ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ‘ಫ್ಲೈದುಬೈ’ ಸಂಸ್ಥೆಯ ಎಫ್‌ಝಡ್ 1073 (FZ1073) ಪ್ರಯಾಣಿಕರ ವಿಮಾನವು ಸೌದಿ ಅರೇಬಿಯಾದ ಆಗಸದಲ್ಲಿ ಹಾರಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ತುರ್ತು ಸಂಕೇತಗಳನ್ನು ರವಾನಿಸಿ, ಸೌದಿಯ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯು ಪಶ್ಚಿಮ ಏಷ್ಯಾದಲ್ಲಿ ಕೆಲಕಾಲ ತೀವ್ರ ಆತಂಕ ಮತ್ತು ಭದ್ರತಾ ಸಂಚಲನವನ್ನು ಉಂಟುಮಾಡಿತು. ಆದರೆ, ವಿಮಾನದಲ್ಲಿದ್ದ ಸುಮಾರು 180 ಇಸ್ರೇಲಿ ಪ್ರಯಾಣಿಕರು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ (Dubai) ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಫ್ಲೈಟ್‌ಟ್ರಾಕರ್ ಡೇಟಾ ಪ್ರಕಾರ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸುಮಾರು ಎರಡುವರೆ ಗಂಟೆಗಳ ನಂತರ ಈ ಆತಂಕಕಾರಿ ಘಟನೆ ಸಂಭವಿಸಿದೆ. ಸೌದಿ ಅರೇಬಿಯಾದ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನವು ಮೊದಲು ‘7700’ ಎಂಬ ಸಾರ್ವತ್ರಿಕ ತುರ್ತು ಸಂಕೇತವನ್ನು ರವಾನಿಸಿತು. ಆದರೆ, ಕೆಲವೇ ಕ್ಷಣಗಳಲ್ಲಿ ಈ ತುರ್ತು ಸಂಕೇತವನ್ನು ಬದಲಾಯಿಸಿ, ವಿಮಾನ ಹೈಜಾಕ್ ಅಥವಾ ಅಕ್ರಮ ಹಸ್ತಕ್ಷೇಪವನ್ನು ಸೂಚಿಸುವ ‘7500’ ಎಂಬ ಅಂತರರಾಷ್ಟ್ರೀಯ ಕೋಡ್‌ಗೆ ಬದಲಾಯಿಸಲಾಯಿತು. ಹೈಜಾಕ್ ಆತಂಕದ ಸುಳಿವು ಸಿಗುತ್ತಿದ್ದಂತೆ ಇಸ್ರೇಲ್ ವಾಯುಪಡೆಯ ಯುದ್ಧ ವಿಮಾನಗಳು ತಕ್ಷಣವೇ ಆಗಸಕ್ಕೆ ಜಿಗಿದು ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸಿದವು.
ಇದೇ ವೇಳೆ, ವಿಮಾನವು ಕೇವಲ ಎರಡು ನಿಮಿಷಗಳ ಅವಧಿಯಲ್ಲಿ 34,000 ಅಡಿ ಎತ್ತರದಿಂದ ಭಾರಿ ಪ್ರಮಾಣದಲ್ಲಿ ಕೆಳಕ್ಕೆ ಇಳಿದು 16,600 ಅಡಿ ಎತ್ತರಕ್ಕೆ ಕುಸಿಯಿತು. ಈ ತೀವ್ರ ಕುಸಿತದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭೀತಿಗೊಳಗಾದರು. ವಿಮಾನದ ಮುಂಭಾಗದಲ್ಲಿದ್ದ ಪ್ರಯಾಣಿಕರು ಕಾಕ್‌ಪಿಟ್ ಒಳಗಿನಿಂದ ಗಲಾಟೆ ಮತ್ತು ಕೂಗಾಟದ ಶಬ್ದಗಳನ್ನು ಕೇಳಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂತಿಮವಾಗಿ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ನಾಗರಿಕ ಮತ್ತು ಮಿಲಿಟರಿ ತಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಸದ್ಯ ಸೌದಿ ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಇರಿಸಲಾಗಿದೆ.
