ಬೆಂಗಳೂರು: ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಹೋಗಿದ್ದ ಬಿಬಿಎಂಪಿ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ್ದ ಪ್ರಕರಣದ ಕಿಂಗ್‌ಪಿನ್ ಬಸವರಾಜ್ ಪಡುಕೋಟೆಗೆ (Basavaraj Padukote) ಕಾನೂನು ಸಂಕಷ್ಟಗಳು ಮುಂದುವರಿದಿವೆ. ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ಅವರು ನಿಯಮಬಾಹಿರವಾಗಿ ಕೈಗೆತ್ತಿಕೊಂಡಿದ್ದ ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗ ಹೊಸಕೋಟೆ ನಗರ ಪಂಚಾಯಿತಿ ಅಧಿಕಾರಿಗಳು ಬಿಗಿ ತಡೆ ಒಡ್ಡಿದ್ದಾರೆ.
ಪರವಾನಗಿ ಇಲ್ಲದೇ ಕಟ್ಟಡ ನಿರ್ಮಾಣ
ಯಾವುದೇ ರೀತಿಯ ಅಧಿಕೃತ ಪರವಾನಗಿ ಪಡೆಯದೆ ಹಾಗೂ ಸರ್ಕಾರದ ನಕ್ಷೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಸವರಾಜ್ ಅವರು ಜಿ+5 (ಐದು ಅಂತಸ್ತು) ಕಟ್ಟಡವನ್ನು ನಿರ್ಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಗಂಭೀರ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಿರುವ ಹೊಸಕೋಟೆ ನಗರ ಪಂಚಾಯಿತಿ ಮುಖ್ಯಾಧಿಕಾರಿಗಳು, ಆರೋಪಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ನೀಡಿರುವ ಈ ಕಟ್ಟುನಿಟ್ಟಿನ ನೋಟಿಸ್‌ನಲ್ಲಿ, ಜುಲೈ 24ರ ಒಳಗಾಗಿ ಚಾಲ್ತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನುಬದ್ಧ ದಾಖಲೆಗಳನ್ನು ಕಚೇರಿಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ. ಒಂದು ವೇಳೆ ಈ ಸೂಚನೆಯನ್ನು ನಿರ್ಲಕ್ಷಿಸಿ ನಿಯಮ ಉಲ್ಲಂಘನೆ ಮುಂದುವರಿಸಿದರೆ, ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅನಧಿಕೃತವಾಗಿ ತಲೆ ಎತ್ತಿರುವ ಇಡೀ ಕಟ್ಟಡವನ್ನು ನೆಲಸಮ ಮಾಡಲಾಗುವುದು ಎಂದು ನಗರ ಪಂಚಾಯಿತಿ ಖಡಕ್ ಎಚ್ಚರಿಕೆ ನೀಡಿದೆ.
ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ದಾಳಿ, ರೌಡಿಗಳಂತೆ ದೊಣ್ಣೆ ಬೀಸಿದ ಪುಂಡರು: 10 ಮಂದಿ ಅರೆಸ್ಟ್, ಕಿಂಗ್‌ಪಿನ್ ಬಸವರಾಜ್‌ಗಾಗಿ ತಲಾಶ್!
ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗವಾದ ಶಿವಾಜಿನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ, ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಸಿಬ್ಬಂದಿಯ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ದಾಳಿ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಈಗಾಗಲೇ 10 ಜನರನ್ನು ಹೆಡೆಮುರಿ ಕಟ್ಟಿದ್ದಾರೆ.
ಪೆಪ್ಪರ್ ಸ್ಪ್ರೇ ಸಿಂಪಡಿಸಿ, ದೊಣ್ಣೆಗಳಿಂದ ಅಟ್ಟಾಡಿಸಿ ಹೊಡೆದ ಹಲ್ಲೆಕೋರರು!
ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಜಿಬಿಎ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಶಿವಾಜಿನಗರದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ರಸ್ತೆಯ ಫುಟ್‌ಪಾತ್ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸುವಾಗ ಸ್ಥಳೀಯ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದಿದ್ದಾರೆ. ಈ ಗದ್ದಲದ ಬೆನ್ನಲ್ಲೇ, ಸ್ಥಳಕ್ಕೆ ಇನೋವಾ ಕಾರಿನಲ್ಲಿ ಎಂಟ್ರಿ ಕೊಟ್ಟ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಜಿಬಿಎ ಅಧಿಕಾರಿಗಳ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ.
ಅಧಿಕಾರಿಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ದಾರಿ ಕಾಣದಂತೆ ಮಾಡಿದ ಪುಂಡರು, ಬಳಿಕ ಕುರ್ಚಿ, ಹೆಲ್ಮೆಟ್ ಹಾಗೂ ದೊಣ್ಣೆಗಳಿಂದ ಮನಬಂದಂತೆ ಜಾರಿಕೊಂಡಿದ್ದಾರೆ. ದಾಳಿಯ ತೀವ್ರತೆಗೆ ಬೆದರಿದ ಜೆಸಿಬಿ ಆಪರೇಟರ್ ಹಾಗೂ ಕೆಲವು ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಓಡಿ ಹೋಗಿದ್ದಾರೆ.
ಹತ್ತು ಮಂದಿ ಜೈಲು ಪಾಲು, ಸಂಘಟನೆ ಅಧ್ಯಕ್ಷ ಬಸವರಾಜ್ ನಾಪತ್ತೆ!
ಅಧಿಕಾರಿಗಳ ಮೇಲೆ ವ್ಯವಸ್ಥಿತವಾಗಿ ಗ್ಯಾಂಗ್ ಕಟ್ಟಿಕೊಂಡು ದಾಳಿ ಮಾಡಿದ ಆರೋಪದ ಮೇಲೆ ಮುಜಾಹಿದ್ ಅಹ್ಮದ್, ರಂಜಿತ್, ಕೊಟ್ರೇಶ್, ರಘು, ಪ್ರತಭನ್, ಬಸವರಾಜ್, ರಂಗಸ್ವಾಮಿ, ಪರಶುರಾಮ್, ಭರತ್ ಹಾಗೂ ಕಿರಣ್ ಎಂಬ 10 ಜನರನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಆದರೆ, ಘಟನೆಯ ಮುಖ್ಯ ಸೂತ್ರಧಾರ, ಸಂಘಟನೆಯ ಅಧ್ಯಕ್ಷ ಬಸವರಾಜು ಪಡುಕೋಟೆ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.
ಕೊಲೆ ಯತ್ನ (ಸೆಕ್ಷನ್ 307) ಕೇಸ್ ದಾಖಲು: ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್
ಈ ಗೂಂಡಾಗಿರಿ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವ ಕೃಷ್ಣ ಬೈರೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸರ್ಕಾರಿ ಅಧಿಕಾರಿಗಳ ಮೇಲೆ ದರ್ಪ ತೋರಿದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಈಗಾಗಲೇ 10 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತಲೆಮರೆಸಿಕೊಂಡಿರುವ ಬಸವರಾಜ್ ಪಡುಕೋಟೆಯನ್ನು ಶೀಘ್ರದಲ್ಲೇ ಅರೆಸ್ಟ್ ಮಾಡಲಾಗುವುದು. ದಾಳಿಕೋರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣವಾದ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಮುಲಾಜಿಲ್ಲದೆ ಮೊಕದ್ದಮೆ ಹೂಡಲಾಗುವುದು,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ಭಾರಿ ಹೈಡ್ರಾಮಾ: ವೀಕ್ಷಕರ ಎದುರಲ್ಲೇ ಕಾರ್ಯಕರ್ತರ ಜಗಳ
