TOP NEWS

BMTC: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಸ್ಟೇರಿಂಗ್ ವೀಲ್ ಕಟ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Horrific Incident in Bengaluru BMTC Bus Steering Breaks Off Mid Journey Disaster Averted

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯ (BMTC) ನಿರ್ವಹಣಾ ಲೋಪಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿಗೆ ಮತ್ತೊಂದು ಜೀವಂತ ನಿದರ್ಶನವೆಂಬಂತೆ ರಸ್ತೆಯಲ್ಲಿ ಸಾಗುತ್ತಿದ್ದ ಚಾಲೂ ಬಸ್‌ನ ಸ್ಟೇರಿಂಗ್ ವೀಲ್ ಏಕಾಏಕಿ ಕಳಚಿ ಚಾಲಕನ ಕೈಗೆ ಬಂದಿರುವ ಆತಂಕಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ನೂರಾರು ಪ್ರಯಾಣಿಕರನ್ನು ಹೊತ್ತು ವೇಗವಾಗಿ ಸಾಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಈ ರೀತಿಯ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಭೀತಿಯನ್ನುಂಟು ಮಾಡಿದೆ.

ಏನಿದು ಘಟನೆ?

ಪ್ರಯಾಣಿಕರಿಂದ ತುಂಬಿದ್ದ ಬಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ಸಂಪೂರ್ಣವಾಗಿ ಕಳಚಿಕೊಂಡಿದೆ. ಈ ಅನಿರೀಕ್ಷಿತ ಅಪಾಯದ ಸಂದರ್ಭದಲ್ಲಿ ಚಾಲಕ ತೋರಿದ ಅಸಾಧಾರಣ ಸಮಯಪ್ರಜ್ಞೆ ಹಾಗೂ ಜಾಣ್ಮೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ದೊಡ್ಡ ರಸ್ತೆ ಅಪಘಾತ ಹಾಗೂ ಪ್ರಾಣಾಪಾಯ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಚಲಿಸುತ್ತಿರುವಾಗಲೇ ಬಸ್‌ನ ಸ್ಟೇರಿಂಗ್ ಕೈಗೆ ಬಂದ ಆತಂಕಕಾರಿ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜನರ ಸುರಕ್ಷತೆಯೊಂದಿಗೆ ಚೆಲ್ಲಾಟವಾಡುತ್ತಿರುವ ಸಾರಿಗೆ ಇಲಾಖೆ ಹಾಗೂ ಬಿಎಂಟಿಸಿ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಯಂತೆ, ಈ ಆಘಾತಕಾರಿ ಘಟನೆಗೆ ಒಳಗಾದ ಬಸ್ ಬೆಂಗಳೂರಿನ ರಾಜರಾಜೇಶ್ವರಿನಗರದ (ಆರ್.ಆರ್. ನಗರ) ಬಿಎಂಟಿಸಿ ಡಿಪೋ-21ಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ವಾಹನದ ಫಿಟ್‌ನೆಸ್ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಸರಿಯಾಗಿ ಪರಿಶೀಲಿಸದೆ, ಅತ್ಯಂತ ಹಳೆಯ ಹಾಗೂ ಕನಿಷ್ಠ ನಿರ್ವಹಣೆಯೂ ಇಲ್ಲದ ಕೆಟ್ಟ ಸ್ಥಿತಿಯಲ್ಲಿದ್ದ ಬಸ್ ಅನ್ನು ರಸ್ತೆಗೆ ಇಳಿಸಿ ಪ್ರಯಾಣಿಕರ ಸೇವೆಯಲ್ಲಿ ಬಳಸಲಾಗಿದೆ ಎಂಬ ಗಂಭೀರ ಆರೋಪಗಳು ಸಾರಿಗೆ ಇಲಾಖೆಯ ಮೇಲ್ಮಟ್ಟದಲ್ಲಿ ಕೇಳಿಬಂದಿವೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಲಾಖೆಯ ಮರ್ಯಾದೆ ಹರಾಜಾಗುತ್ತಿದ್ದಂತೆ ಎಚ್ಚೆತ್ತಿರುವ ಬಿಎಂಟಿಸಿ ಹಿರಿಯ ಅಧಿಕಾರಿಗಳು, ಕೂಡಲೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಇಷ್ಟು ಅಪಾಯಕಾರಿ ಹಾಗೂ ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದ್ದ ಬಸ್ ಅನ್ನು ರಸ್ತೆಗೆ ಬಿಟ್ಟವರು ಯಾರು ಎಂಬ ಬಗ್ಗೆ ಕಠಿಣ ಪ್ರಶ್ನೆಗಳು ಎದ್ದಿವೆ. ಬಸ್‌ನ ತಾಂತ್ರಿಕ ತಪಾಸಣೆ ನಡೆಸದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದ ಡಿಪೋ ಮ್ಯಾನೇಜರ್, ಮೆಕ್ಯಾನಿಕ್ ಹಾಗೂ ಇದಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲಾ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಬಿಎಂಟಿಸಿ ಉನ್ನತ ಮೂಲಗಳು ತಿಳಿಸಿವೆ. ಪ್ರಯಾಣಿಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ ಡಿಪೋ ಮ್ಯಾನೇಜರ್ ವಿರುದ್ಧವೂ ಕಠಿಣ ಕ್ರಮ ಜರುಗಿಸಲು ಸಾರಿಗೆ ಸಂಸ್ಥೆ ಮುಂದಾಗಿದೆ.

ಇದನ್ನೂ ಓದಿ: ವಿದ್ಯಾವಿಕಾಸ ಯೋಜನೆಯಡಿ ಕಳಪೆ ಪಾದರಕ್ಷೆಗಳ ಪೂರೈಕೆ: ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ತನಿಖೆ

Leave a Reply

Your email address will not be published. Required fields are marked *