TOP NEWS

Big News: ಪ್ರಧಾನಿ ಮೋದಿ ಭೇಟಿಯಾದ ಬೆನ್ನಲ್ಲೇ ಬಾದಲ್ ಮೇಲೆ ಮಾರಣಾಂತಿಕ ಹಲ್ಲೆ: ಮಹಾರಾಷ್ಟ್ರದಲ್ಲಿ ಭದ್ರತಾ ಲೋಪ; ದಾಳಿಕೋರ ಅರೆಸ್ಟ್!

Big news SAD President Sukhbir Singh Badal Rushed to Hospital After Sharp Edged Weapon Attack in Nanded

ನಾಂದೇಡ್: ಶಿರೋಮಣಿ ಅಕಾಲಿದಳ (SAD) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ (Big News) ಭೀಕರ ಹಲ್ಲೆ ನಡೆದಿದೆ. ಇಲ್ಲಿನ ಪ್ರಸಿದ್ಧ ಮಾತಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ತೀಕ್ಷ್ಣವಾದ ಆಯುಧದಿಂದ (ಬಹುಶಃ ತಲ್ವಾರ್ ಅಥವಾ ಕತ್ತಿ) ಬಾದಲ್ ಅವರ ಮೇಲೆ ಮುಗಿಬಿದ್ದಿದ್ದಾನೆ. ಈ ಮಾರಣಾಂತಿಕ ದಾಳಿಯಲ್ಲಿ ಸುಖ್ಬೀರ್ ಸಿಂಗ್ ಬಾದಲ್ ಅವರ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿಯ ಬೆನ್ನಲ್ಲೇ ಬಾದಲ್ ಅವರ ಎಡಗೈಗೆ ಬ್ಯಾಂಡೇಜ್ ಸುತ್ತಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭದ್ರತಾ ಅಧಿಕಾರಿಗೂ ತೀವ್ರ ಗಾಯ

ಈ ಆಕಸ್ಮಿಕ ದಾಳಿಯ ವೇಳೆ ಸುಖ್ಬೀರ್ ಸಿಂಗ್ ಬಾದಲ್ ಅವರಿಗೆ ರಕ್ಷಣೆ ನೀಡುತ್ತಿದ್ದ ಇನ್ಸ್ಪೆಕ್ಟರ್ ಸಂತೋಷ್ ಕೆಂಗ್ರೆ ಎಂಬ ಭದ್ರತಾ ಅಧಿಕಾರಿಯೂ ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಯಾರು ಮತ್ತು ಆತನ ಹಿನ್ನೆಲೆ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ, ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ತಕ್ಷಣವೇ ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಂದೇಡ್ ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾದಲ್ ಅವರ ಮೇಲೆ ಕಳೆದ ಎರಡು ವರ್ಷಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಈ ಹಿಂದೆ ಡಿಸೆಂಬರ್ 2024 ರಲ್ಲಿ ಅಮೃತಸರದ ಸುವರ್ಣ ಮಂದಿರದ ಪ್ರವೇಶ ದ್ವಾರದಲ್ಲಿ ಅವರ ಮೇಲೆ ನಾರಾಯಣ್ ಸಿಂಗ್ ಚೌರಾ ಎಂಬಾತ ಗುಂಡಿನ ದಾಳಿ ನಡೆಸಿದ್ದ. ಆ ದಾಳಿಕೋರ ದಲ್ ಖಾಲ್ಸಾ ಸಂಘಟನೆಯ ಸದಸ್ಯನಾಗಿದ್ದು, 2013 ರಲ್ಲೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ಬಂಧನಕ್ಕೊಳಗಾಗಿದ್ದ. 2007 ರ ಗುರು ಗ್ರಂಥ ಸಾಹಿಬ್ ಅಪಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನನ್ನು ಬೆಂಬಲಿಸಿದ ಆರೋಪದ ಮೇಲೆ ಅಕಲ್ ತಖ್ತ್ ಬಾದಲ್ ಅವರಿಗೆ ಧಾರ್ಮಿಕ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಆ ದಾಳಿ ನಡೆದಿತ್ತು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಿದ್ದ ಸಿಂಗ್

ವಿಶೇಷವೆಂದರೆ, ಕಳೆದ ವಾರವಷ್ಟೇ ಸುಖ್ಬೀರ್ ಸಿಂಗ್ ಬಾದಲ್ ಅವರು ದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳವು ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳ ನಡುವೆಯೇ ಈ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಧಾನಿ ಭೇಟಿಯ ಮರುದಿನವೇ ಬಾದಲ್ ಅವರು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆಯನ್ನು ದೇಶದಲ್ಲಿ ತಕ್ಷಣವೇ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಸದ್ಯ ಹಿರಿಯ ರಾಜಕಾರಣಿಯ ಮೇಲಿನ ಈ ಭದ್ರತಾ ಲೋಪ ಮತ್ತು ದಾಳಿ ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಾಡಿನ ಕತ್ತಲೆಯಿಂದ ಬಣ್ಣದ ಲೋಕದ ರ್ಯಾಂಪ್‌ಗೆ: ಗನ್ ಬಿಟ್ಟು ಕೋಸಾ ಸಿಲ್ಕ್ ಸೀರೆಯಲ್ಲಿ ಮಿಂಚಿದ ಮಾಜಿ ಮಹಿಳಾ ನಕ್ಸಲರು!

Leave a Reply

Your email address will not be published. Required fields are marked *