ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದೇರ್‌ಬಲ್ ಜಿಲ್ಲೆಯ ಕಾಂಗನ್ ಪ್ರದೇಶದಲ್ಲಿ ಮಂಗಳವಾರ ತೀವ್ರ ರಸ್ತೆ (Road Mishap) ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆಯಿಂದ ಹಿಂತಿರುಗುತ್ತಿದ್ದ ಕನಿಷ್ಠ 39 ಯಾತ್ರಿಕರು ಗಾಯಗೊಂಡಿದ್ದಾರೆ. ರಸ್ತೆಯ ಮಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅತಿವೇಗದ ಬಸ್ಸು, ರಸ್ತೆಯಿಂದ ಪಕ್ಕಕ್ಕೆ ಜಾರಿ ಹರಿಗಾನ್ವಾನ್ ಪ್ರದೇಶದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದೆಯಾದರೂ, ಬಸ್ಸು ಪಕ್ಕದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಉರುಳಿ ಬೀಳುವುದನ್ನು ಈ ಮನೆ ತಡೆದಿದೆ. ಅಪಘಾತದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
39 ಯಾತ್ರಿಕರಿಗೆ ಅಪಘಾತದಲ್ಲಿ ಗಾಯ
ಅಮರನಾಥದ ಪವಿತ್ರ ಹಿಮಲಿಂಗ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ 39 ಯಾತ್ರಿಕರಿಗೆ ಅಪಘಾತದಲ್ಲಿ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳು ಜಮ್ಮು ಮತ್ತು ಕಾಶ್ಮೀರದ ಎಸ್‌ಕೆಐಎಂಎಸ್ (SKIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಗಂದೇರ್‌ಬಲ್ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಸಂತ್ರಸ್ತರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಉಪರಾಜ್ಯಪಾಲರು, ಗಾಯಗೊಂಡ ಯಾತ್ರಿಕರಿಗೆ ಉತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯವಿರುವ ಎಲ್ಲಾ ನೆರವು ತಕ್ಷಣವೇ ತಲುಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜತೆಗೆ ಗಾಯಗೊಂಡಿರುವ ಅಮರನಾಥ ಭಕ್ತರು ಶೀಘ್ರವೇ ಗುಣಮುಖರಾಗಲಿ ಎಂದು ಭಗವಾನ್ ಶಿವನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧದ ಶಂಕೆ: ಪತ್ನಿಯನ್ನು ನೇಣಿಗೆ ತಳ್ಳಿ, ಆಕೆಯ ಪೋಷಕರಿಗೆ ವೀಡಿಯೊ ಕಾಲ್ ಮಾಡಿ ಕೊಲೆ ತೋರಿಸಿದ ಪಾಪಿ ಗಂಡ!
