TOP NEWS

Congress: ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ಭಾರಿ ಹೈಡ್ರಾಮಾ: ವೀಕ್ಷಕರ ಎದುರಲ್ಲೇ ಕಾರ್ಯಕರ್ತರ ಜಗಳ

Mandya Congress rift wide open Ruckus erupts over district chief alleged pact with JDS

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ (Congress) ಪಕ್ಷದ ‘ಸಂಘಟನಾ ಸೃಜನ ಅಭಿಯಾನ’ದ ವೇದಿಕೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಸಭೆಯುದ್ದಕ್ಕೂ ತೀವ್ರ ಗದ್ದಲ, ವಾಗ್ವಾದಗಳು ಏರ್ಪಟ್ಟಿದ್ದು, ಕೈ ನಾಯಕರ ವಿರುದ್ಧವೇ ಕಾರ್ಯಕರ್ತರು ಭಾರಿ ಆಕ್ರೋಶ ಹೊರಹಾಕಿದ ಘಟನೆ ಜುಲೈ 28 ರಂದು ನಡೆದಿದೆ. ತಾಲೂಕಿನಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಸರಿಯಾದ ನಾಯಕರೇ ಇಲ್ಲ ಎಂದು ಕಿಡಿಕಾರಿದ ಸ್ಥಳೀಯ ಕಾರ್ಯಕರ್ತರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಜೆಡಿಎಸ್ ನಾಯಕರೊಂದಿಗೆ ‘ಒಳ ಒಪ್ಪಂದ’ ಹಾಗೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೆಪಿಸಿಸಿ ವಕ್ತಾರರ ಎದುರೇ ಹೈಡ್ರಾಮ

ವಿಶೇಷವೆಂದರೆ, ಎಐಸಿಸಿ ವೀಕ್ಷಕರಾದ ಸೈಮನ್ ಅಲೆಕ್ಸ್ ಹಾಗೂ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರ ಸಮ್ಮುಖದಲ್ಲೇ ಈ ಹೈಡ್ರಾಮಾ ನಡೆದಿದೆ. ಜಿಲ್ಲಾ ನಾಯಕರ ವಿರುದ್ಧ ಆಕ್ರೋಶದ ಕಟ್ಟೆ ಒಡೆದ ಕಾರ್ಯಕರ್ತರು, ಹಿರಿಯ ಮುಖಂಡರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಹಾಲಿ ಜಿಲ್ಲಾಧ್ಯಕ್ಷರನ್ನು ತಕ್ಷಣವೇ ಹುದ್ದೆಯಿಂದ ಕೆಳಗಿಳಿಸಿ, ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು.

ವೇದಿಕೆಯಲ್ಲಿದ್ದ ನಾಯಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿ, “ನಾವು ಇಲ್ಲಿಗೆ ಬಂದಿರುವುದೇ ಹೊಸ ಅಧ್ಯಕ್ಷರ ಆಯ್ಕೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಲು” ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ ಕಾರ್ಯಕರ್ತರ ಕೋಪ ತಣ್ಣಗಾಗಲಿಲ್ಲ. ನಾಯಕರ ಸಮಾಧಾನದ ಮಾತುಗಳಿಗೆ ಕಿವಿಗೊಡದ ಕಾರ್ಯಕರ್ತರ ಗದ್ದಲದಿಂದಾಗಿ, ಪಕ್ಷದ ಸಂಘಟನಾ ಸಭೆಯು ಯಾವುದೇ ನಿರ್ಧಾರಕ್ಕೆ ಬಾರದೆ ಕೇವಲ ತೀವ್ರ ವಾಗ್ವಾದ ಮತ್ತು ಗಲಾಟೆಯಲ್ಲೇ ಮುಕ್ತಾಯಗೊಂಡಿತು. ಇದು ಮಂಡ್ಯ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಬೆಳಗಾವಿ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ: ಅಧ್ಯಕ್ಷರ ಆಯ್ಕೆ ಸಭೆಯಲ್ಲೇ ಹೊಡೆದಾಟ, ಹೈಕಮಾಂಡ್ ವೀಕ್ಷಕರೆದುರೇ ರಂಪಾಟ!

