ಬೆಂಗಳೂರು: ಕೆಜಿಎಫ್’ ಸರಣಿಯ ಬ್ರಹ್ಮಾಂಡ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಥಿಯೇಟರ್ನಲ್ಲಿ ಎದುರಾದ ಈ ಹಿನ್ನಡೆಯ ಬೆನ್ನಲ್ಲೇ, ಚಿತ್ರತಂಡಕ್ಕೆ ಒಟಿಟಿ (OTT) ಡಿಜಿಟಲ್ ಹಕ್ಕುಗಳ ಮಾರಾಟದಲ್ಲೂ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಈ ಚಿತ್ರದ ಡಿಜಿಟಲ್ ಹಕ್ಕುಗಳು ಇಂದಿಗೂ ಮಾರಾಟವಾಗದೆ ಉಳಿದಿದ್ದು, ಪ್ರಮುಖ ಒಟಿಟಿ ಸಂಸ್ಥೆಗಳು ಈಗ ತೀರಾ ಕಡಿಮೆ ಮೊತ್ತಕ್ಕೆ ಹಕ್ಕುಗಳನ್ನು ಖರೀದಿಸಲು ಮುಂದಾಗಿವೆ.
200 ಕೋಟಿ ಬೇಡಿಕೆ ಇಟ್ಟಿದ್ದ ಸಿನಿಮಾ ತಂಡ
ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಮುಖ ಹಿರಿಯ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ವೊಂದು ‘ಟಾಕ್ಸಿಕ್’ ಡಿಜಿಟಲ್ ಹಕ್ಕುಗಳಿಗಾಗಿ ಸುಮಾರು 150 ಕೋಟಿ ರೂಪಾಯಿ ಆಫರ್ ನೀಡಿತ್ತು. ಆದರೆ ಯಶ್ ಹಾಗೂ ಚಿತ್ರದ ನಿರ್ಮಾಪಕರು ಈ ಒಪ್ಪಂದವನ್ನು ನಿರಾಕರಿಸಿ, ಡಿಜಿಟಲ್ ಹಕ್ಕುಗಳಿಗೆ 200 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಬೇಡಿಕೆಯಿಟ್ಟಿದ್ದರು. ಥಿಯೇಟರ್ಗಳಲ್ಲಿ ಸಿನಿಮಾ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯಲಿದ್ದು, ಅದಾದ ಬಳಿಕವೇ ಉತ್ತಮ ಬೆಲೆಗೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಬಹುದು ಎಂಬ ದೃಢವಾದ ವಿಶ್ವಾಸದಲ್ಲಿದ್ದರು.
30 ಕೋಟಿ ಆಫರ್ ಕೊಟ್ಟ ಝೀ
ಆದರೆ, ಆಗಸ್ಟ್ 26 ರಂದು ತೆರೆಕಂಡ ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಆರಂಭಿಕ ದಿನಗಳ ನಂತರ ತೀವ್ರವಾಗಿ ಕುಸಿಯಿತು. ದೇಶೀಯ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿಗಳ ಗಡಿಯನ್ನು ದಾಟಲು ಸಿನಿಮಾ ಹರಸಾಹಸಪಡುತ್ತಿರುವ ಹಿನ್ನೆಲೆಯಲ್ಲಿ, ಒಟಿಟಿ ಸಂಸ್ಥೆಗಳು ತಮ್ಮ ಹಳೆಯ ಆಫರ್ಗಳನ್ನು ವಾಪಸ್ ಪಡೆದುಕೊಂಡು ಸಂಪೂರ್ಣವಾಗಿ ಹೊಸ ಹಾಗೂ ಕಡಿಮೆ ಮೊತ್ತದ ಪ್ರಸ್ತಾಪಗಳನ್ನು ಮುಂದಿಟ್ಟಿವೆ. ಸದ್ಯ ಎಲ್ಲಾ ಭಾಷೆಗಳ ಡಿಜಿಟಲ್ ಹಕ್ಕುಗಳಿಗೆ ಒಟಿಟಿ ಸಂಸ್ಥೆಗಳು ಕೇವಲ 30 ಕೋಟಿ ರೂಪಾಯಿ ಆಸುಪಾಸಿನ ಮೊತ್ತ ನೀಡಲು ಸಿದ್ಧವಿದ್ದು, ಪ್ರಸ್ತುತ ಜೀ5 (Zee 5) ಸಂಸ್ಥೆಯಿಂದಷ್ಟೇ ಅತಿ ದೊಡ್ಡ ಆಫರ್ ಬಂದಿದೆ ಎನ್ನಲಾಗಿದೆ.
ಥಿಯೇಟರ್ ಹಾಗೂ ಡಿಜಿಟಲ್ ಎರಡರಲ್ಲೂ ಆದ ಹಿನ್ನಡೆಯಿಂದಾಗಿ ನಿರ್ಮಾಪಕರು ಸುಮಾರು 300 ಕೋಟಿ ರೂಪಾಯಿಗಳವರೆಗೂ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. ಚಿತ್ರದಲ್ಲಿ ಅತಿಯಾದ ಅಡಲ್ಟ್ ಕಂಟೆಂಟ್ ಇರುವ ಕಾರಣ ಸ್ಯಾಟಲೈಟ್ ಚಾನೆಲ್ಗಳ ಮೂಲಕ ಹಣ ಗಳಿಸುವುದಕ್ಕೂ ಮಿತಿ ಎದುರಾಗಿದೆ. ಈ ನಷ್ಟದ ಪ್ರಮಾಣವನ್ನು ತಗ್ಗಿಸಲು ನಿರ್ಮಾಪಕರು ಒಟಿಟಿ ಪ್ರಸಾರಕ್ಕಾಗಿಯೇ ‘ವಿಶೇಷ ತಿದ್ದುಪಡಿ ಮಾಡಿದ’ (New Edit) ಆವೃತ್ತಿಯನ್ನು ಸಿದ್ಧಪಡಿಸಲು ಯೋಜಿಸುತ್ತಿದ್ದಾರೆ. ಪ್ರಸ್ತುತ ಬಂದಿರುವ ಆಫರ್ಗಳನ್ನು ಒಪ್ಪಿಕೊಳ್ಳಬೇಕೇ ಅಥವಾ ಹೊಸ ರೀತಿಯ ಎಡಿಟ್ ಮಾಡಿ ಹೆಚ್ಚಿನ ಮೊತ್ತ ಪಡೆಯಲು ಯತ್ನಿಸಬೇಕೇ ಎಂಬ ಕುರಿತು ಚರ್ಚೆಗಳು ನಡೆಯುತ್ತಿದ್ದು, ಯಾವುದೇ ಅಧಿಕೃತ ಒಪ್ಪಂದ ಇನ್ನೂ ಆಗಿಲ್ಲ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡಗೆ ಕೊಂಚ ನಿರಾಳತೆ: ಬ್ಯಾರಕ್ ಬದಲಾವಣೆಗೆ ಹಸಿರು ನಿಶಾನೆ ತೋರಿದ ಕೋರ್ಟ್!
