TOP NEWS

DK Shivakumar: ಸತೀಶ್ ಜಾರಕಿಹೊಳಿ ವಿರುದ್ಧದ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ: ಕಾಂಗ್ರೆಸ್ ಪಕ್ಷವನ್ನು ಟ್ರ್ಯಾಪ್ ಮಾಡಲು ಸಂಚು ಎಂದ ಡಿ.ಕೆ. ಶಿವಕುಮಾರ್

Targeting Congress Party CM dk shivakumar Alleges Political Motive Behind Raids on Satish Jarkiholi

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಎಸಗಿಲ್ಲ ಮತ್ತು ಅವರ ಎಲ್ಲ ವ್ಯವಹಾರಗಳು ಕಾಯ್ದೆಯ ಚೌಕಟ್ಟಿನೊಳಗೇ ನಡೆದಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿ ಎಂದು ಬಣ್ಣಿಸಿದರು. ಸಚಿವರು ಅಥವಾ ರಾಜಕಾರಣಿಗಳು ಹೊರಗೆ ಹೋಗಬಾರದು ಅಥವಾ ವೈಯಕ್ತಿಕ ವ್ಯವಹಾರಗಳನ್ನು ನಡೆಸಬಾರದು ಎಂದು ಎಲ್ಲೂ ನಿರ್ಬಂಧವಿಲ್ಲ. ವಿರೋಧ ಪಕ್ಷಗಳು ನಡೆಸುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಕಿಡಿಕಾರಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಇನ್ನೂ ಮೂರ್ನಾಲ್ಕು ಪ್ರಮುಖ ನಾಯಕರ ಮೇಲೆ ದಾಳಿ ನಡೆಸಲು ಎದುರಾಳಿಗಳು ಸಂಚು ರೂಪಿಸುತ್ತಿದ್ದಾರೆ. ಸಮಗ್ರ ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಂಡು ರಾಜಕೀಯ ಬಲೆಗೆ ಕೆಡವಲು ವ್ಯವಸ್ಥಿತ ತಯಾರಿ ನಡೆಸಿದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ಕಿಡಿಕಾರಿದ ಸಿಎಂ

ಕೇಂದ್ರದ ಆಡಳಿತಾರೂಢ ಬಿಜೆಪಿಯವರ ವಿರುದ್ಧ ಯಾವುದೇ ರೀತಿಯ ತನಿಖೆಗಳು ಅಥವಾ ದಾಳಿಗಳು ನಡೆಯುತ್ತಿಲ್ಲ ಎಂಬುದನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ವ್ಯಕ್ತಿಯನ್ನಷ್ಟೇ ಅಲ್ಲದೆ ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ವಂದೇ ಮಾತರಂ ಗೀತೆ ಮೊಟಕುಗೊಳಿಸಿರುವ ವಿವಾದದ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಗೀತೆ ವಂದೇ ಮಾತರಂ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಬಿಜೆಪಿ ಸುಮ್ಮನೆ ಈ ವಿಚಾರವನ್ನು ಮುನ್ನೆಲೆಗೆ ತಂದು ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದರು.

ಇದೇ ವೇಳೆ, ಅರಣ್ಯ ಹುತಾತ್ಮರ ದಿನಾಚರಣೆಯ ಹಿನ್ನೆಲೆಯಲ್ಲಿ ವೀರರಿಗೆ ಗೌರವ ನಮನ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು, ಅರಣ್ಯ ಸಿಬ್ಬಂದಿಯಂತೆ ಪೊಲೀಸ್ ಸಿಬ್ಬಂದಿಯೂ ಸಹ ಭತ್ಯೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸರ್ಕಾರಿ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಯಾರ ಬಳಿಯಾದರೂ ಕಾನೂನು ಬಾಹಿರವಾಗಿ ಗನ್ ಅಥವಾ ಬಂದೂಕುಗಳಿದ್ದರೆ, ಅಂತಹವರು ಸ್ವಯಂಪ್ರೇರಿತರಾಗಿ ಕೂಡಲೇ ಸರ್ಕಾರಕ್ಕೆ ಅವುಗಳನ್ನು ಒಪ್ಪಿಸಬೇಕು. ಈ ರೀತಿ ಅಕ್ರಮ ಬಂದೂಕುಗಳನ್ನು ಶರಣು ಮಾಡಲು ನವೆಂಬರ್ 1ರವರೆಗೆ ಗಡುವು ನೀಡಲಾಗಿದೆ. ಸಾರ್ವಜನಿಕರು ಭಯಪಡದೆ ಅಧಿಕಾರಿಗಳ ಬಳಿ ಬರಬೇಕು, ಪೊಲೀಸರು ಜನರ ಮನವೊಲಿಸುವ ಕಾರ್ಯ ಮಾಡಬೇಕು. ಬಂದೂಕು ಒಪ್ಪಿಸುವವರು ಒಂದು ಸಣ್ಣ ಕ್ಷಮೆಯಾಚನಾ ಪತ್ರ ಬರೆದುಕೊಟ್ಟರೆ ಸಾಕು ಎಂದು ತಿಳಿಸಿದರು.

ಅಕ್ರಮ ಬಂದೂಕು ಇದ್ದರೆ ಕಠಿಣ ಕ್ರಮ

ಒಂದು ವೇಳೆ ನಾವೆಂಬುದನ್ನು ಲೆಕ್ಕಿಸದೆ ನಿಗದಿತ ದಿನದೊಳಗೆ ಅಕ್ರಮ ಬಂದೂಕುಗಳನ್ನು ಶರಣು ಮಾಡದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ರಕ್ಷಣೆಗಾಗಿ ಅಥವಾ ಆತ್ಮರಕ್ಷಣೆಗಾಗಿ ಬಂದೂಕು ಕಡ್ಡಾಯವಾಗಿ ಬೇಕಿರುವವರು ನಿಗದಿತ ಪ್ರಕ್ರಿಯೆಯಂತೆ ಹೊಸದಾಗಿ ಪರವಾನಗಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಇನ್ನು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಕಸ್ತೂರಿರಂಗನ್ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ಮಂಗಳೂರು ಜಿಲ್ಲೆಗೆ ಅಧಿಕೃತ ಭೇಟಿ ನೀಡಿದ ಬಳಿಕ ರಾಜ್ಯದ ಇತರೆ ಮೂರರಿಂದ ನಾಲ್ಕು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು. ಆಯಾ ಪ್ರದೇಶಗಳಲ್ಲಿ ಸ್ಥಳೀಯ ರೈತರನ್ನು ಖುದ್ದಾಗಿ ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಲಾಗುವುದು. ರೈತರ ಸಂಕಷ್ಟಗಳು, ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿಯಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಮತ್ತು ಸೂಕ್ತ ತೀರ್ಮಾನ ಕೈಗೊಳ್ಳಲು ಸರ್ಕಾರವು ವಿಶೇಷ ಅಧಿವೇಶನವನ್ನೇ ಕರೆದಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಸ್ಟೇರಿಂಗ್ ವೀಲ್ ಕಟ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Leave a Reply

Your email address will not be published. Required fields are marked *