ಮಹಾರಾಷ್ಟ್ರ: ಮತ ಕೇಳುವಾಗ ಜನರ ಸೇವೆ ಮಾಡುತ್ತೇವೆ ಎನ್ನುತ್ತೀರಿ, ಗೆದ್ದ ನಂತರ ಜನರ ಮೇಲೆಯೇ ಹಲ್ಲೆ ನಡೆಸುತ್ತೀರಿ” ಎಂದು ಬಾಂಬೆ ಹೈಕೋರ್ಟ್ (Maharashtra) ಶಿವಸೇನಾ (ಶಿಂಧೆ ಬಣ) ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಾಮೀನು ನೀಡಲು ನಿರಾಕರಣೆ
ಡೊಂಬಿವ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ರಮೇಶ್ ಮ್ಹಾತ್ರೆಗೆ ತಕ್ಷಣಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದ ತನಿಖೆಯನ್ನು ತಕ್ಷಣವೇ ಜಂಟಿ ಪೊಲೀಸ್ ಕಮಿಷನರ್ (ಡಿಸಿಪಿ) ಹಂತದ ಅಧಿಕಾರಿಗೆ ವಹಿಸಬೇಕು ಮತ್ತು ದೂರುದಾರ ವೈದ್ಯರು, ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಜುಲೈ 6 ರಂದು ಗರ್ಭಿಣಿಯೊಬ್ಬರ ಚಿಕಿತ್ಸೆಯಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ರಮೇಶ್ ಮ್ಹಾತ್ರೆ ಮತ್ತು ಅವರ ಬೆಂಬಲಿಗರು ವೈದ್ಯರ ಮೇಲೆ ಫೈಲ್ ಹಾಗೂ ಖುರ್ಚಿಗಳಿಂದ ಹಲ್ಲೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರಿದ್ದ ಪೀಠವು, ಆರೋಪಿಯು ವೈದ್ಯರನ್ನು ಸತತವಾಗಿ ಥಳಿಸುತ್ತಿದ್ದು ಅರ್ಧ ಸೆಕೆಂಡ್ ಕೂಡ ವ್ಯರ್ಥ ಮಾಡಿಲ್ಲ ಎಂದು ಗಮನಿಸಿತು. ಆರೋಪಿಗೆ 73 ವರ್ಷ ವಯಸ್ಸಾಗಿದ್ದು ವಯೋಸಹಜ ವಿನಾಯಿತಿ ನೀಡಬೇಕೆಂಬ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ವಿಡಿಯೋದಲ್ಲಿ ಅವರು ಮೇಜಿನ ಮೇಲಿಂದ ಜಿಗಿದು ಹಲ್ಲೆ ನಡೆಸುವಾಗ ಯಾವುದೇ ವಯಸ್ಸಾದ ಲಕ್ಷಣ ಕಾಣಿಸುತ್ತಿರಲಿಲ್ಲ ಎಂದು ತೀಕ್ಷ್ಣವಾಗಿ ಹೇಳಿತು.
ಈ ಘಟನೆಯ ನಂತರ ಆರಂಭದಲ್ಲಿ ಪೊಲೀಸರು ಆರೋಪಿಗೆ ಅಪರೂಪದ “ಗೌರವ” ನೀಡಿ, ತನಿಖೆಯನ್ನೇ ನಡೆಸದೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲು ಅನುಮತಿ ಕೋರಿದ್ದರು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಜುಲೈ 15 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮ್ಹಾತ್ರೆಗೆ ಜಾಮೀನು ನೀಡಿತ್ತು. ಆದರೆ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, ಮ್ಯಾಜಿಸ್ಟ್ರೇಟ್ ನೀಡಿರುವ ಜಾಮೀನು ಆದೇಶಕ್ಕೆ ತಡೆ ನೀಡಿತ್ತು. ಹೈಕೋರ್ಟ್ ಮಧ್ಯಪ್ರವೇಶದ ನಂತರ ಮ್ಹಾತ್ರೆ ಪೊಲೀಸರಿಗೆ ಶರಣಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಾಕ್ಷಿಗಳ ರಕ್ಷಣೆ ಅತ್ಯಂತ ಅಗತ್ಯ
ಸ್ಥಳೀಯ ವೈದ್ಯರು ಮತ್ತು ದೂರುದಾರರಿಗೆ ಬೆದರಿಕೆ ಕರೆಗಳು ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಸಾಕ್ಷಿಗಳ ರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಿಂದ ಹೊರಗುಳಿಯಲು ಸಿದ್ಧರಿದ್ದೇವೆ ಮತ್ತು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿ ಎಂದು ಆರೋಪಿ ಪರ ವಕೀಲರು ಕೋರಿದರಾದರೂ, ಹೈಕೋರ್ಟ್ ತಕ್ಷಣದ ಪರಿಹಾರ ನೀಡಲು ನಿರಾಕರಿಸಿದೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವಾದಗಳನ್ನು ಆಲಿಸಿದ ನಂತರವೇ ಮುಂದಿನ ಆದೇಶ ಹೊರಡಿಸುವುದಾಗಿ ತಿಳಿಸಿರುವ ಪೀಠವು, ಜುಲೈ 31ರೊಳಗೆ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: ಅಭಿಜೀತ್ ದಿಪ್ಕೆ ಸಾಕ್ಷಾತ್ ವಿಷ್ಣು ಅವತಾರ! ಉದ್ಧವ್ ಠಾಕ್ರೆ ಹೇಳಿಕೆಗೆ ತೀವ್ರ ಆಕ್ರೋಶ
