ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರಮುಖ ರಾಜಕೀಯ ನಾಯಕರು ಹಾಗೂ ಉದ್ಯಮಿಗಳ ಕುಟುಂಬಸ್ಥರ ಹೆಸರುಗಳು ಲೋಪದೋಷಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಸೇರಿದಂತೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಕುಟುಂಬ ಮತ್ತು ಜೆರೋಧಾ ಸಂಸ್ಥಾಪಕರಾದ ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಕುಟುಂಬದವರ ಹೆಸರುಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಡಿಕೆಶಿ ತಾಯಿ ಹೆಸರಲ್ಲಿ ವ್ಯತ್ಯಾಸ
ಕನಕಪುರ ವಿಧಾನಸಭಾ ಕ್ಷೇತ್ರದಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ಹೆಸರಿನಲ್ಲಿ ವ್ಯತ್ಯಾಸವಿರುವ ಕಾರಣದಿಂದ ‘ಸ್ವಯಂ-ಹೆಸರು ವ್ಯತ್ಯಾಸ’ (ಸೆಲ್ಫ್-ನೇಮ್ ಮಿಸ್ಮ್ಯಾಚ್) ದೋಷದಡಿ ಅವರನ್ನು ಗುರುತಿಸಲಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆರೋಧಾ ಸಹ-ಸಂಸ್ಥಾಪಕರಾದ ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಅವರೊಂದಿಗೆ ಅವರ ತಾಯಿ ರೇವತಿ ಕಾಮತ್ ಅವರ ಹೆಸರುಗಳು ಸಹ ‘ಪೋಷಕರ ಹೆಸರು ವ್ಯತ್ಯಾಸ’ (ಪೇರೆಂಟ್ಸ್ ನೇಮ್ ಮಿಸ್ಮ್ಯಾಚ್) ದೋಷದ ಅಡಿಯಲ್ಲಿ ಪಟ್ಟಿಯಲ್ಲಿ ಸೇರಿವೆ. ಇನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ, ಪುತ್ರಿ ಜಾನ್ವಿ ನಂದನ್ ನಿಲೇಕಣಿ ಹಾಗೂ ಪುತ್ರ ನಿಹಾರ್ ನಿಲೇಕಣಿ ಅವರ ಹೆಸರುಗಳು 2002ರ ಹಿಂದಿನ ಎಸ್ಐಆರ್ ಪಟ್ಟಿಯೊಂದಿಗೆ ಮ್ಯಾಪ್ ಆಗಿಲ್ಲ ಎಂಬ ಕಾರಣಕ್ಕೆ ‘ಅನ್ಮ್ಯಾಪ್ಡ್’ ಎಂದು ಗುರುತಿಸಲಾಗಿದೆ.
ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ
ಈ ಬೆಳವಣಿಗೆಯ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯು, ಗಣ್ಯರು ಮತ್ತು ವಿಐಪಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಅಧಿಕಾರಿಗಳೇ ಸ್ವತಃ ಅವರ ಮನೆಗಳಿಗೆ ಭೇಟಿ ನೀಡಿ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದಾರೆ. ವೃದ್ಧ ಮತದಾರರು ಹಾಗೂ ವಿಚಾರಣಾ ಕೇಂದ್ರಗಳಿಗೆ ತೆರಳಲು ಅಸಾಧ್ಯವಿರುವ ವಿಕಲಚೇತನರಿಗೂ ಕೂಡ ಇದೇ ರೀತಿಯ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಚಾರಣಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ಸಂಪೂರ್ಣ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಾಗೂ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 19 ಮತ್ತು 20 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಾರ್ವಜನಿಕರು ಹೊಸ ಸೇರ್ಪಡೆಗಾಗಿ ನಮೂನೆ 6, ವಿವರಗಳ ಬದಲಾವಣೆಗಾಗಿ ನಮೂನೆ 8, ಸಾಗರೋತ್ತರ ಮತದಾರರಿಗಾಗಿ ನಮೂನೆ 6ಎ ಹಾಗೂ ಹೆಸರನ್ನು ಕೈಬಿಡುವುದಕ್ಕಾಗಿ ನಮೂನೆ 7 ಅನ್ನು ಬಳಸಿ ತಮ್ಮ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದು, ಈ ನಿಟ್ಟಿನಲ್ಲಿ ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿದ್ದು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರಕ್ಕೆ ಚಿಂತನೆ: ರೈಲ್ವೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ!
