ಬೆಂಗಳೂರು: ನೈಸ್ (NICE) ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ಸಚಿವ ಹೆಚ್.ಸಿ. ಬಾಲಕೃಷ್ಣ (HC Balakrishna) ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಹಳೆಯ ವಿಷಯಗಳಾಗಿದ್ದು, ಚುನಾವಣಾ ಅಫಿಡವಿಟ್‌ನಲ್ಲೇ ಪ್ರತಿಯೊಂದು ಮಾಹಿತಿಯನ್ನು ಸಾರ್ವಜನಿಕವಾಗಿ ಘೋಷಿಸಲಾಗಿದೆ ಎಂದು ತಿರುಗೇಟು ನೀಡಿರುವ ಸಚಿವರು, ಎಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸಿಂಗ್ ಬೆನ್ನಿಗೆ ಕುಮಾರಸ್ವಾಮಿ ಚೂರಿ ಹಾಕಿದ್ದರು
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, “ಕುಮಾರಸ್ವಾಮಿ ಅವರು ‘3B’ ಕೆಲಸಗಳಿಗೆ ಹೆಸರುವಾಸಿಯಾದವರು. ‘ಬ್ಲಾಕ್ ಮೈಲರ್, ಬ್ಲಾಕ್ ಸ್ಟ್ಯಾಬರ್ ಮತ್ತು ಬ್ಲಾಕ್ ಮ್ಯಾಜಿಕ್’ ಮಾಡುವುದೇ ಅವರ ಮುಖ್ಯ ಕೆಲಸ” ಎಂದು ವ್ಯಂಗ್ಯವಾಡಿದ್ದಾರೆ. ಹಿಂದೆ ಯಡಿಯೂರಪ್ಪ ಮತ್ತು ಧರ್ಮಸಿಂಗ್ ಅವರಿಗೆ ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಿದ್ದರು. ಪ್ರತಿದಿನ ರಾಜಕಾರಣಿಗಳನ್ನು ಬ್ಲಾಕ್ ಮೈಲ್ ಮಾಡುವುದು, ಕಪ್ಪುಚುಕ್ಕಿ ತರುವುದು ಹಾಗೂ ಬ್ಲಾಕ್ ಮ್ಯಾಜಿಕ್ ಮಾಡಿ ಜನರನ್ನು ಮರಳು ಮಾಡುವುದನ್ನೇ ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಬರಿ ಜನರ ಹೆಸರು ಕೆಡಿಸುವುದು, ಬೆದರಿಕೆ ಹಾಕುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ ಎಂಬಂತಾಗಿದೆ. ‘ಕೆಲಸವಿಲ್ಲದ ಕುಂಬಾರ ಅದೇನೋ ಮಾಡಿದ’ ಎಂಬಂತೆ ಕುಮಾರಸ್ವಾಮಿ ಅವರ ಕಥೆಯಾಗಿದೆ ಎಂದು ಸಚಿವರು ಲೇವಡಿ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನು ಕುಮಾರಸ್ವಾಮಿ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಬಾಲಕೃಷ್ಣ ಆರೋಪಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಕ್ರಿಯವಾಗಿ ಆಡಳಿತ ನಡೆಸುತ್ತಿರುವುದರಿಂದ ಕುಮಾರಸ್ವಾಮಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಮೊದಲು ಕುಮಾರಸ್ವಾಮಿ ಅವರು ಸರಿಯಾಗಿ ನಿದ್ರೆ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲಿ, ಇಲ್ಲದಿದ್ದರೆ ಅದಕ್ಕೂ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಆರೋಪಿಸಿಬಿಡುತ್ತಾರೆ ಎಂದು ಸಚಿವರು ಚಾಟಿ ಬೀಸಿದ್ದಾರೆ.
ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾತನಾಡದ ಕುಮಾರಸ್ವಾಮಿ, ಈಗ ಡಿ.ಕೆ. ಶಿವಕುಮಾರ್ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸಹಿಸಿಕೊಳ್ಳಲಾಗದೆ ಮಾತನಾಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಏನು ಗೆಣಸು ಕೆತ್ತುತ್ತಿದ್ದರಾ ಎಂದು ಖಾರವಾಗಿ ಪ್ರಶ್ನಿಸಿದ ಸಚಿವರು, ಅವರು ಹಫ್ತಾ ವಸೂಲಿ ಗಿರಾಕಿ. ಯಾವಾಗ ಹಫ್ತಾ ವಸೂಲಿ ಮಾಡಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿಯೂ ಕೆಜಿಎಫ್ ೨, ಕೆಜಿಎಫ್ ೩ ನಂತಹ ಭಾರಿ ದಾಖಲೆಗಳಿವೆ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಹಳೆಯ ಸ್ನೇಹಕ್ಕೆ ಪ್ರಾಯಶ್ಚಿತ ಮಾಡಿಕೊಳ್ತಿದ್ದೀನಿ
ಹಸಿರು ವಲಯದ ಭೂಮಿ ವಿಚಾರವಾಗಿ ಮಾತನಾಡುವುದಾಗಿ ಹೇಳಿ, ರಾತ್ರಿ ಸೂಟ್‌ಕೇಸ್ ತಲುಪಿದ ಮೇಲೆ ಬೆಳಿಗ್ಗೆ ಮಾತು ಬದಲಾಯಿಸುವುದು ಅವರ ಹಳೆಯ ಚಾಳಿ ಎಂದು ಗಂಭೀರವಾಗಿ ಆರೋಪಿಸಿದ ಬಾಲಕೃಷ್ಣ, “ಕೇಂದ್ರ ಸಚಿವರಾಗಿರುವ ನೀವು ರಾಜ್ಯದ ರೈತರಿಗೆ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ಕೊಡಿಸಲಿ, ಇಲ್ಲವಾದರೆ ಜನ ನಿಮ್ಮ ಮುಖಕ್ಕೆ ಉಗಿಯುತ್ತಾರೆ” ಎಂದು ಕಿಡಿಕಾರಿದ್ದಾರೆ. ಚನ್ನಮ್ಮ ಅವರಿಗೆ ಐಟಿ ನೋಟಿಸ್ ಬಂದ ತಕ್ಷಣ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾಲು ಹಿಡಿದುಕೊಂಡು, ನಿಮ್ಮ ಜೊತೆಯೇ ಇರುತ್ತೇವೆ ಎಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಸಹೋದರ ಬಾಲಕೃಷ್ಣ ಗೌಡ ಅವರ ಆಸ್ತಿ ಒಂದೇ ವರ್ಷದಲ್ಲಿ ಸಾವಿರ ಕೋಟಿ ರೂಪಾಯಿಗೆ ಹೇಗೆ ಏರಿಕೆಯಾಯಿತು ಎಂಬುದರ ಕುರಿತು ಮೊದಲು ತನಿಖೆಯಾಗಲಿ ಎಂದು ಸಚಿವ ಬಾಲಕೃಷ್ಣ ಸವಾಲು ಹಾಕಿದ್ದಾರೆ.
ಈ ಹಿಂದೆ ತಾವು ಕುಮಾರಸ್ವಾಮಿ ಅವರ ಹಳೆಯ ಗೆಳೆಯರಾಗಿದ್ದು, ಈಗ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ ಸಚಿವರು, ಇಂತಹ ಬ್ಲಾಕ್ ಮೈಲರ್‌ಗಳಿಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ: ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಬೃಹತ್ ಹಗರಣ: ಅಶೋಕ್ ಖೇಣಿಯನ್ನು ಬಂಧಿಸಲು ಹೆಚ್‌ಡಿಕೆ ಆಗ್ರಹ!
