ಮಧ್ಯಪ್ರದೇಶ: ಇಲ್ಲಿನ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಲ್ ಅವರು ಮಂಗಳವಾರ ಸೈಕಲ್ ತುಳಿಯುವ ಮೂಲಕ ನ್ಯಾಯಾಲಯಕ್ಕೆ (Viral) ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಇಂಧನ ಉಳಿತಾಯದ ಮನವಿಗೆ ಸ್ಪಂದಿಸಿ ನ್ಯಾಯಾಧೀಶರು ಈ ನಿರ್ಧಾರ ಕೈಗೊಂಡಿದ್ದಾರೆ. ಜಬಲ್‌ಪುರ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಹೈಕೋರ್ಟ್‌ಗೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿದರು.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸೈಕಲ್ ಸವಾರಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ನ್ಯಾಯಮೂರ್ತಿ ಬನ್ಸಲ್, ಇಂಧನ ಉಳಿಸುವ ಪ್ರಯತ್ನದಲ್ಲಿ ನ್ಯಾಯಾಧೀಶರು ಕೂಡ ಪಾಲ್ಗೊಳ್ಳಬೇಕು ಎಂಬ ಸಂದೇಶ ನೀಡಲು ತಾವು ಸೈಕಲ್ ಬಳಸಿದ್ದಾಗಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರಧಾನಿ ಮೋದಿ ಅವರು ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿಸುವಂತೆ ಜನತೆಗೆ ಮನವಿ ಮಾಡುತ್ತಿದ್ದಾರೆ. ಅವರ ಈ ಕರೆಯನ್ನು ಗೌರವಿಸಿ, ಸಾಮಾನ್ಯ ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ತಾವು ಈ ಹೆಜ್ಜೆ ಇಟ್ಟಿರುವುದಾಗಿ ಅವರು ವಿವರಿಸಿದರು. ಸಣ್ಣ ಪುಟ್ಟ ದೂರದ ಪ್ರಯಾಣಕ್ಕೆ ಸಾರ್ವಜನಿಕರು ಸೈಕಲ್ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಇದೇ ವೇಳೆ ಆಶಯ ವ್ಯಕ್ತಪಡಿಸಿದರು.
ತಮ್ಮ ದೈನಂದಿನ ಹವ್ಯಾಸದ ಬಗ್ಗೆಯೂ ಮಾಹಿತಿ ನೀಡಿದ ನ್ಯಾಯಮೂರ್ತಿಗಳು, ತಾವು ಆಗಾಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಸಚದೇವ ಅವರೊಂದಿಗೆ ಜಬಲ್‌ಪುರ ನಗರದಾದ್ಯಂತ ಸೈಕಲ್ ಸವಾರಿ ಮಾಡುವುದಾಗಿ ತಿಳಿಸಿದರು. ಸೈಕಲ್ ತುಳಿಯುವುದು ಅಷ್ಟೇನೂ ಕಷ್ಟದ ಕೆಲಸವಲ್ಲ ಮತ್ತು ನಾವು ಹೈಕೋರ್ಟ್ ನ್ಯಾಯಾಧೀಶರಾದ ತಕ್ಷಣವೇ ಯಾವುದೋ ವಿಶೇಷ ವ್ಯಕ್ತಿಗಳು ಎಂದು ಭಾವಿಸಬಾರದು, ಸಾಮಾನ್ಯ ನಾಗರಿಕ ಜವಾಬ್ದಾರಿಗಳು ನಮಗೂ ಅನ್ವಯಿಸುತ್ತವೆ ಎಂದು ಅವರು ಮಾರ್ಮಿಕವಾಗಿ ನುಡಿದರು. ನ್ಯಾಯಾಧೀಶರ ಈ ಸರಳತೆ ಮತ್ತು ದೇಶಪ್ರೇಮದ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
MP High Court judge Justice Dwarkadheesh Bansal reaches court on a bicycle after the PM’s appeal to save fuel.
— Manish RJ (@mrjethwani1) May 12, 2026
Trying hard to get a Rajya Sabha seat or may be next CJI? 🤣🤣 pic.twitter.com/FQKxGWr81g
ಇತ್ತೀಚೆಗೆ ಸಿಕಂದರಾಬಾದ್ ಮತ್ತು ವಡೋದರಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಂತರಾಷ್ಟ್ರೀಯ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದು ದೇಶದ ವಿದೇಶಿ ವಿನಿಮಯ ಮತ್ತು ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ ಎಂದು ಎಚ್ಚರಿಸಿದ್ದರು. ಹೀಗಾಗಿ ಅನಗತ್ಯ ಇಂಧನ ಬಳಕೆಯನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆ ಬಳಸಿ ಅಥವಾ ಸಣ್ಣ ದೂರದ ಪ್ರಯಾಣಕ್ಕೆ ಸೈಕಲ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಆಶ್ರಯಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ ಈ ಕರೆಗೆ ನ್ಯಾಯಾಧೀಶರೊಬ್ಬರು ಸ್ವತಃ ಮಾದರಿಯಾಗಿ ನಿಂತಿರುವುದು ಹೊಸ ಸಂಚಲನ ಮೂಡಿಸಿದೆ.
