ಬಿಹಾರ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವರಿಷ್ಠ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಕಾನೂನು ಹಿನ್ನಡೆ ಎದುರಾಗಿದೆ. ಬಹುಚರ್ಚಿತ ಐಆರ್‌ಸಿಟಿಸಿ (IRCTC) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯವು ಲಾಲೂ ಪ್ರಸಾದ್ ಯಾದವ್ ಅವರ ಮೇಲೆ ಅಧಿಕೃತವಾಗಿ ಆರೋಪಗಳನ್ನು ನಿಗದಿಪಡಿಸುವಂತೆ (Framing of charges) ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಲಾಲೂ ಪ್ರಸಾದ್ (Bihar) ಯಾದವ್ ಅವರೊಂದಿಗೆ ಅವರ ಧರ್ಮಪತ್ನಿ ಹಾಗೂ ಬಿಹಾರದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಹಾಗೂ ಹಿರಿಯ ಪುತ್ರ ತೇಜಸ್ವಿ ಯಾದವ್ ಅವರ ಮೇಲೂ ಸಹ ಗಂಭೀರ ಆರೋಪಗಳನ್ನು ನಿಗದಿಪಡಿಸಲು ನ್ಯಾಯಾಲಯ ಆದೇಶ ನೀಡಿದೆ.
ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ
ಪ್ರುಸಿವೆನ್ಶನ್ ಆಫ್ ಕರಪ್ಷನ್ (PC) ಕಾಯ್ದೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ. ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ, ಮಾಜಿ ರೈಲ್ವೆ ಸಚಿವರಾದ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಪ್ರಬಲವಾದ ಅನುಮಾನಾಸ್ಪದ ಸಾಕ್ಷ್ಯಾಧಾರಗಳಿವೆ ಎಂದು ಸ್ಪಷ್ಟಪಡಿಸಿದೆ. ಲಾಲೂ ಕುಟುಂಬದವರಲ್ಲದೆ, ಲಾರಾ ಪ್ರಜೆಕ್ಟ್ಸ್, ಸರಳಾ ಗುಪ್ತಾ, ಪ್ರೇಮ್ ಚಂದ್ ಗುಪ್ತಾ, ಸುಜಾತಾ ಹೋಟೆಲ್ಸ್, ವಿನಯ್ ಕೊಚ್ಚರ್ ಹಾಗೂ ವಿಜಯ್ ಕೊಚ್ಚರ್ ಅವರ ಮೇಲೂ ಸಹ ನ್ಯಾಯಾಲಯವು ಆರೋಪಗಳನ್ನು ನಿಗದಿಪಡಿಸಿದೆ. ಆದರೆ, ಇದೇ ಪ್ರಕರಣದಲ್ಲಿ ಹೆಸರಿಸಲಾಗಿದ್ದ ರಾಹುಲ್ ಯಾದವ್, ಗೌರವ್ ಗುಪ್ತಾ, ನಾಥ್ ಮಾಲ್ ಕಂಕರ್ನಿಯಾ, ವಿಜಯ್ ತ್ರಿಪಾಠಿ ಡಿ.ಎನ್. ತುಳಶ್ಯನ್, ರಾಘವ್ ರೇಲಾನ್ ಹಾಗೂ ಅಭಿಷೇಕ್ ಫೈನಾನ್ಸ್ ಸೇರಿದಂತೆ ಇತರೆ ಕೆಲವು ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿ (Discharge) ಬಿಡುಗಡೆ ಮಾಡಿದೆ.
