TOP NEWS

NICE Project: ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಬೃಹತ್ ಹಗರಣ: ಅಶೋಕ್ ಖೇಣಿಯನ್ನು ಬಂಧಿಸಲು ಹೆಚ್‌ಡಿಕೆ ಆಗ್ರಹ!

Dont Pay NICE Toll Union Minister HD Kumaraswamy Alleges Massive 3 Lakh Crore Irregularity in Nice Project

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE Project) ಯೋಜನೆಯಲ್ಲಿ ಮೂರು ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೃಹತ್ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾರಿ ಆಫ್ರೋಡ್ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡಿಗರ ಹಾಗೂ ರೈತರ ಫಲವತ್ತಾದ ಭೂಮಿಯನ್ನು ದುರ್ಬಳಕೆ ಮಾಡಿಕೊಂಡಿರುವ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಸಾರ್ವಜನಿಕರಿಗೆ ಕರೆ ನೀಡಿರುವ ಅವರು, “ಯಾರೂ ಕೂಡ ನೈಸ್ ರಸ್ತೆಯಲ್ಲಿ ಇನ್ಮುಂದೆ ಟೋಲ್ ಪಾವತಿಸಬೇಡಿ. ರಾಜ್ಯ ಸರ್ಕಾರ ತಕ್ಷಣವೇ ಈ ಅಕ್ರಮ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು” ಎಂದು ಪ್ರಬಲವಾಗಿ ಆಗ್ರಹಿಸಿದ್ದಾರೆ.

ಕೆರೆಗಳ ಡಿನೋಟಿಫೈ ಹಾಗೂ ಖೇಣಿ ಹೇಳಿಕೆಗೆ ಹೆಚ್‌ಡಿಕೆ ಆಕ್ರೋಶ: ನೈಸ್ ಯೋಜನೆಗಾಗಿ 2004ರಷ್ಟು ಹಿಂದೆಯೇ ಸುಮಾರು 1 ಲಕ್ಷದ 25 ಸಾವಿರ ಕೆರೆಗಳನ್ನು ಡಿನೋಟಿಫೈ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, ಈ ಪವಿತ್ರ ಜಲಮೂಲಗಳನ್ನು ಕಬಳಿಸಲು ಅಂದಿನಿಂದಲೇ ಯೋಜಿತ ಸಂಚು ನಡೆದಿತ್ತು ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಮತ್ತು ಖೇಣಿ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, “ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಖಜಾನೆ ಖಾಲಿ ಮಾಡಿಕೊಂಡಿದೆ. ನನಗೆ ನೀಡಬೇಕಾದ 2 ಲಕ್ಷ ಕೋಟಿ ರೂಪಾಯಿ ಬಾಕಿ ಹಣ ಕೊಡದಿದ್ದರೆ ವಿಧಾನಸೌಧ ಹಾಗೂ ವಿಕಾಸಸೌಧವನ್ನೇ ಬರೆದುಕೊಡಬೇಕಾಗುತ್ತದೆ ಎಂದು ಅಶೋಕ್ ಖೇಣಿ ಬಹಿರಂಗವಾಗಿ ಹೇಳುತ್ತಿದ್ದಾರೆ. ಕೇವಲ ರಸ್ತೆ ನಿರ್ಮಾಣ ಮಾಡಲು ಬಂದಿರುವ ವ್ಯಕ್ತಿಯೊಬ್ಬನಿಗೆ ಸರ್ಕಾರಕ್ಕೆ ಇಷ್ಟೊಂದು ಸವಾಲೆಸೆಯುವ ಅಹಂಕಾರ ಬರಲು ಆತನ ಹಿಂದೆ ಯಾರಿದ್ದಾರೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬಂದಿದ್ದರೆ ಕ್ಷಣದಲ್ಲಿ ಸ್ಕ್ರ್ಯಾಪ್ ಮಾಡ್ತಿದ್ದೆ: ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ 134 ಸೀಟುಗಳು ಲಭಿಸಿ ಪೂರ್ಣ ಬಹುಮತದ ಸರ್ಕಾರ ಬಂದಿದ್ದರೆ, ಚಿಟಿಕೆ ಹೊಡೆಯುವುದರೊಳಗೆ ಈ ನೈಸ್ ಯೋಜನೆಯನ್ನು ರದ್ದುಗೊಳಿಸಿ, ಅಕ್ರಮ ಎಸಗಿದವರನ್ನು ಕಂಬಿ ಎಣಿಸುವಂತೆ ಮಾಡುತ್ತಿದ್ದೆ ಎಂದು ಕುಮಾರಸ್ವಾಮಿ ತಮ್ಮ ಆಕ್ರೋಶ ಹೊರಹಾಕಿದರು. “ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಯೋಜನೆಯನ್ನು ಸ್ಕ್ರಾಪ್ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಆದರೆ ಆ ಸಮಯದಲ್ಲಿ ನನಗೆ ಬಿಜೆಪಿ ಸೇರಿದಂತೆ ಯಾವ ರಾಜಕೀಯ ಪಕ್ಷಗಳಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ” ಎಂದು ಅವರು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು. ಜಮೀನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರು ತಮ್ಮ ಬಳಿ ನೆರವು ಕೇಳಿದ್ದು, ನ್ಯಾಯಾಲಯದ ಸೂಚನೆಯಂತೆ ಕಾನೂನು ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

ಇದು ಬರಿ ಸಣ್ಣ ವಿಚಾರ, ಪಾರ್ಟ್-2, ಪಾರ್ಟ್-3 ಬರಲಿದೆ! ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ‘ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ದಾಖಲೆ ಇದೇನಾ?’ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಕುಮಾರಸ್ವಾಮಿ, “ಇದು ಕೇವಲ ಒಂದು ಸಣ್ಣ ವಿಚಾರ ಅಷ್ಟೇ. ನೈಸ್ ಅಕ್ರಮದ ಜಾಲ ಬಹಳ ದೊಡ್ಡದಾಗಿದೆ. ಇದರ ಮುಂದುವರಿದ ಭಾಗವಾಗಿ ಶೀಘ್ರದಲ್ಲೇ ಪಾರ್ಟ್ 2 ಹಾಗೂ ಪಾರ್ಟ್ 3 ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿದ್ದೇನೆ” ಎಂದು ಮುಂಬರುವ ದಿನಗಳಲ್ಲಿ ಮತ್ತಷ್ಟು ಸತ್ಯಸಂಗತಿಗಳನ್ನು ಹೊರಹಾಕುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ:  ಕೆಪಿಎಸ್‌ಸಿ ಅಕ್ರಮದಲ್ಲಿ ಐಎಎಸ್ ಅಧಿಕಾರಿಯಿಂದ ಸ್ಫೋಟಕ ಸತ್ಯಸಂಗತಿ: ಇಡಿ ಮುಂದೆ 1.7 ಕೋಟಿ ಲಂಚ ಒಪ್ಪಿಕೊಂಡ ಗ್ಯಾನೇಂದ್ರ!

Leave a Reply

Your email address will not be published. Required fields are marked *