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ನಗರ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ತೀವ್ರ ವಾಗ್ವಾದ ಹಾಗೂ ನಾಯಕರ ಬೆಂಬಲಿಗರ ನಡುವಿನ ಹೊಡೆದಾಟಕ್ಕೆ ಸಾಕ್ಷಿಯಾಗಿದೆ. ಎಐಸಿಸಿ ವೀಕ್ಷಕರಾದ ಮನೋಜ್ ಚವ್ಹಾಣ್ ಸಮ್ಮುಖದಲ್ಲೇ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದು, ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.

ನಗರ ಅಧ್ಯಕ್ಷ ಗದ್ದುಗೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾರ್ಯಕರ್ತರ ಅಭಿಪ್ರಾಯ ಆಲಿಸುವ ಸಂದರ್ಭದಲ್ಲಿ ಈ ಗಲಾಟೆ ಸಂಭವಿಸಿದೆ. ಮಾಜಿ ಶಾಸಕ ರಮೇಶ್ ಕುಡಚಿ ಅವರ ತೀರಾ ಆಪ್ತರಾದ ಹೇಮಂತ್ ಲಿಂಗಾಡೆ ಎಂಬ ಮುಖಂಡನ ಮೇಲೆ ಸಭೆಯಲ್ಲೇ ಭೀಕರ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ದೂರು ಕೇಳಿಬಂದಿದೆ. ಘಟನೆಯಿಂದಾಗಿ ಪಕ್ಷದ ಕಚೇರಿ ಆವರಣದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ, ತಕ್ಷಣವೇ ಎಚ್ಚೆತ್ತ ಮಾರ್ಕೆಟ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮಂತ್ರಿಗಿರಿಗಾಗಿ ಶಾಸಕರ ಭಾರಿ ಕಸರತ್ತು: 20 ಸ್ಥಾನಕ್ಕೆ 60 ಆಕಾಂಕ್ಷಿಗಳ ಫೈಟ್, ದೆಹಲಿಯಲ್ಲಿ ಇಂದು ಹೈವೋಲ್ಟೇಜ್ ಮೀಟಿಂಗ್!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆಯ ಲಾಬಿ ತುತ್ತತುದಿ ತಲುಪಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸದ್ಯ ಖಾಲಿ ಬಿದ್ದಿರುವ 20 ಸಚಿವ ಸ್ಥಾನಗಳನ್ನು ಪಡೆದುಕೊಳ್ಳಲು ಬರೋಬ್ಬರಿ 60ಕ್ಕೂ ಹೆಚ್ಚು ಶಾಸಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಈ ‘ಮಂತ್ರಿಗಿರಿ ಸರ್ಕಸ್’ ಸುಖಾಂತ್ಯಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಸಂಜೆ 6 ಗಂಟೆಗೆ ದೆಹಲಿಯಲ್ಲಿ ತುರ್ತು ಹಾಗೂ ಹೈವೋಲ್ಟೇಜ್ ಸಭೆಯೊಂದನ್ನು ಆಯೋಜಿಸಿದೆ.

ನೀಟ್ ಪರೀಕ್ಷಾ ಅಕ್ರಮದ ವಿವಾದದ ಕಾವು ತಣ್ಣಗಾಗುತ್ತಿದ್ದಂತೆ ದೆಹಲಿ ವರಿಷ್ಠರು ಕರ್ನಾಟಕದ ಸಂಪುಟ ವಿಸ್ತರಣೆಯತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಇಂದಿನ ಸಭೆಯಲ್ಲೇ ಹೊಸ ಸಚಿವರ ಪಟ್ಟಿ ಬಹುತೇಕ ಅಂತಿಮಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದ ಆಪ್ತ ಶಾಸಕರ ಪ್ರತ್ಯೇಕ ಪಟ್ಟಿಗಳೊಂದಿಗೆ ಹೈಕಮಾಂಡ್ ಅಂಗಳ ತಲುಪಿದ್ದಾರೆ. ಬುಧವಾರ ಅಥವಾ ಗುರುವಾರವೇ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ದಟ್ಟವಾಗಿದ್ದು, ಇಂದಿನ ದೆಹಲಿ ಸಭೆಯು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕಾವೇರಿ ಸಂಕಷ್ಟ: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

Leave a Reply

Your email address will not be published. Required fields are marked *