ಈ ಹಿಂದೆ ಇದೇ ವರ್ಷದ ಆಗಸ್ಟ್ 29ರಂದು ಲಾಲೂ ಕುಟುಂಬದವರ ಮೇಲೆ ಆರೋಪ ನಿಗದಿಪಡಿಸುವ ಕುರಿತು ಆದೇಶ ಪ್ರಕಟಿಸಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ವಿಚಾರಣೆಯು ಮೊದಲು ಸೆಪ್ಟೆಂಬರ್ 7ಕ್ಕೆ ಹಾಗೂ ನಂತರ ಇಂದಿನ ದಿನಕ್ಕೆ ಮುಂದೂಡಲ್ಪಟ್ಟಿತ್ತು. ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಇಲಾಖೆಯನ್ನು ತಮ್ಮ ಸ್ವಂತ ಆಸ್ತಿಯಂತೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಗಳು ಹಾಗೂ ತಮ್ಮ ಆಪ್ತರ ಜೊತೆ ಶಾಮೀಲಾಗಿ, ನಿಯಮಗಳನ್ನು ಉಲ್ಲಂಘಿಸಿ ದಲ್ಲಾಳಿಗಳ ಮೂಲಕ ಪಾಟ್ನಾದಲ್ಲಿ ಬೆಲೆಬಾಳುವ ಭೂಮಿಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಇಡೀ ವ್ಯವಹಾರವು ಅತ್ಯಂತ ಅನುಮಾನಾಸ್ಪದವಾಗಿದೆ
ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿರುವ ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಲಾಲೂ ಹಾಗೂ ಅವರ ಕುಟುಂಬದವರು ಈ ವರ್ಷದ ಆರಂಭದಲ್ಲಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಡಿ.ಪಿ. ಸಿಂಗ್ ಅವರು ಆರೋಪಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಸುಜಾತಾ ಹೋಟೆಲ್ಸ್ ಮಾಲೀಕರಾದ ಸರಳಾ ಗುಪ್ತಾ ಹಾಗೂ ಐಆರ್‌ಸಿಟಿಸಿ ಅಧಿಕಾರಿಗಳ ಜೊತೆಗೂಡಿ ಲಾಲೂ ಪ್ರಸಾದ್ ಯಾದವ್ ಅವರು ಅಪರಾಧಿಕ ಒಡಂಬಡಿಕೆಗೆ (Criminal conspiracy) ಬಂದಿದ್ದರು ಎಂದು ಸಿಬಿಐ ಆರೋಪಿಸಿದೆ. ಇದರ ಭಾಗವಾಗಿ ಬಿಎನ್‌ಆರ್ (BNR) ಹೋಟೆಲ್ಸ್ ಹರಾಜು ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ತಿರುಚಿ ಸುಜಾತಾ ಹೋಟೆಲ್ಸ್‌ಗೆ ಒಪ್ಪಿಸಲಾಗಿತ್ತು. ಪ್ರತಿಯಾಗಿ ಐಆರ್‌ಸಿಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಿ.ಕೆ. ಗೋಯಲ್ ಅವರ ನೆರವಿನಿಂದ ಲಾಲೂ ಕುಟುಂಬಕ್ಕೆ ಪಾಟ್ನಾದಲ್ಲಿ ದುಬಾರಿ ಭೂಮಿಗಳು ಲಭ್ಯವಾಗುವಂತೆ ಅನುಕೂಲ ಮಾಡಿಕೊಡಲಾಗಿತ್ತು. ಈ ಅಕ್ರಮ ಒಪ್ಪಂದವು 2004 ರಿಂದ 2014ರ ಅವಧಿಯಲ್ಲಿ ನಡೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಸಿಬಿಐ ತನಿಖೆಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಕೂಡ ಪ್ರತ್ಯೇಕವಾಗಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವುದು ಲಾಲೂ ಕುಟುಂಬದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಭೂಮಿ ಖರೀದಿಸಿದ ಆ ಅಧಿಸೂಚಿತ ಕಾಲಘಟ್ಟದಲ್ಲಿ ರಾಬ್ರಿ ದೇವಿ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದರು ಎಂಬ ಅಂಶವನ್ನು ಸಿಬಿಐ ನ್ಯಾಯಾಲಯದ ಗಮನಕ್ಕೆ ತಂದಿದ್ದು, ಇಡೀ ವ್ಯವಹಾರವು ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ವಾದ ಮಂಡಿಸಿದೆ.
ಇದನ್ನೂ ಓದಿ: ಗ್ರಾಮೀಣ ಎಲ್‌ಪಿಜಿ ಬಳಕೆದಾರರಿಗೆ ಭಾರಿ ರಿಲೀಫ್: ಸಿಲಿಂಡರ್ ಮರುಬುಕಿಂಗ್ ಅವಧಿ 25 ದಿನಕ್ಕೆ ಕಡಿತಗೊಳಿಸಿದ ಕೇಂದ್ರ
