ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಸಂಕಷ್ಟ ಎದುರಾಗಿದೆ. ಜೈಲಿನ ಬ್ಯಾರಕ್ ಒಳಗೆ ಅನಧಿಕೃತವಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಗಂಭೀರ ಆರೋಪದ ಮೇಲೆ ಅವರ ವಿರುದ್ಧ ಹೊಸದಾಗಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಇವರನ್ನು ಎರಡು ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಮಹತ್ವದ ವಿಚಾರಗಳನ್ನ ಬಹಿರಂಗಪಡಿಸಿದ ಪ್ರಜ್ವಲ್ ರೇವಣ್ಣ
ಜೈಲಿನೊಳಗೆ ಮೊಬೈಲ್ ಫೋನ್ ಅನ್ನು ಯಾರು ತಲುಪಿಸಿದರು, ಅದು ಬ್ಯಾರಕ್ ಒಳಗೆ ಬಂದದ್ದು ಹೇಗೆ ಮತ್ತು ಯಾವಾಗ ಎಂಬ ಪ್ರಮುಖ ಮಾಹಿತಿಯನ್ನು ಕಲೆಹಾಕಲು ಪೊಲೀಸರು ಮುಂದಾಗಿದ್ದರು. ಈ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಕೆಲವು ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜೈಲಿನ ಬ್ಯಾರಕ್ನಲ್ಲಿದ್ದ ಮೊಬೈಲ್ ಬಳಸಿ ತಮ್ಮ ತಂದೆ ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರಿಗೆ ತಾವೇ ಸ್ವತಃ ಫೋನ್ ಮಾಡಿ ಮಾತನಾಡಿದ್ದಾಗಿ ಅವರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ, ಜೈಲಿನ ಸುರಕ್ಷತೆಯನ್ನು ಮೀರಿ ಆ ಮೊಬೈಲ್ ಬ್ಯಾರಕ್ ಒಳಗೆ ಹೇಗೆ ತಲುಪಿತು ಎಂಬ ಮೂಲ ರಹಸ್ಯದ ಬಗ್ಗೆ ಮಾತ್ರ ಅವರು ಮೌನ ಮುರಿದಿಲ್ಲ ಮತ್ತು ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಪ್ರತಾಪ್ ಎಂಬಾತನ ವಿಚಾರಣೆಯೂ ನಡೆದಿದ್ದು, ತಾನು ಯಾವುದೇ ಮೊಬೈಲ್ ತರಿಸಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಾಪ್ ಕೂಡ ತಮಗೂ ಆ ಮೊಬೈಲ್ಸ್ಗೂ ಯಾವುದೇ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುವ ಮೂಲಕ ಆರೋಪವನ್ನು ತಳ್ಳಿಹಾಕಿದ್ದಾನೆ. ಹೀಗಾಗಿ ಇಬ್ಬರೂ ಆರೋಪಿಗಳು ನೀಡಿರುವ ಭಿನ್ನ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಮತ್ತಷ್ಟು ಹೆಚ್ಚಾದ ಕಾನೂನು ತೊಡಕು
ಎರಡು ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಇಬ್ಬರನ್ನೂ 42ನೇ ಎಸಿಜೆಎಂ (ACJM) ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಇಬ್ಬರೂ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ನೀಡಿರುವ ಆದೇಶದ ಬಳಿಕ ಮಾತನಾಡಿದ ತನಿಖಾಧಿಕಾರಿಗಳು, ಎಫ್ಎಸ್ಎಲ್ (FSL) ವರದಿ ಕೈ ಸೇರಿದ ನಂತರ ತನಿಖೆಗೆ ಪೂರಕವಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ. ಒಂದು ವೇಳೆ ವರದಿಯ ಆಧಾರದ ಮೇಲೆ ಮುಂದಿನ ತನಿಖೆಗೆ ಅವಶ್ಯಕತೆ ಕಂಡುಬಂದಲ್ಲಿ, ಮತ್ತೊಮ್ಮೆ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಜೈಲು ವಾಸದಲ್ಲೂ ಮೊಬೈಲ್ ಬಳಕೆ ಮಾಡಿರುವ ಈ ಪ್ರಕರಣ ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನು ತೊಡಕುಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಡಿಕೆ ಸರ್ಕಾರಕ್ಕೆ ನೂರರ ಸಂಭ್ರಮ: ಇಲ್ಲಿದೆ ವಿಶೇಷ ಕಾರ್ಯಕ್ರಮದ ಹೈಲೈಟ್ಸ್
