ಮಧ್ಯಪ್ರದೇಶ: ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಮಾಡೆಲ್ ನಿಧಿ ತಿವಾರಿ (30) ಅವರು ಶನಿವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Tragedy) ಮಾಡಿಕೊಂಡಿರುವ ಭೀಕರ ಘಟನೆ ನಡೆದಿದೆ. ವಿಂಧ್ಯ ಪ್ರದೇಶದ ಅತ್ಯಂತ ಪ್ರಸಿದ್ಧ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿದ್ದ ನಿಧಿ ಅವರ ಹಠಾತ್ ಸಾವು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಘಟನೆಯ ವಿವರ: ಶನಿವಾರ ಸಾಯಂಕಾಲ ಭುಸಾ ಮೋಡ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧಿ ತಿವಾರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಿಧಿ ಅವರು ಫೇಸ್‌ಬುಕ್‌ನಲ್ಲಿ ಸುಮಾರು 9 ಲಕ್ಷ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಅವರು ಹಂಚಿಕೊಳ್ಳುತ್ತಿದ್ದ ವಿಡಿಯೋಗಳು ಮತ್ತು ಪೋಸ್ಟ್‌ಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದು, ಯುವಜನತೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು.
2024ರಲ್ಲಿ ‘ಮಿಸ್ ಪ್ರಿಟಿ ಇಂಡಿಯಾ’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ನಿಧಿ, ಮಾಡೆಲಿಂಗ್ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದರು. ಚಿತ್ರರಂಗದಲ್ಲಿ ಉತ್ತಮ ನಟಿಯಾಗಬೇಕೆಂಬ ದೊಡ್ಡ ಕನಸನ್ನು ಹೊಂದಿದ್ದ ಅವರು, ವಿವಿಧ ಮಾಡೆಲಿಂಗ್ ಶೋಗಳು, ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಕಂಟೆಂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ನಿರ್ಮಿಸಿಕೊಂಡಿದ್ದರು.
ಕಂಬನಿ ಮಿಡಿದ ಅಭಿಮಾನಿಗಳು
ಘಟನೆಯ ಸಮಯದಲ್ಲಿ ನಿಧಿ ಅವರು ಮೊಬೈಲ್ ಫೋನ್‌ನಲ್ಲಿ ಯಾರೊಂದಿಗೋ ಸುದೀರ್ಘವಾಗಿ ಮಾತನಾಡುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆ ಸಂಭಾಷಣೆಯ ನಂತರವೇ ಈ ಕೆಟ್ಟ ಘಟನೆ ಸಂಭವಿಸಿದೆ ಎಂದು ಅವರು ಶಂಕಿಸಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಮೋರ್ವಾ ಪೊಲೀಸ್ ಠಾಣೆಯ ಉಸ್ತುವಾರಿ ಡಾ. ಜ್ಞಾನೇಂದ್ರ ಸಿಂಗ್ ಅವರು, “ನಿಧಿ ಅವರ ಕಾಲ್ ರೆಕಾರ್ಡ್ಸ್, ಡಿಜಿಟಲ್ ಚಟುವಟಿಕೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ. ಪೊಲೀಸರು ನಿಧಿ ಅವರ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ನಿಧಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀಮಂತ ಯುವಕನ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿಗಳ ಬಂಧನ!
