ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A1) ಪವಿತ್ರಾ ಗೌಡ (Pavitra Gowda) ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿ ತಮಗೆ ಎದುರಾಗುತ್ತಿದ್ದ ಸಾಲು ಸಾಲು ಆರೋಗ್ಯ ಸಮಸ್ಯೆಗಳು ಹಾಗೂ ಕಿರಿಕಿರಿಯಿಂದ ಬೇಸತ್ತು, ಬ್ಯಾರಕ್ ಬದಲಾವಣೆ ಮಾಡುವಂತೆ ಅವರು ಕೋರ್ಟ್ಗೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ 59ನೇ ಸೆಷನ್ಸ್ ನ್ಯಾಯಾಲಯವು ಪವಿತ್ರಾ ಗೌಡಗೆ ಕೊಂಚ ಸಮಾಧಾನ ತರುವಂತಹ ಮಹತ್ವದ ಸೂಚನೆಯನ್ನು ನೀಡಿದೆ.
ಬೇರೆ ಬ್ಯಾರಕ್ಗೂ ಸ್ಥಳಾಂತರಿಸಲು ಅನುಮತಿ
ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಪವಿತ್ರಾ ಗೌಡ ಅವರ ಆರೋಗ್ಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಕಾರಾಗೃಹದ ನಿಯಮಾವಳಿಗಳನ್ನು (Jail Manual) ಚಾಚೂ ತಪ್ಪದೆ ಪಾಲಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಒಂದು ವೇಳೆ ಆರೋಗ್ಯ ಸಮಸ್ಯೆ ಹೆಚ್ಚಾದರೆ ಅಥವಾ ಅಗತ್ಯವಿದ್ದಲ್ಲಿ ಅವರನ್ನು ತಕ್ಷಣವೇ ಬೇರೆ ಬ್ಯಾರಕ್ಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಬ್ಯಾರಕ್ ಬದಲಾವಣೆಗೆ ಕೋರ್ಟ್ ಮೆಟ್ಟಿಲೇರಿದ್ದೇಕೆ?: ಸಾಮಾನ್ಯ ಮಹಿಳಾ ಕೈದಿಗಳ ಜೊತೆ ಒಂದೇ ಸೆಲ್ನಲ್ಲಿ ಇರಲು ತಮಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪವಿತ್ರಾ ಗೌಡ ಪರ ವಕೀಲರು ಅರ್ಜಿಯಲ್ಲಿ ವಿವರಿಸಿದ್ದರು. ಕಾರಾಗೃಹದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸಲಾಗಿದೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಕೇವಲ 20 ಮಹಿಳಾ ಕೈದಿಗಳು ಇರಬಹುದಾದ ಜಾಗದಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಕೈದಿಗಳನ್ನು ಇರಿಸಲಾಗಿದ್ದು, ಇದರಿಂದ ಜೈಲಿನಲ್ಲಿ ಸೂಕ್ತ ವಾತಾವರಣವಿಲ್ಲದೆ ಪವಿತ್ರಾ ಗೌಡ ಅವರ ನಿದ್ದೆ ಹಾಗೂ ಆರೋಗ್ಯದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ದೂರಲಾಗಿತ್ತು.
ಅಷ್ಟೇ ಅಲ್ಲದೆ, ಬ್ಯಾರಕ್ನಲ್ಲಿರುವ ಕೆಲ ಮಹಿಳಾ ಕೈದಿಗಳು ರಾತ್ರಿಯಿಡೀ ನಿದ್ದೆ ಮಾಡದೆ ಗಲಾಟೆ ಅಥವಾ ಕಲಾಪ ಮಾಡುವುದರಿಂದ ತಮಗೂ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಿರಂತರವಾಗಿ ಸರಿಯಾದ ನಿದ್ದೆ ಸಿಗದ ಕಾರಣ ಪವಿತ್ರಾ ಗೌಡ ಅವರು ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ. ಜ ಜೊತೆಗೆ ಈ ವಾತಾವರಣವು ಅವರನ್ನು ಮಾನಸಿಕ ಒತ್ತಡ, ಆತಂಕ ಮತ್ತು ಉದ್ವೇಗಕ್ಕೆ ದೂಡುತ್ತಿದೆ ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ಆರೋಗ್ಯದ ಏರುಪೇರನ್ನು ಮುಖ್ಯ ಆಧಾರವಾಗಿಟ್ಟುಕೊಂಡು ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಜೈಲು ಅಧಿಕಾರಿಗಳಿಗೆ ಅಗತ್ಯ ಬಿದ್ದರೆ ಬ್ಯಾರಕ್ ಬದಲಾಯಿಸಲು ಸ್ಪಷ್ಟ ಸೂಚನೆ ನೀಡಿರುವುದು ಪವಿತ್ರಾ ಗೌಡ ಪರ ವಕೀಲರ ಪಾಲಿಗೆ ದೊರೆತ ಪ್ರಮುಖ ಐನ್ಸೈಟ್ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಬಿಗ್ಬಾಸ್ 13 ರಂಗೇರಿದ ಅಖಾಡ: ಮೊದಲ ದಿನವೇ ಸ್ಪರ್ಧಿಗಳಿಗೆ ಬೆಡ್ ಸಿಗದೆ ಶಾಕ್ ಕೊಟ್ಟ ಬಿಗ್ಬಾಸ್!
