TOP NEWS

LPG: ಗ್ರಾಮೀಣ ಎಲ್‌ಪಿಜಿ ಬಳಕೆದಾರರಿಗೆ ಭಾರಿ ರಿಲೀಫ್: ಸಿಲಿಂಡರ್ ಮರುಬುಕಿಂಗ್ ಅವಧಿ 25 ದಿನಕ್ಕೆ ಕಡಿತಗೊಳಿಸಿದ ಕೇಂದ್ರ

LPG Refill Booking Revised Centre Standardizes Refill Interval to 25 Days for Rural and Urban Areas

ನವದೆಹಲಿ: ಗ್ರಾಮೀಣ ಭಾಗದ ಅಡುಗೆ ಅನಿಲ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ಸಮಾಧಾನಕರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗೃಹಬಳಕೆ ಸಿಲಿಂಡರ್ ಮರುಬುಕಿಂಗ್ ಮಾಡಲು ನಿಗದಿಯಾಗಿದ್ದ 45 ದಿನಗಳ ಕಾಯುವಿಕೆ ಅವಧಿಯನ್ನು ಇದೀಗ 25 ದಿನಗಳಿಗೆ ಕಡಿತಗೊಳಿಸಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶ ಹೊರಡಿಸಿದೆ. ಈ ನೂತನ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಸೂಚನೆ ನೀಡಲಾಗಿದ್ದು, ಇನ್ಮುಂದೆ ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಒಂದೇ ಮಾದರಿಯ 25 ದಿನಗಳ ಬುಕಿಂಗ್ ಅವಧಿ ಜಾರಿಯಲ್ಲಿರಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.

ತೊಂದರೆ ಅನುಭವಿಸಿದ್ದ ಅನೇಕ ಕುಟುಂಬ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಭವಿಸಿದ್ದ ಸಮರ ಮತ್ತು ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಈ ಪೂರೈಕೆ ಬಿಕ್ಕಟ್ಟನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಿಲಿಂಡರ್ ಬುಕಿಂಗ್ ನಡುವೆ 45 ದಿನಗಳ ಸುದೀರ್ಘ ಅಂತರವನ್ನು ಕಡ್ಡಾಯಗೊಳಿಸಿ ನಿಯಂತ್ರಣ ಹೇರಿತ್ತು. ಇದರಿಂದಾಗಿ ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಅಡುಗೆ ಅನಿಲಕ್ಕಾಗಿ ತೀವ್ರ ತೊಂದರೆ ಅನುಭವಿಸುವಂತಾಗಿತ್ತು.

ಸುಧಾರಿಸಿರುವ ಪೂರೈಕೆ ಸ್ಥಿತಿ

ಆದರೆ, ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಿತಿಗತಿ ಗಣನೀಯವಾಗಿ ಚೇತರಿಸಿಕೊಂಡಿದ್ದು, ಸಿಲಿಂಡರ್ ಪೂರೈಕೆಯ ಹಿನ್ನಡೆ (Backlog) ಸಂಪೂರ್ಣವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ. ನಗರ ಅಥವಾ ಗ್ರಾಮೀಣ ಎಂಬ ಯಾವುದೇ ತಾರತಮ್ಯವಿಲ್ಲದೆ ದೇಶದ ಎಲ್ಲಾ ಗೃಹಬಳಕೆದಾರರು ಇನ್ಮುಂದೆ ಪ್ರತಿ 25 ದಿನಕ್ಕೊಮ್ಮೆ ಹೊಸ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದು, ಈ ಸಂಬಂಧ ತೈಲ ಕಂಪನಿಗಳಿಗೆ ಕಳುಹಿಸಲಾದ ಅಧಿಕೃತ ಪತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಎಲ್‌ಪಿಜಿ ಗ್ರಾಹಕರ ಗಮನಕ್ಕೆ: ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 7 ಕೊನೆಯ ದಿನ; ಸಬ್ಸಿಡಿ ತಡೆಯಿಲ್ಲದೆ ಪಡೆಯಲು ತಕ್ಷಣವೇ ಈ ಕೆಲಸ ಮಾಡಿ!

ಬೆಂಗಳೂರು: ಗೃಹಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ತಕ್ಷಣವೇ ಗಮನಿಸಬೇಕಾದ ಅತ್ಯಂತ ಪ್ರಮುಖ ಸುದ್ದಿಯೊಂದಿದೆ. ಗ್ಯಾಸ್ ಸಂಪರ್ಕದ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀಡಲಾಗಿದ್ದ ಅಂತಿಮ ಗಡುವು ಸೆಪ್ಟೆಂಬರ್ 7 ಅಂದರೆ ಇಂದಿಗೆ ಮುಕ್ತಾಯಗೊಳ್ಳುತ್ತಿದೆ. ಇಷ್ಟರವರೆಗೆ ಬಯೋಮೆಟ್ರಿಕ್ ಅಥವಾ ಆನ್‌ಲೈನ್ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರು ಇಂದೇ ತಮ್ಮ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕಾಗಿದೆ.

