ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಮಾಡಿದ್ದ “ಇಂಧನ ಉಳಿಸಿ ಮತ್ತು ಬಂಗಾರದ ಖರೀದಿ ಮುಂದೂಡಿ” ಎಂಬ ಮನವಿ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಡುವೆ, 1967ರ ಜೂನ್ ತಿಂಗಳ ‘ದ ಹಿಂದೂ’ ಪತ್ರಿಕೆಯ ಮುಖಪುಟದ ಚಿತ್ರವೊಂದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಚಿನ್ನ ಖರೀದಿಸಬೇಡಿ ಎಂದು ಜನರಲ್ಲಿ ಕೋರಿದ್ದರು ಎಂಬ ವರದಿಯಿದೆ.
ವೈರಲ್ ಚಿತ್ರ ಫೇಕ್, ಆದರೆ ಮಾಹಿತಿ ಸತ್ಯ!
ಈ ವೈರಲ್ ಚಿತ್ರದ ಬಗ್ಗೆ ತನಿಖೆ ನಡೆಸಿದಾಗ, ಅದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಪತ್ರಿಕೆಯ ಪುಟ ಎಂಬುದು ಬಯಲಾಗಿದೆ. ‘ದ ಹಿಂದೂ’ ಪತ್ರಿಕೆಯ ಸಂಪಾದಕ ಸುರೇಶ್ ನಂಬತ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ವರದಿ ಪ್ರಕಟವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಚಿತ್ರ ನಕಲಿಯಾಗಿದ್ದರೂ ಇತಿಹಾಸದ ಪುಟಗಳಲ್ಲಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಅಂತಹ ಮನವಿ ಮಾಡಿದ್ದು ಸತ್ಯ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಸೇರಿದಂತೆ ಹಲವರು ನೆನಪಿಸಿದ್ದಾರೆ. 1965ರ ಯುದ್ಧ ಮತ್ತು ಬರಗಾಲದ ಸಂದರ್ಭದಲ್ಲಿ ವಿದೇಶಿ ವಿನಿಮಯ ಉಳಿಸಲು ಅಂದು ಅಂತಹ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು.
ರಾಜಕೀಯ ಕೆಸರೆರಚಾಟಕ್ಕೆ ಗ್ರಾಸ
ಮೋದಿ ಅವರ ಈ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದನ್ನು “ಸರ್ಕಾರದ ಆರ್ಥಿಕ ವೈಫಲ್ಯದ ಸಂಕೇತ” ಎಂದು ಬಣ್ಣಿಸಿದ್ದರೆ, ಅರವಿಂದ್ ಕೇಜ್ರಿವಾಲ್ ಅವರು ಇದು ಆರ್ಥಿಕ ತುರ್ತುಪರಿಸ್ಥಿತಿಯ ಮುನ್ಸೂಚನೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ಇಂದಿರಾ ಗಾಂಧಿ ಮತ್ತು ನೆಹರೂ ಕಾಲದಲ್ಲಿಯೂ ಇಂತಹ ಮನವಿಗಳನ್ನು ಮಾಡಲಾಗಿತ್ತು, ಅಂದು ಸರಿ ಎನಿಸಿದ್ದು ಇಂದು ಮೋದಿ ಅವರು ಮಾಡಿದರೆ ತಪ್ಪಾಗುವುದು ಹೇಗೆ ಎಂದು ತಿರುಗೇಟು ನೀಡಿದ್ದಾರೆ.
ಅಂದಿನ ಸ್ಥಿತಿಗೂ ಇಂದಿಗೂ ವ್ಯತ್ಯಾಸವೇನು?
1967ರಲ್ಲಿ ಭಾರತದ ಆರ್ಥಿಕತೆ ತೀರಾ ಹದಗೆಟ್ಟಿತ್ತು. ಆದರೆ ಇಂದು ಭಾರತದ ಬಳಿ ಸುಮಾರು 800 ಬಿಲಿಯನ್ ಡಾಲರ್‌ನಷ್ಟು ಬೃಹತ್ ವಿದೇಶಿ ವಿನಿಮಯ ಮೀಸಲು ಇದೆ. ಹೀಗಿದ್ದರೂ ಸರ್ಕಾರ ಚಿನ್ನದ ಖರೀದಿ ಕಡಿಮೆ ಮಾಡಲು ಕೋರುತ್ತಿರುವುದಕ್ಕೆ ಮುಖ್ಯ ಕಾರಣ, ಕಳೆದ ವರ್ಷ ಚಿನ್ನದ ಆಮದು ಪ್ರಮಾಣ ಶೇಕಡಾ 24ರಷ್ಟು ಏರಿಕೆಯಾಗಿರುವುದು. ಆಮದು ಹೆಚ್ಚಾದಷ್ಟೂ ದೇಶದ ಹಣ ಹೊರಹೋಗುವುದರಿಂದ, ರೂಪಾಯಿ ಮೌಲ್ಯವನ್ನು ಸ್ಥಿರವಾಗಿಡಲು ಸರ್ಕಾರ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಮೋದಿ ಮಾತಿಗೆ ವಿಶೇಷ ರೀತಿ ಸ್ಪಂದನೆ, ಸೈಕಲ್ ಏರಿ ಬಂದ ನ್ಯಾಯಾಧೀಶರು
