ತುಮಕೂರು: ಜಿಲ್ಲೆಯ ಸರ್ಕಾರಿ ಶಾಲೆಯೊಂದರ ದಾಸೋಹ ಕೊಠಡಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಡುಗೆ ಸಹಾಯಕಿಯೊಬ್ಬರು (Tragedy) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ಸಂಭವಿಸಿತ್ತು. ಮೃತ ದುರ್ದೈವಿಯನ್ನು ಲತಾಮಣಿ (30) ಎಂದು ಗುರುತಿಸಲಾಗಿದೆ.
ಇದೇ ತಿಂಗಳ 24 ರಂದು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟ ಸಿದ್ಧಪಡಿಸುವ ವೇಳೆ ದಾಸೋಹ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ಅನಿರೀಕ್ಷಿತ ದುರಂತದಲ್ಲಿ ಅಡುಗೆ ಕೆಲಸದಲ್ಲಿದ್ದ ಲತಾಮಣಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ಘಟನೆ ನಡೆದ ತಕ್ಷಣವೇ ಅವರನ್ನು ಚಿಕ್ಕನಾಯಕನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಆದರೆ, ಗಾಯಗಳು ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾಮಣಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಾಲೆಯಲ್ಲೇ ನಡೆದ ಈ ದುರಂತದಿಂದಾಗಿ ಕಂದಿಕೆರೆ ಗ್ರಾಮದಲ್ಲಿ ಶೋಕಛಾಯೆ ಆವರಿಸಿದೆ.
ಚನ್ನಪಟ್ಟಣ: ಕೆಲಸದ ಸ್ಥಳದಲ್ಲಿ ತಂಟೆ, ಬಿಹಾರ ಮೂಲದ ಯುವಕನ ದಾರುಣ ಕೊಲೆ
ಬದುಕಿನ ಬಂಡಿ ಸಾಗಿಸಲು ರಾಜ್ಯಕ್ಕೆ ಬಂದು ಕೂಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ, ತನ್ನ ಸಹೋದ್ಯೋಗಿಗಳ ಜೊತೆಗಿನ ಕ್ಷುಲ್ಲಕ ಜಗಳದಿಂದಾಗಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿ ಯುವಕನನ್ನು ಬಿಹಾರ ಮೂಲದ ಅಂಕಿತ್ (24) ಎಂದು ಗುರುತಿಸಲಾಗಿದೆ. ಹೊಟ್ಟೆಪಾಡಿಗಾಗಿ ಸ್ವಂತ ಊರು ತೊರೆದು ಕರ್ನಾಟಕಕ್ಕೆ ಬಂದಿದ್ದ ಈತ, ಕೆಲಸ ಅರಸಿಕೊಂಡು ಕೇವಲ ಒಂದು ವಾರದ ಹಿಂದಷ್ಟೇ ನೆಲಮಾಕನಹಳ್ಳಿ ಗ್ರಾಮಕ್ಕೆ ಆಗಮಿಸಿ ನೆಲೆಸಿದ್ದನು. ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸಲು ಯತ್ನಿಸುತ್ತಿದ್ದ ಯುವಕನ ಬಾಳು ಆರಂಭದಲ್ಲೇ ದುರಂತದಲ್ಲಿ ಅಂತ್ಯವಾಗಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅಂಕಿತ್ ಹಾಗೂ ಆತನ ಜೊತೆಯಲ್ಲಿದ್ದ ಬಿಹಾರ ಮೂಲದ ಇತರ ಮೂವರು ಯುವಕರ ನಡುವೆ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಮಾಣದ ವಾಗ್ವಾದ ಆರಂಭವಾಗಿತ್ತು. ಆರಂಭದಲ್ಲಿ ಸಾಧಾರಣ ಜಗಳದಂತೆ ಕಂಡ ಈ ಕಿರಿಕ್, ಕ್ಷಣ ಮಾತ್ರದಲ್ಲಿ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಸಹೋದ್ಯೋಗಿಗಳು ಅಂಕಿತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಅಂಕಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚನ್ನಪಟ್ಟಣ ತಾಲೂಕಿನ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಬಂಧಿಸಲು ಜಾಲ ಬೀಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಅನ್ಯರಾಜ್ಯದಿಂದ ಬಂದು ದುಡಿಯುತ್ತಿದ್ದ ಯುವಕ ಹತ್ಯೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ತಿರುವು: ಮಾಫಿ ಸಾಕ್ಷಿ ತಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್!