ಈ ಹಿಂದೆ ಸರ್ಕಾರ ಹಾಗೂ ಗ್ಯಾಸ್ ಸಂಸ್ಥೆಗಳು ಆಗಸ್ಟ್ 31ರವರೆಗೆ ಇ-ಕೆವೈಸಿ ಸಲ್ಲಿಕೆಗೆ ಅವಕಾಶ ನೀಡಿದ್ದವು. ಆದರೆ ಲಕ್ಷಾಂತರ ಗ್ರಾಹಕರು ಇನ್ನೂ ಕೆವೈಸಿ ಮಾಡಿಸುವುದು ಬಾಕಿ ಇದ್ದಿದ್ದರಿಂದ, ಅನುಕೂಲಕ್ಕೋಸ್ಕರ ಗಡುವನ್ನು ಸೆಪ್ಟೆಂಬರ್ 7ರವರೆಗೆ ವಿಸ್ತರಿಸಲಾಗಿತ್ತು. ಈಗಾಗಲೇ ಈ ಪ್ರಕ್ರಿಯೆಗೆ ಹಲವು ಬಾರಿ ಸಮಯಾವಕಾಶ ನೀಡಲಾಗಿರುವುದರಿಂದ, ಮತ್ತೆ ಸಮಯ ವಿಸ್ತರಣೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ. ನಿಗದಿತ ಸಮಯದೊಳಗೆ ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಖಾತೆಗೆ ಜಮೆಯಾಗುವುದು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ಅಷ್ಟೇ ಅಲ್ಲದೆ, ಮುಂದೆ ಸಾಮಾನ್ಯ ಚಿಲ್ಲರೆ ದರದಲ್ಲೇ ಸಿಲಿಂಡರ್ ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಬಹುದು.

ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?: ಗ್ಯಾಸ್ ವಿತರಣೆ ವ್ಯವಸ್ಥೆಯ ಸಾಫ್ಟ್‌ವೇರ್ ಆಧುನಿಕೀಕರಣ ಹಾಗೂ ನಕಲಿ ಸಂಪರ್ಕ ತಡೆಯುವ ಉದ್ದೇಶದಿಂದ ಈ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಏಜೆನ್ಸಿಗೆ ಅಲೆಯದೇ ತಮ್ಮ ಮೊಬೈಲ್ ಮೂಲಕವೇ ಈ ಕೆವೈಸಿ ಪ್ರಕ್ರಿಯೆ ಮುಗಿಸಬಹುದು. ಇಂಡೇನ್ ಗ್ರಾಹಕರು ‘IndianOil ONE’, ಭಾರತ್ ಗ್ಯಾಸ್ ಗ್ರಾಹಕರು ‘Hello BPCL’ ಹಾಗೂ ಹೆಚ್‌ಪಿ ಗ್ಯಾಸ್ ಬಳಕೆದಾರರು ‘HP Pay’ ಆ್ಯಪ್ ಬಳಸಿ ಇ-ಕೆವೈಸಿ ಮಾಡಿಕೊಳ್ಳಬಹುದು.

ಆ್ಯಪ್ ತೆರೆದು e-KYC ವಿಭಾಗ ಆಯ್ಕೆ ಮಾಡಿ, ನಿಮ್ಮ ಗ್ಯಾಸ್ ಕಸ್ಟಮರ್ ಐಡಿ ಹಾಗೂ ಇತರ ವೈಯಕ್ತಿಕ ವಿವರ ನಮೂದಿಸಬೇಕು. ಮುಖದ ಮೂಲಕ ದೃಢೀಕರಣಕ್ಕಾಗಿ ‘Aadhaar Face RD’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಫೇಸ್ ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಆನ್‌ಲೈನ್ ಸಾಧ್ಯವಾಗದಿದ್ದರೆ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ: ಆನ್‌ಲೈನ್ ಆ್ಯಪ್ ಬಳಸಲು ಬರದಿದ್ದರೆ ಅಥವಾ ತಾಂತ್ರಿಕ ತೊಂದರೆ ಎದುರಾದರೆ, ನೇರವಾಗಿ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬಹುದು. ಅಲ್ಲಿ ಗ್ಯಾಸ್ ಪಾಸ್‌ಬುಕ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಮತ್ತು ಬೆರಳಚ್ಚು (Biometric) ನೀಡಿ ಪ್ರಕ್ರಿಯೆ ಮುಗಿಸಬಹುದು. ಇನ್ನು ಮನೆಗೆ ಸಿಲಿಂಡರ್ ತರುವ ಡೆಲಿವರಿ ಸಿಬ್ಬಂದಿ ಬಳಿ ಇರುವ ಸಾಧನದ ಮೂಲಕವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಸಬ್ಸಿಡಿ ನಷ್ಟವಾಗದಂತೆ ಇಂದೇ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ.

ಇದನ್ನೂ ಓದಿ: ಆಂಧ್ರದಲ್ಲಿ ಅದ್ಭುತ ಶಸ್ತ್ರಚಿಕಿತ್ಸೆ: ಮಹಿಳೆಯ ಹೊಟ್ಟೆಯಿಂದ 14 ಪೆನ್, 5 ಚಮಚ, ಮೇಣದಬತ್ತಿ ಹೊರತೆಗೆದ ವೈದ್ಯರು

Leave a Reply

Your email address will not be published. Required fields are marked *