಿದಾರರು ಇನ್ನು ಎರಡು ದಿನಗಳ ನಂತರ ಸಂಬಂಧಪಟ್ಟ ಸಿಐಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಿದರೆ, 2025ರ ಮಾರ್ಚ್ 3ರ ಸಂಜೆ 4:30 ರಿಂದ ಹಿಡಿದು ಮಾರ್ಚ್ 4ರ ಬೆಳಿಗ್ಗೆ 11 ಗಂಟೆಯವರೆಗಿನ ಸಂಪೂರ್ಣ ವಿಡಿಯೋ ಫುಟೇಜ್ ಅನ್ನು ಹಸ್ತಾಂತರಿಸಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಪರ ವಕೀಲರ ಈ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಂಡ ನ್ಯಾಯಪೀಠವು, ನಟಿಯ ಪರ ವಕೀಲರಿಗೆ ಅಗತ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ತಡಮಾಡದೇ ಒದಗಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ಮುಕ್ತಾಯಗೊಳಿಸಿದೆ.

ಚಿನ್ನದ ಕಳ್ಳಸಾಗಣೆ ಜಾಲದಲ್ಲಿ ನಟಿ ರನ್ಯಾ ರಾವ್‌ಗೆ 2 ಕೋಟಿ ರೂ. ವಂಚನೆ: ಇಡಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಹಿರಂಗ!

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಹೋಗಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್, ಸ್ವತಃ ಕಳ್ಳಸಾಗಣೆ ಜಾಲದ ಕಿಲಾಡಿಯೊಬ್ಬನಿಂದ ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾಗಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆಫ್ರಿಕಾದಿಂದ ನೇರವಾಗಿ ಚಿನ್ನ ಸರಬರಾಜು ಮಾಡಿಕೊಡುವುದಾಗಿ ನಂಬಿಸಿದ ವಂಚಕನೊಬ್ಬ, ನಟಿ ರನ್ಯಾ ಹಾಗೂ ಅವರ ಬಿಸಿನೆಸ್ ಪಾರ್ಟ್‌ನರ್ ತರುಣ್‌ಗೆ ಬರೋಬ್ಬರಿ 2 ಕೋಟಿ ರೂಪಾಯಿ ನಾಮ ಹಾಕಿ ಎಸ್ಕೇಪ್ ಆಗಿದ್ದಾನೆ.

ಜಾರಿ ನಿರ್ದೇಶನಾಲಯ (ED) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಈ ಕುರಿತಾದ ಸಂಪೂರ್ಣ ವಿವರಗಳು ಹೊರಬಿದ್ದಿವೆ. ಆರಂಭದಲ್ಲಿ ಈ ಜಾಲವು ಆಫ್ರಿಕಾದಿಂದ ದುಬೈ ಮೂಲಕ ಭಾರತಕ್ಕೆ ಕಾನೂನುಬಾಹಿರವಾಗಿ ಹಳದಿ ಲೋಹವನ್ನು ತರಲು ಸ್ಕೆಚ್ ಹಾಕಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ನಟಿಯಿಂದ ಕೋಟಿಗಟ್ಟಲೆ ಹಣ ಪಡೆದು ಕೈಕೊಟ್ಟಿದ್ದ. ಹಣ ಕಳೆದುಕೊಂಡು ಕಂಗಾಲಾಗಿದ್ದ ನಟಿ ಹಾಗೂ ಅವರ ಪಾಲುದಾರ ಈ ಬಗ್ಗೆ ಕೀನ್ಯಾ ದೇಶದ ಅಧಿಕಾರಿಗಳಿಗೂ ದೂರು ನೀಡಲು ಮುಂದಾಗಿದ್ದರು. ಆದರೆ ಕಾನೂನಾತ್ಮಕ ತೊಡಕುಗಳ ಕಾರಣದಿಂದಾಗಿ ಆ ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ಟಿದ್ದರು ಎಂದು ಇಡಿ ಉಲ್ಲೇಖಿಸಿದೆ.

ಆದರೆ ಈ ಇಡೀ ಸ್ಮಗ್ಲಿಂಗ್ ಜಾಲದ ಅಸಲಿ ಮುಖವಾಡ ಕಳಚಿದ್ದು 2025ರ ಮಾರ್ಚ್ 3ರಂದು. ಅಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ (DRI) ಅಧಿಕಾರಿಗಳು ತಡೆದು ತೀವ್ರ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಅವರು ತಮ್ಮ ದೇಹದಲ್ಲಿ ಗುಪ್ತವಾಗಿ ಬಚ್ಚಿಟ್ಟು ಸಾಗಿಸುತ್ತಿದ್ದ 14.2 ಕೆಜಿ ತೂಕದ ಚಿನ್ನ ಪತ್ತೆಯಾಗಿತ್ತು. ಇದರ ಅಂದಾಜು ಮೌಲ್ಯ ಬರೋಬ್ಬರಿ 12.56 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಸದ್ಯ ಇಡಿ ತನಿಖೆಯಿಂದ ಹೊರಬಿದ್ದಿರುವ ಈ ವಂಚನೆಯ ಹೊಸ ಕಥೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಶಿರಾಡಿಘಾಟ್‌ನಲ್ಲಿ ವಂದೇ ಭಾರತ್ ಮ್ಯಾಜಿಕ್: ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಪ್ರಾಯೋಗಿಕ ಸಂಚಾರ ಯಶಸ್ವಿ!

Leave a Reply

Your email address will not be published. Required fields are marked *