ಈ ಅನಿರೀಕ್ಷಿತ ಬೆಳವಣಿಗೆಗೆ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳ ನಡುವೆ ನಡೆದ ತೀವ್ರ ಗಲಾಟೆ ಮತ್ತು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆಯೇ ಮೂಲ ಕಾರಣ ಎಂದು ಕೆಲವು ವರದಿಗಳು ಪ್ರತಿಪಾದಿಸಿವೆ. ಮಾಧ್ಯಮಗಳ ಸುಳಿವುಗಳ ಪ್ರಕಾರ, ಕಾಕ್‌ಪಿಟ್‌ನಲ್ಲಿ ಪೈಲಟ್ ಮತ್ತು ಕೋ-ಪೈಲಟ್ ನಡುವೆ ತೀವ್ರ ಘರ್ಷಣೆ ನಡೆದು, ಒಬ್ಬ ಪೈಲಟ್‌ಗೆ ಚಾಕು ಇರಿಯಲಾಗಿದೆ ಎಂಬ ವರದಿಗಳೂ ಬಂದಿವೆ. ಮತ್ತೊಂದು ವರದಿಯ ಪ್ರಕಾರ, ಪೈಲಟ್‌ಗಳಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನವನ್ನು ವೇಗವಾಗಿ ಕೆಳಕ್ಕೆ ಧುಮುಕಿಸಲು ಯತ್ನಿಸಿದಾಗ, ಇನ್ನೊಬ್ಬ ಪೈಲಟ್ ಆತನನ್ನು ತಡೆದು ವಿಮಾನದ ನಿಯಂತ್ರಣವನ್ನು ಮರಳಿ ಪಡೆದರು ಎಂದು ಹೇಳಲಾಗಿದೆ. ಆದರೆ, ಈ ಯಾವುದೇ ಆರೋಪಗಳನ್ನು ಇಸ್ರೇಲ್ ಅಥವಾ ಫ್ಲೈದುಬೈ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ.
ಪ್ರಯಾಣಿಕರನ್ನ ಕರೆದು ತರಲು ಇಸ್ರೇಲ್ ಪ್ರಯತ್ನ
ಸ್ಥಿತಿ ಗಂಭೀರವಾಗುತ್ತಿದ್ದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತುರ್ತು ಭದ್ರತಾ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ವಿಮಾನದಲ್ಲಿದ್ದ ತಮ್ಮ ದೇಶದ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಅತ್ತ, ಇಸ್ರೇಲ್ ಮಾಧ್ಯಮಗಳು ಸಹ ಇದೊಂದು ವಿಮಾನ ಅಪಹರಣದ ಯತ್ನವಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಫ್ಲೈದುಬೈ ವಕ್ತಾರರು, ವಿಮಾನವು ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಮ್ಮ ತಂಡ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಘಟನೆಯ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2020ರಲ್ಲಿ ಇಸ್ರೇಲ್ ಮತ್ತು ಯುಎಇ ನಡುವಿನ ರಾಜತಾಂತ್ರಿಕ ಬಾಂಧವ್ಯ ಸುಧಾರಿಸಿದ ನಂತರ ದುಬೈ ಹಾಗೂ ಟೆಲ್ ಅವೀವ್ ನಡುವೆ ಪ್ರತಿದಿನ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ನಡೆದ ಈ ಅಪರೂಪದ ಘಟನೆ ಈಗ ಜಾಗತಿಕ ಗಮನ ಸೆಳೆದಿದೆ.
ಇದನ್ನೂ ಓದಿ: ಟಿಎಂಸಿ ಹೆಸರು, ಚಿಹ್ನೆ ಸಮರ: 3 ತಿಂಗಳಲ್ಲಿ ವಿವಾದ ಇತ್ಯರ್ಥಪಡಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶ!
